ಬುಧವಾರ, ನವೆಂಬರ್ 13, 2019
18 °C

ರಾಜ್ಯದ ಸಚಿವ, ಸಂಸದರ ಗಣಿಗಳಿಗೂ ಕುತ್ತು

Published:
Updated:

ನವದೆಹಲಿ: ಅಕ್ರಮ ಗಣಿಗಾರಿಕೆ ನಡೆಸಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಗುರುವಾರ ರದ್ದುಪಡಿಸಿದ ಗಣಿ ಗುತ್ತಿಗೆಯಲ್ಲಿ ರಾಜ್ಯದ ಸಚಿವರು, ಸಂಸದರು, ಪ್ರಭಾವಿ ನಾಯಕರು ಹಾಗೂ ಅವರ ಹತ್ತಿರದ ಸಂಬಂಧಿಕರ ಗಣಿ ಕಂಪೆನಿಗಳೂ ಸೇರಿವೆ.ಸಚಿವರಾದ ಆನಂದ ಸಿಂಗ್ ಒಡೆತನದ ಶ್ರೀ ಬಾಲಾಜಿ ಮಿನರಲ್ಸ್, ವಿ. ಸೋಮಣ್ಣ ಅವರಿಗೆ ಸೇರಿದ `ಮಾತಾ ಮಿನರಲ್ಸ್' ಸಂಸದ ಅನಿಲ್ ಲಾಡ್ ಮತ್ತು ಶಾಸಕ ಸಂತೋಷ್ ಲಾಡ್ ಅವರಿಗೆ ಸೇರಿದ `ವಿಎಸ್ ಲಾಡ್ ಅಂಡ್ ಸನ್ಸ್' ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧಿತರಾಗಿ ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮೀ ಮಾಲೀಕತ್ವದ `ಅಸೋಸಿಯೇಟ್ ಮೈನಿಂಗ್ ಕಂಪೆನಿ' ಹಾಗೂ `ಡೆಕ್ಕನ್ ಮೈನಿಂಗ್ ಸಿಂಡಿಕೇಟ್' ಸ್ಥಾನ ಪಡೆದಿವೆ.ಪರಿಸರ ಮತ್ತು ಬೊಕ್ಕಸಕ್ಕೆ ಭಾರಿ ನಷ್ಟ ಉಂಟುಮಾಡಿರುವ `ಅಕ್ರಮ ಗಣಿಗಾರಿಕೆ ಕಳಂಕ' ಆಡಳಿತ ಮತ್ತು ಪ್ರಮುಖ ವಿರೋಧ ಪಕ್ಷಗಳೆರಡಕ್ಕೂ ಮೆತ್ತಿದೆ. ಇದರಿಂದಾಗಿ ಸುಮಾರು 49 ಗಣಿ ಗುತ್ತಿಗೆಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.  ಹೊಸಪೇಟೆ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ  ಸ್ಪರ್ಧಿಸಿರುವ ಅಬ್ದುಲ್ ವಹಾಬ್ ಅವರಿಗೆ ಸೇರಿದ `ಹೋತೂರ್ ಟ್ರೇಡರ್ಸ್‌', ಮಾಜಿ ಸಚಿವ ಅಲ್ಲಂ ವೀರಭದ್ರಪ್ಪನವರ ಕಂಪೆನಿ, ಮಾಜಿ ಶಾಸಕ ಗವಿಯಪ್ಪ ಅವರಿಗೆ ಸೇರಿದ ಎಚ್.ಜಿ.ರಂಗನಗೌಡ ಅವರ ಕಂಪೆನಿಗಳ ಗಣಿ ಗುತ್ತಿಗೆಗಳೂ ರದ್ದಾಗಿವೆ.ಎಸ್.ಬಿ. ಮಿನರಲ್ಸ್, ಕಮಲಾಬಾಯಿ, ತುಂಗಭದ್ರ ಮಿನೆರಲ್ಸ್ ಹಾಗೂ ಟ್ರಿಡೆಂಟ್ ಕಂಪೆನಿಗಳ ತಲಾ ಎರಡು ಗಣಿ ಗುತ್ತಿಗೆಗಳು ಸಿ ವರ್ಗದಡಿ ರದ್ದಾಗಿವೆ. ಅಚ್ಚರಿಯ ಸಂಗತಿ ಎಂದರೆ ಸರ್ಕಾರಿ ಸ್ವಾಮ್ಯದ `ಮೈಸೂರು ಮಿನರಲ್ಸ್ ಲಿ'. ಕಂಪೆನಿಯೂ ಅಕ್ರಮ ಗಣಿಗಾರಿಕೆ ಉರುಳಿಗೆ ಕೊರಳೊಡ್ಡಿದ್ದು, ಗಣಿ ಗುತ್ತಿಗೆ ಕಳೆದುಕೊಂಡಿದೆ.`ಕೇಂದ್ರ ಉನ್ನತಾಧಿಕಾರ ಸಮಿತಿ' (ಸಿಇಸಿ) ಪ್ರತಿನಿಧಿಗಳು ಹಾಗೂ ಸಂಬಂಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ಕಾರ್ಯಪಡೆ, ಗಣಿ ಕಂಪೆನಿಗಳು ನಡೆಸಿರುವ ಅಕ್ರಮದ ಪ್ರಮಾಣವನ್ನು ಆಧರಿಸಿ ಗಣಿ ಗುತ್ತಿಗೆಗಳನ್ನು ಎ, ಬಿ, ಮತ್ತು ಸಿ ಎಂದು ವರ್ಗೀಕರಿಸಿದೆ. ಎ ವರ್ಗದಲ್ಲಿ 27, ಬಿ ವರ್ಗದಲ್ಲಿ 63 ಹಾಗೂ ಸಿ ವರ್ಗದಲ್ಲಿ 49 ಕಂಪೆನಿಗಳನ್ನು ಪಟ್ಟಿ ಮಾಡಲಾಗಿದೆ.ಸಣ್ಣಪುಟ್ಟ ಅಕ್ರಮಗಳನ್ನು ಎಸಗಿರುವ ಗಣಿ ಗುತ್ತಿಗೆಗಳನ್ನು ಎ ವರ್ಗದಲ್ಲಿ ಪಟ್ಟಿ ಮಾಡಲಾಗಿದೆ. ಗುತ್ತಿಗೆ ಪ್ರದೇಶದಾಚೆಗೆ ಅದಿರು ಸುರಿಯಲು ಶೇ.10ರಷ್ಟು ಪ್ರದೇಶ ಅತಿಕ್ರಮಣ ಮಾಡಿರುವ ಕಂಪೆನಿಗಳನ್ನು ಬಿ ವರ್ಗಕ್ಕೆ ಸೇರಿಸಲಾಗಿದ್ದು, ದಂಡ ಮತ್ತಿತರ ಕಟ್ಟುನಿಟ್ಟಿನ ಷರತ್ತಿನ ಮೇಲೆ ಗಣಿಗಾರಿಕೆ ಪುನರಾರಂಭಕ್ಕೆ ಒಪ್ಪಿಗೆ ನೀಡಲಾಗಿದೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಸಿ ಗುಂಪಿನಲ್ಲಿ ಗುತ್ತಿಗೆ ಕಳೆದುಕೊಂಡಿರುವ ಕೆಲವು ಕಂಪೆನಿಗಳು ಎ ಮತ್ತು ಬಿ ವರ್ಗದಲ್ಲೂ ಗಣಿಗಾರಿಕೆ ನಡೆಸುತ್ತಿವೆ.ಸಿ ವರ್ಗದಲ್ಲಿ ಅಲ್ಲಂ ವೀರಭದ್ರಪ್ಪ ಅವರ ಗುತ್ತಿಗೆ ರದ್ದಾಗಿದೆ. ಆದರೆ, ಇವರ ಪುತ್ರ ಅಲ್ಲಂ ಪ್ರಶಾಂತ್ ಎ ವರ್ಗದಡಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದೇ ಸಿ ಗುಂಪಿನಲ್ಲಿ ಗುತ್ತಿಗೆ ಕಳೆದುಕೊಂಡಿರುವ ಕರ್ನಾಟಕ ಲಿಂಪೊ ಎ ಗುಂಪಿನಲ್ಲೂ ಗುತ್ತಿಗೆ ಪರವಾನಗಿ ಹೊಂದಿದೆ. ಆನಂದ್‌ಸಿಂಗ್ ಅವರ ಎಸ್.ಬಿ. ಮಿನರಲ್ಸ್ ಎ ವರ್ಗದಲ್ಲೂ ಗಣಿಗಾರಿಕೆ ನಡೆಸುತ್ತಿದೆ.ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಬಿ ಗುಂಪಿನಡಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಗವಿಯಪ್ಪ ಅವರ ತಂದೆ ಎಚ್.ಜಿ ರಂಗೇಗೌಡರ ಗುತ್ತಿಗೆ ಸಿ ಗುಂಪಿನಲ್ಲಿ ರದ್ದಾಗಿದೆ. ಕೆನರಾ ಮತ್ತು ತುಂಗಭದ್ರ ಮಿನರಲ್ಸ್ ಕಂಪೆನಿಗಳು ಬೇರೆ ಗುಂಪಿನಡಿ ಗಣಿಗಾರಿಕೆ ಚಟುವಟಿಕೆ ನಡೆಸುತ್ತಿವೆ.ಅಕ್ರಮ ಗಣಿಗಾರಿಕೆ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದ ಧಾರವಾಡ ಮೂಲದ `ಸಮಾಜ ಪರಿವರ್ತನಾ ಸಮುದಾಯ'ದ ಎಸ್.ಆರ್. ಹಿರೇಮಠ ಅವರು, ಸಿ ವರ್ಗದಡಿ ಗುತ್ತಿಗೆ ಕಳೆದುಕೊಂಡ ಕೆಲ ಗಣಿ ಕಂಪೆನಿಗಳಿಗೆ ಎ ಮತ್ತು ಬಿ ವರ್ಗದಡಿ ಗಣಿಗಾರಿಕೆ ನಡೆಸಲು ಅವಕಾಶ ನೀಡಿರುವ ಔಚಿತ್ಯ ಪ್ರಶ್ನೆ ಮಾಡಿದ್ದರು.ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಹೊತ್ತಿರುವ ಅನಿಲ್ ಲಾಡ್ ಬಳ್ಳಾರಿ ಸಾಮಾನ್ಯ ಕ್ಷೇತ್ರದಿಂದ, ಇವರ ಸೋದರ ಸಂತೋಷ್ ಲಾಡ್ ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಅಬ್ದುಲ್ ವಹಾಬ್ ಹಾಗೂ ಆನಂದ್‌ಸಿಂಗ್ ಪರಸ್ಪರರ ವಿರುದ್ಧ ಆಡಳಿತ ಮತ್ತು ವಿರೋಧ ಪಕ್ಷದ ಟಿಕೆಟ್ ಮೇಲೆ ಕಣಕ್ಕಿಳಿದಿದ್ದಾರೆ. ವಿ. ಸೋಮಣ್ಣ ಗೋವಿಂದರಾಜ ನ

ಗರದ ಬಿಜೆಪಿ ಅಭ್ಯರ್ಥಿ.ಹಿರೇಮಠ ಸ್ವಾಗತ

ಹುಬ್ಬಳ್ಳಿ ವರದಿ: ಸಿ'ವರ್ಗದ 49 ಗಣಿ ಗುತ್ತಿಗೆಯನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ (ಎಸ್‌ಪಿಎಸ್) ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.

ಪ್ರತಿಕ್ರಿಯಿಸಿ (+)