ರಾಜ್ಯದ 31 ಸಾವಿರ ಕೇಂದ್ರಗಳಲ್ಲಿ ನಾಳೆ ಪೋಲಿಯೊ ಲಸಿಕೆ

7

ರಾಜ್ಯದ 31 ಸಾವಿರ ಕೇಂದ್ರಗಳಲ್ಲಿ ನಾಳೆ ಪೋಲಿಯೊ ಲಸಿಕೆ

Published:
Updated:

ಬೆಂಗಳೂರು:  ಪೋಲಿಯೊ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಆಂದೋಲನದ ಅಂಗವಾಗಿ ಐದು ವರ್ಷದೊಳಗಿನ ಮಕ್ಕಳಿಗೆ ರಾಜ್ಯದ 31 ಸಾವಿರ ಬೂತ್‌ಗಳಲ್ಲಿ ಭಾನುವಾರ ಪಲ್ಸ್ ಪೋಲಿಯೊ ಲಸಿಕೆ ಹಾಕಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.ರಾಜ್ಯದಲ್ಲಿರುವ ಐದು ವರ್ಷದೊಳಗಿನ 74 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕುವುದು ಸರ್ಕಾರದ ಗುರಿಯಾಗಿದ್ದು, ಒಟ್ಟು 1.04 ಲಕ್ಷ ಮಂದಿ ಈ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಗೃಹ ಕಚೇರಿ `ಕೃಷ್ಣಾ~ದಲ್ಲಿ ಆಯ್ದ ಕೆಲವು ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಮೂಲಕ ಆಂದೋಲನಕ್ಕೆ ಸಾಂಕೇತಿಕ ಚಾಲನೆ ನೀಡಲಿದ್ದಾರೆ.ಈ ಕುರಿತು ವಿಕಾಸಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ.ವಿ. ರಮಣ ರೆಡ್ಡಿ, `ಕಳೆದ ವರ್ಷ ಜನವರಿ 12ರಂದು ಪಶ್ಚಿಮ ಬಂಗಾಳದ ಹೌರಾದಲ್ಲಿ ಪತ್ತೆಯಾದ ಪೊಲಿಯೊ ಪ್ರಕರಣವೇ ಕೊನೆ, ಅಂದಿನಿಂದ ಇಲ್ಲಿಯವರೆಗೆ ದೇಶದ ಯಾವುದೇ ಭಾಗದಲ್ಲಿ ಪೋಲಿಯೊ ಪ್ರಕರಣ ವರದಿಯಾಗಿಲ್ಲ.

 

ಮುಂದಿನ ಎರಡು ವರ್ಷ ದೇಶದಲ್ಲಿ ಪೊಲಿಯೊ ಪ್ರಕರಣ ವರದಿಯಾಗದಿದ್ದಲ್ಲಿ, ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೊಲಿಯೊ ಮುಕ್ತ ರಾಷ್ಟ್ರ ಎಂದು ಘೋಷಿಸಲಿದೆ~ ಎಂದು ತಿಳಿಸಿದರು.ರಾಜ್ಯದಲ್ಲಿ 2007ರ ನವೆಂಬರ್ 3ರ ನಂತರ ಪೊಲಿಯೊ ಪ್ರಕರಣ ವರದಿಯಾಗಿಲ್ಲ. ಅಂದು ರಾಯಚೂರಿನಲ್ಲಿ ವರದಿಯಾಗಿದ್ದ ಪ್ರಕರಣ ಹೊರ ರಾಜ್ಯದಿಂದ ವಲಸೆ ಬಂದವರಿಗೆ ಸಂಬಂಧಿಸಿದ್ದು. 2004ರಲ್ಲಿ ಯಶವಂತಪುರದ ವ್ಯಕ್ತಿಯೊಬ್ಬರು ಪೊಲಿಯೊ ಬಾಧೆಗೆ ಒಳಗಾಗಿದ್ದು ಕರ್ನಾಟಕದವರಲ್ಲಿ ಪತ್ತೆಯಾದ ಕೊನೆಯ ಪ್ರಕರಣ ಎಂದು ಹೇಳಿದರು.ಐದು ವರ್ಷದೊಳಗಿನ ಮಕ್ಕಳಿಗೆ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಭಾನುವಾರ ನಡೆಯಲಿರುವ ಆಂದೋಲನದಲ್ಲಿ ಪಲ್ಸ್ ಪೊಲಿಯೊ ಲಸಿಕೆ ಹಾಕಿಸಬೇಕು. ಅಂದು ಬಸ್ ಮತ್ತು ರೈಲಿನಲ್ಲೂ ಪಲ್ಸ್ ಪೋಲಿಯೊ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಸೋಮವಾರದಿಂದ ಎರಡು ಅಥವಾ ಮೂರು ದಿನಗಳ ಕಾಲ ಇಲಾಖೆಯ ಸಿಬ್ಬಂದಿ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಭಾನುವಾರ ಲಸಿಕೆ ಹಾಕಿಸದ ಮಕ್ಕಳನ್ನು ಪತ್ತೆ ಮಾಡಿ, ಲಸಿಕೆ ಹಾಕಲಿದ್ದಾರೆ ಎಂದರು.ಪಾಕಿಸ್ತಾನ, ಅಪ್ಘಾನಿಸ್ತಾನ, ಭಾರತ ಮತ್ತು ನೈಜೀರಿಯಾ ಪೋಲಿಯೊ ಬಾಧಿತ ದೇಶಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 1988ರಲ್ಲಿ ದೇಶದಲ್ಲಿ 3.5 ಲಕ್ಷ ಪೋಲಿಯೊ ಪ್ರಕರಣಗಳು ಪತ್ತೆಯಾಗಿದ್ದವು. 1995ರಲ್ಲಿ ಇದರ ಸಂಖ್ಯೆ 35 ಸಾವಿರಕ್ಕೆ ಇಳಿಯಿತು. 2011ರಲ್ಲಿ ಪೋಲಿಯೊ ಪ್ರಕರಣ ವರದಿಯಾಗಿಲ್ಲ ಎಂದು ಅಂಕಿ-ಅಂಶಗಳನ್ನು ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry