ರಾಜ್ಯದ ವಾದ- ತಮಿಳುನಾಡು, ಕೇಂದ್ರ ಮೌನ

7

ರಾಜ್ಯದ ವಾದ- ತಮಿಳುನಾಡು, ಕೇಂದ್ರ ಮೌನ

Published:
Updated:

ನವದೆಹಲಿ: `ಕಾವೇರಿ ನದಿಯಿಂದ ತಮಿಳುನಾಡಿಗೆ ಇನ್ನು ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ~ ಎಂದು ಕರ್ನಾಟಕ ಸೋಮವಾರ ಸುಪ್ರೀಂಕೋರ್ಟ್‌ಗೆ ಖಡಾಖಂಡಿತವಾಗಿ ತಿಳಿಸಿತು.ನ್ಯಾ.ಡಿ.ಕೆ.ಜೈನ್ ಮತ್ತು ನ್ಯಾ. ಮದನ್ ಬಿ.ಲೋಕೂರ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಹಿರಿಯ ವಕೀಲ ಎಫ್.ಎಸ್. ನಾರಿಮನ್, `ತಮಿಳುನಾಡಿಗೆ ಇನ್ನು ನೀರು ಹರಿಸಲು ಸಾಧ್ಯವೇ ಇಲ್ಲ~ ಎಂದು ಕೈಚೆಲ್ಲಿದರು.ಈಗಾಗಲೇ 13 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಹರಿದು ಹೋಗಿದ್ದು, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸಂಗ್ರಹ ಕಡಿಮೆ ಆಗುತ್ತಿದೆ ಎಂದು  ಸ್ಪಷ್ಟಪಡಿಸಿದರು. ಅವರ ಈ ವಾದಕ್ಕೆ ತಮಿಳುನಾಡಾಗಲೀ ಅಥವಾ ಕೇಂದ್ರವಾಗಲೀ ಯಾವುದೇ ತಕರಾರು ಎತ್ತಲಿಲ್ಲ.  ಈ ಹಿನ್ನೆಲೆಯಲ್ಲಿ  ರಾತ್ರಿ ಕಾವೇರಿ ಕೊಳ್ಳದ ಜಲಾಶಯಗಳ ಗೇಟುಗಳನ್ನು ಬಂದ್ ಮಾಡಲಾಯಿತು ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ತಮಿಳುನಾಡಿಗೆ ಸೆ. 20ರಿಂದ ಅ.15ರವರೆಗೆ ನಿತ್ಯ 9000 ಕ್ಯೂಸೆಕ್ ನೀರು ಬಿಡಬೇಕೆಂಬ ನಿರ್ದೇಶನ ಪುನರ್‌ಪರಿಶೀಲನೆ ಕೋರಿ ಪ್ರಧಾನಿ ನೇತೃತ್ವದ `ಕಾವೇರಿ ನದಿ ಪ್ರಾಧಿಕಾರ~ದ (ಸಿಆರ್‌ಎ) ಮುಂದೆ ಕರ್ನಾಟಕ ಸಲ್ಲಿಸಿರುವ ಅರ್ಜಿ ಮೇಲೆ ಕೈಗೊಳ್ಳುವ ನಿರ್ಣಯಕ್ಕೆ ತನ್ನ ಸೆ.28ರ ಆದೇಶ ಅಡ್ಡಿ ಬರುವುದಿಲ್ಲವೆಂದು ಪೀಠ  ಸ್ಪಷ್ಟಪಡಿಸಿತು. ಸಿಆರ್‌ಎ ನಿರ್ದೇಶನ ಪಾಲಿಸುವಂತೆ ಕೋರ್ಟ್ ಸೆ. 28ರಂದು ಕರ್ನಾಟಕಕ್ಕೆ ತಾಕೀತು ಮಾಡಿತ್ತು.ಈ ನಿರ್ದೇಶನ ಪಾಲಿಸುವಂತೆ ನೀಡಿರುವ ಆದೇಶ ತಡೆ ಹಿಡಿಯಬೇಕು ಇಲ್ಲವೆ ಮಾರ್ಪಾಡು ಮಾಡಬೇಕೆಂಬ ಕರ್ನಾಟಕದ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಕರ್ನಾಟಕದ ಪುನರ್ ಪರಿಶೀಲನಾ ಅರ್ಜಿ ಮೇಲೆ ತೀರ್ಮಾನ ಕೈಗೊಳ್ಳಲು ಪ್ರಧಾನಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿತು.ನಾರಿಮನ್ ಮನವಿಯಂತೆ ಕರ್ನಾಟಕದ ಅರ್ಜಿಯ ವಿಚಾರಣೆಯನ್ನು ಅ.12ಕ್ಕೆ ಮುಂದೂಡಿತು. ಈ ಅರ್ಜಿಗೆ ಎರಡು ದಿನದೊಳಗೆ ಆಕ್ಷೇಪಣೆ ಸಲ್ಲಿಸಲು ತಮಿಳುನಾಡಿಗೆ ಅನುಮತಿ ನೀಡಿತು.ಚಳವಳಿಗೆ ಅಸಮಾಧಾನ:  ಕರ್ನಾಟಕದ ಅರ್ಜಿ ವಿಚಾರಣೆ ವೇಳೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ಪ್ರತಿಭಟಿಸಿ ನಡೆಸುತ್ತಿರುವ ಚಳವಳಿ ಕುರಿತು ಸುಪ್ರೀಂ ಕೋರ್ಟ್ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry