ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಕಂಪನ

7

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಕಂಪನ

Published:
Updated:

ಬೆಂಗಳೂರು: ಕೊಡಗು, ಹಾಸನ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಹಲವು ಕಡೆ ಭಾನುವಾರ ಮಧ್ಯಾಹ್ನ ಲಘ ಭೂಕಂಪನದ ಅನುಭವವಾಗಿದೆ.ಭೂಕಂಪನಕ್ಕೆ ಮನೆಯಲ್ಲಿನ ಪಾತ್ರೆಗಳು, ಕಿಟಕಿಯ ಗಾಜುಗಳು ಶಬ್ದ ಮಾಡಿವೆ. ಈ ಘಟನೆ ಸಂಭವಿಸಿದಾಗ ಮನೆಯಲ್ಲಿದ್ದ ಜನರು ಆತಂಕಕ್ಕೊಳಗಾಗಿ ಬೀದಿಗೆ ಬಂದು ಸೇರಿದ್ದರು. ಪೇಟೆಯಲ್ಲಿದ್ದ ಜನರು ಕ್ಷಣಕಾಲ ಮಂಕು ಕವಿದಂತೆ ಸ್ತಬ್ಧರಾಗಿದ್ದರು. ಯಾವುದೇ ಪ್ರದೇಶದಲ್ಲಿ ಮನೆ ಕುಸಿತ, ಭೂ ಕುಸಿತದಂತಹ ಅಹಿತಕರ ಘಟನೆಗಳು ವರದಿಯಾಗಿಲ್ಲ.ಮಡಿಕೇರಿ: ನಗರವೂ ಸೇರಿದಂತೆ ಕೊಡಗು ಜಿಲ್ಲೆಯ ಸುಂಟಿಕೊಪ್ಪ, ಮಡಿಕೇರಿ, ಕುಶಾಲನಗರ, ತಾಳತ್ತಮನೆ, ಬೋಯಿಕೇರಿ, ಸಿದ್ದಾಪುರ, ಚೆಟ್ಟಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಧ್ಯಾಹ್ನ 2.20 ಗಂಟೆಗೆ ಕ್ಷಣಕಾಲ ಭೂಮಿ ಕಂಪಿಸಿತು. ಭೂಕಂಪನವು ರಿಕ್ಟರ್ ಮಾಪನದಲ್ಲಿ 2.5 ಪ್ರಮಾಣದಷ್ಟಿತ್ತು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಮಡಿಕೇರಿಯ ಖಾಸಗಿ ಬಸ್ ನಿಲ್ದಾಣ, ಕಾಲೇಜು ರಸ್ತೆ, ಸುದರ್ಶನ ವೃತ್ತ, ಹೊಸ ಬಡಾವಣೆ, ಮಹದೇವ ಪೇಟೆ, ರಾಣಿಪೇಟೆ ಸೇರಿದಂತೆ ಎಲ್ಲ ಪ್ರದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿದೆ.ಹಾಸನ: ಜಿಲ್ಲೆಯ ಬೇಲೂರು ಹಾಗೂ ಸಕಲೇಶಪುರ ತಾಲ್ಲೂಕುಗಳ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಬೇಲೂರಿನಲ್ಲಿ ಮಧ್ಯಾಹ್ನ 2.27ರ  ಸುಮಾರಿಗೆ ಭೂಕಂಪನವಾಗಿದ್ದು, ಕಾರು, ಮಂಚ, ಪಾತ್ರೆಗಳು ಅಲುಗಾಡಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಬೇಲೂರಿನ ದೇವಸ್ಥಾನದ ರಸ್ತೆ, ನೆಹರು ನಗರ, ಗಾಣಿಗರ ಬೀದಿ, ವೈಕುಂಠ ಬೀದಿ ಮತ್ತು ತಾಲ್ಲೂಕಿನ ಮಲೆನಾಡು ಭಾಗವಾದ ಚೀಕನಹಳ್ಳಿ, ನಾಗೇನಹಳ್ಳಿ, ಕೋಗೋಡು, ಗೌತವಳ್ಳಿ, ಚೀಕನಹಳ್ಳಿ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಗೌತವಳ್ಳಿಯ ಕೆಲ ಮನೆಗಳಲ್ಲಿ ಪಾತ್ರೆಗಳು ಕೆಳಗೆ ಬಿದ್ದಿವೆ. ಕಾಫಿ  ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು ಭೂಕಂಪನದಿಂದ ಕೆಲಕಾಲ ಆತಂಕಕ್ಕೆ ಒಳಗಾದರು.ಸಕಲೇಶಪುರ: ತಾಲ್ಲೂಕಿನಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಐದು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಪಟ್ಟಣದ ಮಲ್ಲಿಕಾರ್ಜುನಗರ, ಮಹೇಶ್ವರಿನಗರ ಬಡಾವಣೆಯಲ್ಲಿ ಕೆಲವರು ಗಾಬರಿಯಿಂದ ಮನೆ ಹೊರಭಾಗಕ್ಕೆ ಓಡಿ ಬಂದರು. ಕ್ಯಾನಹಳ್ಳಿ ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಕಂಪಿಸಿದ್ದು, ಶಿವಪ್ಪ ಎಂಬುವವರ ಮನೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.ಸುಳ್ಯ: ತಾಲ್ಲೂಕಿನೆಲ್ಲೆಡೆ ಭಾನುವಾರ ಮಧ್ಯಾಹ್ನ 2.25ಕ್ಕೆ ಭೂಕಂಪದ ಅನುಭವ ಆಗಿದೆ. ಕಟ್ಟಡ, ಮನೆಗಳಲ್ಲಿ ಇದ್ದವರಿಗೆ ಈ ಅನುಭವ ಆಗಿದ್ದು, ಅವರು ಗಾಬರಿಯಿಂದ ಹೊರಗೆ ಓಡಿದ್ದಾರೆ. ಮೂರು ನಾಲ್ಕು ಸೆಕೆಂಡುಗಳ ಕಾಲ ಭೂಮಿ ಕಂಪಿಸಿತು. ಮನೆಯಲ್ಲಿರುವ ಪಾತ್ರೆಗಳು, ಬಾಗಿಲು-ಕಿಟಕಿಗಳು ಸದ್ದು ಮಾಡಿವೆ. ಭೂಕಂಪನ ಬಗ್ಗೆ ಸುಳ್ಯ ಪಟ್ಟಣ, ಪೆರಾಜೆ, ಸಂಪಾಜೆ, ಅರಂತೋಡು, ಎಲಿಮಲೆ, ಮರ್ಕಂಜ, ಮಂಡೆಕೋಲು, ಕನಕಮಜಲು, ದುಗಲಡ್ಕ, ಜಾಲ್ಸೂರು, ಕೊಲ್ಲಮೊಗ್ರ, ಸುಬ್ರಹ್ಮಣ್ಯ ಮೊದಲಾದ ಕಡೆಗಳಿಂದ ಬಗ್ಗೆ ಓದುಗರು ಪತ್ರಿಕೆಗೆ ತಿಳಿಸಿದ್ದಾರೆ.ಕಂಪನದ ಅನುಭವದಿಂದ ಪೇಟೆಯ ವರ್ತಕರು ಅಂಗಡಿಯಿಂದ ಹೊರಗೋಡಿದರು. ಯಾವುದೇ ಹಾನಿಯಾದ ವರದಿ ಬಂದಿಲ್ಲ ಎಂದು ತಹಶೀಲ್ದಾರ್ ವೈದ್ಯನಾಥ್ ತಿಳಿಸಿದ್ದಾರೆ.ಪುತ್ತೂರು:  ಪಟ್ಟಣ  ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆ ಭಾನುವಾರ ಮಧ್ಯಾಹ್ನ ಲಘು ಭೂಕಂಪನ ಸಂಭವಿಸಿದ ವರದಿಯಾಗಿದೆ. ಪೇಟೆಯ ಕೇಂದ್ರ ಭಾಗವೂ ಸೇರಿದಂತೆ  ದರ್ಬೆ, ಬೊಳುವಾರು, ಕೂರ್ನಡ್ಕ, ಮುಕ್ರಂಪಾಡಿ, ಗ್ರಾಮೀಣ ಪ್ರದೇಶಗಳಾದ ಕುರಿಯ, ಸಂಪ್ಯ, ಕುಂಬ್ರ ತಿಂಗಳಾಡಿ, ಬಲ್ನಾಡು ಅಜೆಕ್ಕಳ, ಸವಣೂರು, ಕಾಣಿಯಾರು, ಕೆಯ್ಯೂರು, ಪಾಲ್ತಾಡಿ, ಈಶ್ವರಮಂಗಲ, ಪಾಣಾಜೆ ಮೊದಲಾದ ಕಡೆ ಒಂದೆರಡು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವ ಜನತೆಗಾಗಿದೆ.ತಾಲ್ಲೂಕಿನ ಯಾವುದೇ ಭಾಗದಲ್ಲಿ ಮನೆ-ಸ್ವತ್ತುಗಳಿಗೆ ಹಾನಿಯಾದ ವರದಿಯಾಗಿಲ್ಲ. ಸಂಜೆಯ ವೇಳೆ ಎಲ್ಲೆಡೆ ಭೂ ಕಂಪನದ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿತ್ತು. ಭೂಕಂಪನದ ಸುದ್ದಿಯಾದ ಬೆನ್ನಲ್ಲೇ ಪುತ್ತೂರು ತಾಲ್ಲೂಕಿನ ಕುಂಬ್ರ, ಕೌಡಿಚ್ಚಾರು, ಕಾವು, ಈಶ್ವರಮಂಗಲ ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ.

 

ಮೂಡಿಗೆರೆ: ತಾಲ್ಲೂಕಿನ ಹಾಲೂರು, ಅಬಚೂರು, ಗಾಂಧೀಘರ್ ಗ್ರಾಮಗಳಲ್ಲಿ ಮಧ್ಯಾಹ್ನ 2.25 ರ ವೇಳೆಯಲ್ಲಿ ಸುಮಾರು 5 ರಿಂದ 6 ಸೆಕೆಂಡುಗಳ ಕಾಲ ಭೂಮಿ ನಡುಗಿದೆ.ಮನೆಯಲ್ಲಿದ್ದ ವಸ್ತುಗಳು ನೆಲಕ್ಕೆ ಬಿದ್ದಿವು. ಅಲ್ಲದೇ ಭೂಮಿಯ ಒಳಗಿನಿಂದ ಶಬ್ದವಾದ ಅನುಭವವಾಯಿತು ಎಂದು ಪ್ರತ್ಯಕ್ಷದರ್ಶಿ ಶ್ರಿನಾಥ್ ಪತ್ರಿಕೆಗೆ ತಿಳಿಸಿದರು.ಕೆಲವು ಗ್ರಾಮಗಳಲ್ಲಿ ಸಂಜೆಯೂ ಭೂಕಂಪನವಾಗುವ ಸಂಭವವಿದೆ ಎಂದು ವದಂತಿ ಹರಡಿದ್ದರಿಂದ ಮನೆಗಳನ್ನು ಬಿಟ್ಟು ಹೊರಬಂದ ಜನರು ಕತ್ತಲೆಯಾಗುವವರೆಗೆ ಬಯಲಲ್ಲಿ ದಿನ ಕಳೆದ ಘಟನೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry