ಗುರುವಾರ , ನವೆಂಬರ್ 21, 2019
26 °C

ರಾಜ್ಯದ 224 ಕ್ಷೇತ್ರಗಳಲ್ಲಿ ಕೆಜೆಪಿ ಸ್ಪರ್ಧೆ

Published:
Updated:

ಜೇವರ್ಗಿ: `ರಾಜ್ಯಾದ್ಯಂತ ಕರ್ನಾಟಕ ಜನತಾ ಪಕ್ಷದ ಪರ ಅಲೆಯಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆ ನಂತರ ರಾಜ್ಯದಲ್ಲಿ ಕೆಜೆಪಿ ಅಧಿಕಾರಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ತಾವು ರಾಜ್ಯದ 224 ಮತಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದೇವೆ' ಎಂದು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.ತಾವು ಮೂರುವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಜನಪರ, ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಕೆಜೆಪಿ ಪಕ್ಷದಲ್ಲಿ ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಎಂಬ ತತ್ವ ಅಳವಡಿಸಿಕೊಳ್ಳಲಾಗಿದೆ. ಅಧಿಕಾರದ ಅವಧಿಯಲ್ಲಿ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೇನೆ.

ರಾಜ್ಯದಲ್ಲಿನ ಯುವ ಪೀಳಿಗೆಗೆ ಹೊಸ ಚಿಂತನೆ ಮೂಡಿಸುವ ಉದ್ದೇಶದಿಂದ ಪ್ರಾದೇಶಿಕ ಪಕ್ಷವನ್ನು ಹುಟ್ಟುಹಾಕಿದ್ದೇನೆ. ಜೇವರ್ಗಿ ಮತಕ್ಷೇತ್ರದಿಂದ ಸ್ಪರ್ಧಿಸಿರುವ ಮಲ್ಲಿನಾಥಗೌಡ ಪಾಟೀಲ್ ಯಲಗೋಡ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಆರಿಸಿ ಕಳಿಸಿದರೆ ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಸುನೀಲ ವಲ್ಯಾಪುರೆ, ಅಹಿಂದ ಮುಖಂಡ ಕೆ.ಮುಕಡಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಕೆಜೆಪಿ ರಾಜ್ಯ ಕಾರ್ಯದರ್ಶಿ ತಿಪ್ಪಣ್ಣಪ್ಪ ಕಮಕನೂರ, ಸುರೇಶ ಸಜ್ಜನ್, ಅಭ್ಯರ್ಥಿ ಮಲ್ಲಿನಾಥಗೌಡ ಪಾಟೀಲ್ ಯಲಗೋಡ ಮತ್ತಿತರರು ಮಾತನಾಡಿದರು.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಪ್ಪಾಸಾಬ್ ಪಾಟೀಲ್ ರದ್ದೇವಾಡಗಿ, ಅಬ್ದುಲ್ ಸತ್ತಾರಸಾಬ್ ಗಿರಣಿ, ಬಸವರಾಜ ಗುಳಗಿ, ಶಿವರಾಜ ಪಾಟೀಲ್ ಮತ್ತಿತರರು ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಅಧಿಕೃತವಾಗಿ ಕೆಜೆಪಿಗೆ ಸೇರ್ಪಡೆಯಾದರು.

ವೇದಿಕೆ ಮೇಲೆ ಮಾಜಿ ಸಚಿವ ವೈಜನಾಥ ಪಾಟೀಲ್, ಅಪ್ಪಣ್ಣಗೌಡ ಪಾಟೀಲ್ ಹರವಾಳ, ಸುಭಾಷ್ಚಂದ್ರ ಗಣಜಲಖೇಡ್,ಬಸವಂತರಾಯ ಬಿರಾದಾರ, ಗಿರೀಶಗೌಡ ಇನಾಮದಾರ, ಗುರು ಪಾಟೀಲ್ ಶಿರವಾಳ, ಗುಲಾಮಸೇಠ ಗಿರಣಿ, ಅಬ್ದುಲ್ ಮಾಜೀದ್ ಗಿರಣಿ, ಶ್ರೀಕಾಂತಗೌಡ ಸುಬೇದಾರ, ಅಬ್ದುಲ್ ವಾಹೀದ್ ಗಿರಣಿ, ಅಹ್ಮದ್ ಪಟೇಲ್ ಬಣಮಿ, ಇಮಾಮಸಾಬ್ ಇನಾಮದಾರ್, ಅಬ್ದುಲ್ ರಜಾಕ್ ಕಾಸರಭೋಸಗಾ, ಮಲ್ಲಿಕಾರ್ಜುನ ಮಾರಡಗಿ, ಶಿವಣ್ಣಗೌಡ ಹಂಗರಗಿ, ರತನಸಿಂಗ್ ರಾಠೋಡ ಹಾಗೂ ಕೆಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)