ಗುರುವಾರ , ಏಪ್ರಿಲ್ 22, 2021
25 °C

ರಾಜ್ಯದ ವಿವಿಧೆಡೆ ಕಳವು: ಹತ್ತು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮಿಳು ಚಿತ್ರ ನಿರ್ಮಾಪಕ ಪುರುಷೋತ್ತಮ್ ಅವರ ಮನೆಯಲ್ಲಿ ಕಳವು ಮಾಡಿದ್ದ ಆರೋಪಿ ಸೇರಿದಂತೆ, ರಾಜ್ಯದ ಹಲವೆಡೆ ಕಳವು ಮಾಡುತ್ತಿದ್ದ ಹತ್ತು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.`ನಗರದ ನಿವಾಸಿಗಳಾದ ಇಮ್ರೋನ್ ಖಾನ್ (22), ರಿಜ್ವಾನ್ ಬೇಗ್ (24), ಸೈಯದ್ ಫಯಾಜ್ (30), ಶಕೀಲ್ ಅಹಮದ್ (31), ಕೋಲಾರದ ಸಂತೋಷ್ (29), ಅಜ್ಜು ಅಲಿಯಾಸ್ ಜ್ಞಾನಪ್ರಕಾಶ್ (35), ಮುನಿಯಪ್ಪ (45), ಮುನಿರಾಜು (38) ರಾಮನಗರದ ರುದ್ರೇಶ (37) ಮತ್ತು ಚೆನ್ನೈನ ಇಂತಿಯಾಜ್ ಎಂಬುವರನ್ನು ಬಂಧಿಸಿ ಸುಮಾರು 45 ಲಕ್ಷ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ~ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದ್ದಾರೆ.ಕೆ.ಆರ್.ಪುರದಲ್ಲಿ ವಾಸವಿರುವ ನಿರ್ಮಾಪಕ ಪುರುಷೋತ್ತಮ್ ಮನೆಯಲ್ಲಿ ಅಕ್ಟೋಬರ್ 9ರಂದು ಹದಿನೈದು ಲಕ್ಷ ರೂಪಾಯಿ ಕಳವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು. ಕಳ್ಳತನ ನಡೆದ ದಿನ ಪುರುಷೋತ್ತಮ್ ಅವರ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸಂತೋಷ್ ಎಂಬಾತನನ್ನು ವಶಕ್ಕೆ ಪಡೆದಾಗ, ಆತನ ಬಳಿ ಮೂರು ಮೊಬೈಲ್‌ಗಳು ಸಿಕ್ಕವು. ಅವು ಪುರುಷೋತ್ತಮ್ ಅವರಿಗೆ ಸೇರಿದ ಮೊಬೈಲ್‌ಗಳಾಗಿದ್ದವು.ಈ ಬಗ್ಗೆ ವಿಚಾರಣೆ ನಡೆಸಿದಾಗ ಅಜ್ಜು ಅಲಿಯಾಸ್ ಜ್ಞಾನಪ್ರಕಾಶ್ ಆ ಮೊಬೈಲ್‌ಗಳನ್ನು ಸಂತೋಷ್‌ಗೆ ಮಾರಾಟ ಮಾಡಿದ್ದ ಎಂಬುದು ತಿಳಿಯಿತು. ಅಜ್ಜುನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣಬೆಳಕಿಗೆ ಬಂತು ಎಂದು ದಯಾನಂದ ಹೇಳಿದರು.ರಾಜ್ಯದ ಹಲವೆಡೆ ಕಳವು ಮಾಡಿದ್ದ ಉಳಿದ ಬಂಧಿತರ ವಿರುದ್ಧ ನಗರದ ಸುಬ್ರಹ್ಮಣ್ಯಪುರ, ಕೆ.ಆರ್.ಪುರ, ಕಾಟನ್‌ಪೇಟೆ, ಹಲಸೂರು, ಯಲಹಂಕ ಉಪ ನಗರ ಸೇರಿದಂತೆ ನಗರದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಗೋದಾಮಿಗೆ ಬೆಂಕಿ

ಪ್ಲಾಸ್ಟಿಕ್‌ನ ಅಲಂಕಾರಿಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದ್ದ ಘಟನೆ ಹಳೇ ತರಗುಪೇಟೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಹಳೇ ತರಗುಪೇಟೆಯ ಬಾಬು ಎಂಬುವರಿಗೆ ಸೇರಿದ ಗೋದಾಮಿನ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದು ಹನ್ನೊಂದು ವಾಹನಗಳಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಗೋದಾಮಿನ ಕೊಠಡಿಯಲ್ಲಿ ಪ್ಲಾಸ್ಟಿಕ್‌ನ ಹೂವುಗಳು ಮತ್ತಿತರ ಅಲಂಕಾರಿಕ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿರಬಹುದು ಎಂದು ಅಗ್ನಿಶಾಮಕ ಸಿಬ್ಬಂದಿ ಶಂಕಿಸಿದ್ದಾರೆ.ಬೆಂಕಿ ಅನಾಹುತದಿಂದ ಎಷ್ಟು ಹಾನಿಯಾಗಿದೆ ಎಂಬುದು ತಿಳಿದಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಯುವಕ ಕೊಲೆ

ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಬಜಾರ್ ಸ್ಟ್ರೀಟ್‌ನಲ್ಲಿ ಮಂಗಳವಾರ ನಡೆದಿದೆ.ತಮಿಳುನಾಡು ಮೂಲದ ಕಣ್ಣನ್ (21) ಕೊಲೆಯಾದ ಯುವಕ. ಆತನ ಪೋಷಕರು ಆಡುಗೋಡಿ ಸಮೀಪದ ಲಕ್ಷ್ಮಣರಾಮನಗರದಲ್ಲಿ ವಾಸವಾಗಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಆತ, ಪೋಷಕರನ್ನು ನೋಡುವ ಸಲುವಾಗಿ ಮಂಗಳವಾರ ನಗರಕ್ಕೆ ಬಂದಿದ್ದ. ಸಂಜೆ ಐದು ಗಂಟೆ ಸುಮಾರಿಗೆ ಬಜಾರ್‌ಸ್ಟ್ರೀಟ್‌ಗೆ ಬಂದಿದ್ದ ಕಣ್ಣನ್‌ಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕಣ್ಣನ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರೈಲಿನಲ್ಲಿ ಪಟಾಕಿ ಸಾಗಣೆ: ಬಂಧನ

ಬೆಂಗಳೂರು: ರೈಲುಗಳಲ್ಲಿ ಪಟಾಕಿ ಸಾಗಾಟ ಮಾಡುತ್ತಿದ್ದ 17 ಜನರನ್ನು ರೈಲ್ವೆ ಸುರಕ್ಷಾ ಪಡೆ (ಆರ್‌ಪಿಎಫ್) ಪೊಲೀಸರು ಬಂಧಿಸಿದ್ದಾರೆ.ಯಶವಂತಪುರ ನಿಲ್ದಾಣದಲ್ಲಿ 14 ಜನ ಮತ್ತು ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ಒಬ್ಬರು ರೈಲಿನಲ್ಲಿ ಪಟಾಕಿ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ.ಧರ್ಮಪುರಿ ನಿಲ್ದಾಣದಲ್ಲೂ ಇಬ್ಬರನ್ನು ಬಂಧಿಸಲಾಗಿದೆ. ಎಲ್ಲ ಬಂಧಿತರ ವಿರುದ್ಧ ಸ್ಫೋಟಕ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.