ಶುಕ್ರವಾರ, ನವೆಂಬರ್ 15, 2019
24 °C
ಕೇಂದ್ರ ಜಲ ಆಯೋಗದ ಆತಂಕ

ರಾಜ್ಯದ ಬಹುತೇಕ ಜಲಾಶಯ ಬರಿದು

Published:
Updated:

ನವದೆಹಲಿ: ಕಳೆದ ವರ್ಷ ಮುಂಗಾರು ಕೈಕೊಟ್ಟಿದ್ದರಿಂದ ಕರ್ನಾಟಕದ ಕಾವೇರಿ, ಕೃಷ್ಣಾ ಕಣಿವೆಯ ಜಲಾಶಯಗಳು ಸೇರಿದಂತೆ ದೇಶದ ಬಹುತೇಕ ಜಲಾಶಯಗಳು ಬರಿದಾಗಿವೆ.ಕಾವೇರಿ ಕಣಿವೆಯ ಎಲ್ಲ ಜಲಾಶಯಗಳ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 818 ಕೋಟಿ ಘನ ಮೀಟರ್‌ಗಳು. ಆದರೆ ಈಗ 39.6 ಕೋಟಿ ಘನ ಮೀಟರ್ ನೀರಿನ ಸಂಗ್ರಹ ಮಾತ್ರ ಇದೆ ಎಂದು ದೇಶದ ಪ್ರಮುಖ 84 ಜಲಾಶಯಗಳ ನೀರಿನ ಮಟ್ಟದ ಮೇಲ್ವಿಚಾರಣೆ ನಡೆಸುತ್ತಿರುವ ಕೇಂದ್ರ ಜಲ ಆಯೋಗದ ವರದಿ ತಿಳಿಸಿದೆ.ಕಳೆದ 10 ವರ್ಷಗಳಿಗೆ ಹೋಲಿಸಿದಾಗ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಬಳಸಬಹುದಾದ ನೀರಿನ ಸಂಗ್ರಹವು ಶೇಕಡಾ 85ರಷ್ಟು ಕುಸಿದಿದೆ.

ಜಲಾಶಯಗಳು ಬರಿದಾಗುತ್ತಿರುವುದರಿಂದ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ, ನೀರಾವರಿಗೆ ನಿಯಂತ್ರಿತ ಪ್ರಮಾಣದಲ್ಲಿ ನೀರು ಬಿಡಬೇಕು ಎಂದು ಆಯೋಗವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳಲ್ಲಿ ಬಳಕೆಗೆ ಲಭ್ಯವಿರುವ ನೀರಿನ ಮಟ್ಟ ಶೂನ್ಯ ಅಡಿಗೆ ಕುಸಿದಿದೆ. ಆದರೆ ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಕ್ರಮವಾಗಿ 1.1 ಹಾಗೂ 2.6 ಕೋಟಿ ಘನ ಮೀಟರ್ ಮಾತ್ರ ನೀರಿದೆ.ಕಾವೇರಿ ಕಣಿವೆಯ 14 ಜಲಾಶಯಗಳಲ್ಲಿ ಪ್ರಸಕ್ತ ಬಳಸಬಹುದಾದ ನೀರಿನ ಪ್ರಮಾಣ 406 ಕೋಟಿ ಘನ ಮೀಟರ್. ಆದರೆ, ಈ ಜಲಾಶಯಗಳ ಸಂಗ್ರಹಣಾ ಸಾಮರ್ಥ್ಯ 2332 ಕೋಟಿ ಘನ ಮೀಟರ್ ಎಂದು ಏ.11ಕ್ಕೆ ಅಂತ್ಯಗೊಂಡ ವಾರದ ವರದಿಯಲ್ಲಿ ತಿಳಿಸಲಾಗಿದೆ.ಬರಿದಾಗುತ್ತಿರುವ ರಾಜ್ಯದ ಇತರ ಪ್ರಮುಖ ಜಲಾಶಯಗಳೆಂದರೆ ಮಲಪ್ರಭಾ, ತುಂಗಭದ್ರಾ, ವಾಣಿವಿಲಾಸ ಸಾಗರ ಮತ್ತು ಶರಾವತಿ ಜಲಾನಯನ ಪ್ರದೇಶಕ್ಕೆ ಸೇರಿದ ಗೇರುಸೊಪ್ಪ.ಕೃಷ್ಣಾ ಕೊಳ್ಳದ ಜಲಾಶಯಗಳೂ ಬತ್ತುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ನೈರುತ್ಯ ಮುಂಗಾರು ಮಳೆ ಉತ್ತಮವಾದರೆ ಬರದಿಂದ ತತ್ತರಿಸುತ್ತಿರುವ ಕರ್ನಾಟಕ ಸೇರಿ 4 ರಾಜ್ಯಗಳ ಸ್ಥಿತಿ ಸುಧಾರಿಸಬಹುದು ಎಂದು ಹೇಳಿದೆ.ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಮತ್ತು ಮೇವಿಗೆ ಹಾಹಾಕಾರ ಎದ್ದಿದೆ.

ಕೃಷಿ ಸಚಿವ ಶರದ್ ಪವಾರ್ ಅವರು ಗುರುವಾರ ಹವಾಮಾನ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಈ ಬಾರಿ ನೈರುತ್ಯ ಮುಂಗಾರು ಮಳೆ ವಾಡಿಕೆಯಂತೆ ಬೀಳಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ದೇಶದ ಒಟ್ಟು ಕೃಷಿ ಭೂಮಿಯ ಶೇಕಡಾ 40ರಷ್ಟು ಪ್ರದೇಶಗಳಿಗೆ ಮಾತ್ರ ನೀರಾವರಿ ಸೌಲಭ್ಯವಿದ್ದು, ಉಳಿದ ಪ್ರದೇಶಗಳು ಮಳೆಯನ್ನೇ ಅವಲಂಬಿಸಿವೆ ಎಂಬುದನ್ನು ವರದಿ ಉಲ್ಲೇಖಿಸಿದೆ.

ಪ್ರತಿಕ್ರಿಯಿಸಿ (+)