ರಾಜ್ಯದ ರೈಲ್ವೆ ಯೋಜನೆ: ಜಂಟಿ ಸದನ ಸಮಿತಿ ಚರ್ಚೆ

7

ರಾಜ್ಯದ ರೈಲ್ವೆ ಯೋಜನೆ: ಜಂಟಿ ಸದನ ಸಮಿತಿ ಚರ್ಚೆ

Published:
Updated:

ಬೆಂಗಳೂರು: ರಾಜ್ಯದ ರೈಲ್ವೆ ಯೋಜನೆಗಳ ಉಸ್ತುವಾರಿ ಸಲುವಾಗಿ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಧ್ಯಕ್ಷತೆಯಲ್ಲಿ ಜಂಟಿ ಸದನ ಸಮಿತಿ ರಚಿಸಿದ್ದು, ಅದು ಯೋಜನೆಗಳ ಅನುಷ್ಠಾನ ಕುರಿತು ಚರ್ಚೆ ನಡೆಸಿತು. ಸದ್ಯದಲ್ಲೇ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ರಾಜ್ಯದ ಬಾಕಿ ಯೋಜನೆಗಳಿಗೆ ಈ ವರ್ಷದ ಬಜೆಟ್‌ನಲ್ಲಿ ಹೆಚ್ಚಿನ ಹಣ ಒದಗಿಸುವಂತೆ ಕೋರಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಶಂಕರಮೂರ್ತಿ ಗುರುವಾರ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.ರಾಜ್ಯದ 176 ತಾಲ್ಲೂಕುಗಳ ಪೈಕಿ  82 ತಾಲ್ಲೂಕುಗಳಿಗೆ ಮಾತ್ರ ರೈಲ್ವೆ ಸಂಪರ್ಕ ಇದೆ.ಉಳಿದಂತೆ ಶೇ 50ರಷ್ಟು ತಾಲ್ಲೂಕುಗಳಲ್ಲಿ ರೈಲ್ವೆ ಸಂಪರ್ಕ ಇಲ್ಲ. ಹೀಗಾಗಿ ಹೆಚ್ಚಿನ ಹಣ ನೀಡುವುದರ ಮೂಲಕ ಬಾಕಿ ಯೋಜನೆಗಳ ಜಾರಿಗೆ ನೆರವಾಗಬೇಕೆಂದು ಕೋರಲಾಗುವುದು. ರಾಜ್ಯ ಸರ್ಕಾರ ಈ ವರ್ಷ ರೂ 600 ಕೋಟಿ ನೀಡಲಿದೆ. ಅಷ್ಟೇ ಹಣವನ್ನು ರೈಲ್ವೆ ನಿಗಮವೂ  ನೀಡಲಿ ಎನ್ನುವ ಸಲಹೆಯನ್ನೂ ನೀಡಿದ್ದು, ಆ ಬಗ್ಗೆ ಚರ್ಚಿಸಲಾಗುವುದು ಎಂದರು.ಸದನ ಸಮಿತಿಯು ಹಳೇ ಯೋಜನೆಗಳು ಮತ್ತು ಹೊಸ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿತು. ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ವರ್ತುಲ ರೈಲ್ವೆ ಯೋಜನೆ ಸೇರಿ ಇತರ ಯೋಜನೆಗಳ ಅನುಷ್ಠಾನಕ್ಕೆ ಒಪ್ಪಿಗೆ ನೀಡಬೇಕೆಂದು ಒತ್ತಾಯಿಸಲು ನಿರ್ಧರಿಸಲಾಯಿತು. ಬಂದರುಗಳ ಸಂಪರ್ಕಕ್ಕೆ ಅನುಕೂಲ ಆಗಲಿ ಎಂದು ಹುಬ್ಬಳ್ಳಿ-ಅಂಕೋಲ, ತಾಳಗುಪ್ಪ- ಹೊನ್ನಾವರ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಕೋರಲಾಗುವುದು.ಇದಲ್ಲದೆ, ಗದಗ-ಹಾವೇರಿ, ಹರಿಹರ- ಶಿವಮೊಗ್ಗ ಸೇರಿದಂತೆ ಉಕ್ಕು ಮತ್ತು ಸಿಮೆಂಟ್ ವಲಯಗಳಿಗೆ ಸಂಪರ್ಕ ಕಲ್ಪಿಸಲು ರೈಲ್ವೆ ಯೋಜನೆ ರೂಪಿಸುವಂತೆಯೂ ಒತ್ತಾಯಿಸಲಾಗುವುದು ಎಂದರು. ಮೂಲಸೌಕರ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಮಧು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry