ಶುಕ್ರವಾರ, ಮೇ 14, 2021
25 °C

ರಾಜ್ಯದ 81 ಯಾತ್ರಾರ್ಥಿಗಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತರಾಖಂಡದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದ ಕರ್ನಾಟಕದ 81 ಮಂದಿಯನ್ನು ಭಾನುವಾರ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.ಕನ್ನಡಿಗ ಯಾತ್ರಿಕರ ರಕ್ಷಣೆಗಾಗಿ ರಾಜ್ಯ ಸರ್ಕಾರ ಕಳುಹಿಸಿರುವ ಉನ್ನತಮಟ್ಟದ ತಂಡದ ನೇತೃತ್ವ ವಹಿಸಿರುವ ಲಾಡ್ ಭಾನುವಾರ ಸಂಜೆ ಅಲ್ಲಿನ ಸಫೇದ್ ಹರಾ ಎಂಬ ಹೆಲಿಪ್ಯಾಡ್‌ನಲ್ಲಿದ್ದರು. ದೂರವಾಣಿ ಮೂಲಕ `ಪ್ರಜಾವಾಣಿ' ಜೊತೆ ಮಾತನಾಡಿ, `ಭಾನುವಾರ ರಕ್ಷಿಸಿರುವ ಎಲ್ಲರನ್ನೂ ದೆಹಲಿಗೆ ಕಳುಹಿಸಲಾಗಿದೆ' ಎಂದರು.ಮಂಗಳೂರು ಮೂಲದ 55 ಮಂದಿ ಮತ್ತು ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯ ನಾಲ್ವರು ಸೇರಿದಂತೆ 81 ಮಂದಿಯನ್ನು ವಿವಿಧ ಸ್ಥಳಗಳಿಂದ ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು. ಎಲ್ಲರನ್ನೂ ದೆಹಲಿಗೆ ಕಳುಹಿಸಿಕೊಟ್ಟಿದ್ದು, ಕರ್ನಾಟಕ ಭವನದಲ್ಲಿ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.ಈವರೆಗೆ ಕರ್ನಾಟಕದ 250ಕ್ಕೂ ಹೆಚ್ಚು ಜನರನ್ನು ಕೇದಾರನಾಥ, ಬದರಿನಾಥ ಮತ್ತಿತರ ಕಡೆಗಳಿಂದ ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯ ಬಳಿಕ ಅವರನ್ನು ವಿಮಾನ ಮತ್ತು ರೈಲುಗಳ ಮೂಲಕ ರಾಜ್ಯಕ್ಕೆ ಕಳುಹಿಸುವ ಕೆಲಸ ನಡೆಯುತ್ತಿದೆ. ಕೆಲವರು ಇನ್ನೂ ಡೆಹ್ರಾಡೂನ್, ದೆಹಲಿ ಮತ್ತಿತರ ಕಡೆಗಳಲ್ಲಿನ ಶಿಬಿರಗಳಲ್ಲಿ ತಂಗಿದ್ದಾರೆ. ಅವರೆಲ್ಲರನ್ನೂ ಶೀಘ್ರದಲ್ಲಿ ರಾಜ್ಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಹೇಳಿದರು.ಬದರಿನಾಥದಲ್ಲಿ ಇನ್ನೂ 150ರಿಂದ 200 ಮಂದಿ ಕನ್ನಡಿಗರು ಇರಬಹುದು ಎಂದು ಅಂದಾಜಿಸಲಾಗಿದೆ. ಉಳಿದ ಕಡೆಗಳಲ್ಲಿ ಸುಮಾರು 50 ಜನರು ಸಿಲುಕಿಕೊಂಡಿರಬಹುದು. ಈ ಎಲ್ಲರನ್ನೂ ತಲುಪಲು ಪ್ರಯತ್ನ ಮುಂದುವರಿದಿದೆ ಎಂದರು.ಸರ್ಕಾರದ ಹೆಲಿಕಾಪ್ಟರ್: `ನಮ್ಮ ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವುದಕ್ಕಾಗಿ ರಾಜ್ಯ ಸರ್ಕಾರ ಒಂದು ಹೆಲಿಕಾಪ್ಟರನ್ನು ಕಳುಹಿಸಿಕೊಟ್ಟಿದೆ. ಆರು ಆಸನಗಳುಳ್ಳ ಎರಡು ಎಂಜಿನ್‌ನ ಹೆಲಿಕಾಪ್ಟರ್ ಜೊತೆ ಇಬ್ಬರು ಪೈಲಟ್‌ಗಳು ಮತ್ತು ಒಬ್ಬ ಎಂಜಿನಿಯರ್ ಕೂಡ ಬಂದಿದ್ದಾರೆ. ಹೈದರಾಬಾದ್‌ನಿಂದ ಬಂದ ಹೆಲಿಕಾಪ್ಟರ್ ಈಗ ಡೆಹ್ರಾಡೂನ್‌ನಲ್ಲಿ ಇದೆ. ಆದಷ್ಟು ಬೇಗ ಎಲ್ಲ ಕನ್ನಡಿಗರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಕರೆದೊಯ್ಯಬೇಕು ಎಂಬ ಉದ್ದೇಶದಿಂದ ನಾವು ಇಲ್ಲಿ ಇದ್ದೇವೆ. ಬೆಟ್ಟಗಳ ನಡುವಿನಲ್ಲಿ ಸಿಲುಕಿಕೊಂಡಿರುವ ರಾಜ್ಯದ ನಾಗರಿಕರನ್ನು ಪತ್ತೆಹಚ್ಚುವ ಕಾರ್ಯ ನಿರಂತರವಾಗಿ ಪ್ರಗತಿಯಲ್ಲಿದೆ' ಎಂದರು.`ಇಲ್ಲಿ ಹೆಲಿಕಾಪ್ಟರ್‌ಗಳ ಕೊರತೆ ಇಲ್ಲ. ಭಾರತೀಯ ವಾಯಪಡೆ ಮತ್ತು ಭೂ ಸೇನೆಯ ಹೆಲಿಕಾಪ್ಟರ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿವೆ. ಇಲ್ಲಿನ ಬೆಟ್ಟಗಳ ಮೇಲಿರುವ ಬಹುತೇಕ ಹೆಲಿಪ್ಯಾಡ್‌ಗಳಲ್ಲಿ ಅಗತ್ಯ ಸಂಖ್ಯೆಯ ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗಾಗಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಹೆಲಿಕಾಪ್ಟರ್‌ಗಳ ಹಾರಾಟ ಮತ್ತು ನಿಲುಗಡೆಗೆ ಪೂರಕ ವಾತಾವರಣ ಇದ್ದರೆ ಕಾರ್ಯಾಚರಣೆ ಬಹುಬೇಗ ಪೂರ್ಣಗೊಳ್ಳಬಹುದು' ಎಂದರು.ಅಡ್ಡಿಯಾದ ಹಿಮ: ಭಾನುವಾರ ಬೆಳಿಗ್ಗೆಯಿಂದ ಉತ್ತರಾಖಂಡದ ಬೆಟ್ಟ ಪ್ರದೇಶದಲ್ಲಿ ವಿಪರೀತ ಹಿಮ ಸುರಿಯುತ್ತಿದೆ. ಪ್ರವಾಹಪೀಡಿತ ಪ್ರದೇಶದಲ್ಲಿ ಸಿಲುಕಿರುವ ಯಾತ್ರಿಕರ ರಕ್ಷಣಾ ಕಾರ್ಯಾಚರಣೆಗೆ ಹಿಮ ಅಡ್ಡಿಯಾಗಿದೆ. ಪ್ರತಿಕೂಲ ಹವಾಮಾನ ಇರುವ ಕಾರಣದಿಂದ ಹೆಲಿಕಾಪ್ಟರ್‌ಗಳ ಹಾರಾಟ ಮತ್ತು ನಿಲುಗಡೆ ಸಾಧ್ಯವಾಗುತ್ತಿಲ್ಲ ಎಂದರು.ಕಣಿವೆ ದಾರಿಯ ನಡುವೆ ಸಿಲುಕಿಕೊಂಡಿರುವವರಿಗೆ ಅಗತ್ಯ ಆಹಾರ ಮತ್ತು ಔಷಧಿಗಳನ್ನು ಪೂರೈಸಲಾಗುತ್ತಿದೆ. ಕೆಲವು ಕಡೆಗಳಿಗೆ ವೈದ್ಯರನ್ನೂ ಕಳುಹಿಸಲಾಗಿದೆ. ಆದರೆ, ಬೆಳಿಗ್ಗೆ ಕೆಲಕಾಲ ಮಳೆ ಸುರಿದಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಯಿತು. ನಂತರ ಇಡೀ ಪ್ರದೇಶವನ್ನು ಹಿಮ ಆವರಿಸಿಕೊಂಡಿತು. ಪರಿಣಾಮವಾಗಿ ರಕ್ಷಣಾ ಕಾರ್ಯಾಚರಣೆಯ ವೇಗ ತಗ್ಗಿತು ಎಂದು ವಿವರಿಸಿದರು.`ಉತ್ತರಾಖಂಡದಲ್ಲಿನ ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಕನ್ನಡಿಗರ ರಕ್ಷಣೆಯ ವಿಷಯದಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿಯವರ ಆದೇಶದಂತೆ ನಾನು ಖುದ್ದಾಗಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೇನೆ. ಕೊರೆಯುವ ಚಳಿ ಇದೆ. ರಕ್ಷಣಾ ಕಾರ್ಯಕರ್ತರ ಜೊತೆ ನಾನೂ ಸೇರಿಕೊಂಡು ಕೆಲಸ ಮಾಡುತ್ತಿದ್ದೇನೆ. ಈ ವಿಷಯದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿಯೇ ನಡೆದುಕೊಳ್ಳುತ್ತಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಯಾತ್ರಿಗಳ ರಕ್ಷಣೆಗೆ ಕ್ರಮ: ಸಿಎಂ

ಕೇದಾರನಾಥ, ಬದರಿನಾಥ ಮತ್ತಿತರ ಕ್ಷೇತ್ರಗಳಿಗೆ ಯಾತ್ರೆಗೆ ತೆರಳಿ ಪ್ರವಾಹಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಕರ್ನಾಟಕದ 200ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಅವರೆಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕೆಲಸವೂ ನಡೆಯುತ್ತಿದೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ರಾಜ್ಯದ ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ರಾಜ್ಯದ ಯಾತ್ರಿಕರನ್ನು ಸಂಪರ್ಕಿಸಿ ಕರೆತರುವ ಕೆಲಸವನ್ನು ಮೂಲಸೌಕರ್ಯ ಅಭಿವೃದ್ಧಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಉನ್ನತಮಟ್ಟದ ತಂಡ ಮಾಡುತ್ತಿದೆ. ರಾಜ್ಯದ ಯಾತ್ರಿಕರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಂಡಿದೆ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.