ರಾಜ್ಯಪಾಲರನ್ನು ಹಿಂದಕ್ಕೆ ಕರೆಸುವುದೇಕೆ?

7

ರಾಜ್ಯಪಾಲರನ್ನು ಹಿಂದಕ್ಕೆ ಕರೆಸುವುದೇಕೆ?

Published:
Updated:

ನವದೆಹಲಿ: ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿರುವ ಕರ್ನಾಟಕದ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಬೇಕೆಂಬ ಬಿಜೆಪಿ ಬೇಡಿಕೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿ (ಎಸ್), ಭಾರದ್ವಾಜ್ ಅವರನ್ನು ಯಾಕೆ ಹಿಂದಕ್ಕೆ ಕರೆಸಬೇಕು? ಅವರೇನು ಅಪರಾಧ ಮಾಡಿದ್ದಾರೆ? ಎಂದು ಪ್ರಶ್ನಿಸಿದೆ.‘ರೇಡಿಯೋ ತರಂಗಾಂತರ’ ಹಾಗೂ ‘ಕಾಮನ್ವೆಲ್ತ್ ಕ್ರೀಡಾಕೂಟ’ ಹಗರಣ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಿರುವ ಬಿಜೆಪಿ. ತನ್ನ ಸರ್ಕಾರದ ಭ್ರಷ್ಟಾಚಾರ ಸಮರ್ಥಿಸಿಕೊಳ್ಳುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ರಾಜ್ಯಪಾಲರನ್ನು ಹಿಂದಕ್ಕೆ ಕರೆಸಬೇಕೆಂದು ಆಗ್ರಹಿಸಲು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗದ ನೇತೃತ್ವವನ್ನು ಎಲ್.ಕೆ.ಅಡ್ವಾಣಿ ವಹಿಸಿದ್ದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಗೌಡರು, ಪ್ರಧಾನಿ ಆಗಲು ತುದಿಗಾಲಲ್ಲಿ ನಿಂತಿರುವ ಈ ಹಿರಿಯ ನಾಯಕ ಯಾರು ಏನೇ ಹೇಳಿದರೂ ನಂಬುವ ಸ್ಥಿತಿಯಲ್ಲಿದ್ದಾರೆ ಎಂದು ಲೇವಡಿ ಮಾಡಿದರು.ರಾಜ್ಯ ಬಿಜೆಪಿ ಸಂಸದರು ಪ್ರತಿಭಾ ಪಾಟೀಲ್ ಅವರನ್ನು ಕಂಡಿದ್ದರೆ ಬೇಸರವಾಗುತ್ತಿರಲಿಲ್ಲ. ವೆಂಕಯ್ಯ ನಾಯ್ಡು ನಾಯಕತ್ವ ವಹಿಸಿದ್ದರೆ ಮಹತ್ವ ಕೊಡುತ್ತಿರಲಿಲ್ಲ. ವಾಜಪೇಯಿ ನಂತರದ ದೊಡ್ಡ ನಾಯಕರು ಎನಿಸಿರುವ ಅಡ್ವಾಣಿ ಮುಂಚೂಣಿಯಲ್ಲಿ ನಿಂತು ಯಡಿಯೂರಪ್ಪನವರ ಭ್ರಷ್ಟಾಚಾರ ಬೆಂಬಲಿಸಿದ್ದರಿಂದ ಮನಸಿಗೆ ನೋವಾಗಿದೆ. ಇದರಿಂದ ಅವರ ವ್ಯಕ್ತಿತ್ವವೂ ಕುಗ್ಗಿದೆ ಎಂದರು.ಯಡಿಯೂರಪ್ಪ ಅವರ ಮೇಲೆ ಮೊಕದ್ದಮೆ ಹೂಡಲು ರಾಜ್ಯಪಾಲರು ಒಪ್ಪಿಗೆ ನೀಡುವ ಮೊದಲು ದೂರಿನ ಅರ್ಹತೆ ಪರಿಶೀಲಿಸಿದ್ದಾರೆ. ಎಲ್ಲ ದಾಖಲೆಗಳನ್ನು ಪರಾಮರ್ಶಿಸಿದ್ದಾರೆ. ಈ ಸಂಬಂಧ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಅಧ್ಯಯನ ಮಾಡಿದ್ದಾರೆ. ತಜ್ಞರ ಜತೆ ಸಮಾಲೋಚಿಸಿದ್ದಾರೆ. ಅವರು ನೀಡಿರುವ ಅನುಮತಿ ಕಾನೂನು ಪ್ರಕಾರವಾಗಿದೆ ಎಂದು ಮಾಜಿ ಪ್ರಧಾನಿ ಬಲವಾಗಿ ಸಮರ್ಥಿಸಿಕೊಂಡರು.ಬಿಜೆಪಿ ಅನಗತ್ಯವಾಗಿ ಭಾರದ್ವಾಜ್ ಅವರ ಮೇಲೆ ಗೂಬೆ ಕೂರಿಸುತ್ತಿದೆ. ಅವರು ರಾಜ್ಯಪಾಲರಾಗಿ ಬಂದ ಮೇಲೆ ಹಲವಾರು ಸಲ ಮುಖ್ಯಮಂತ್ರಿಗಳನ್ನು ಕರೆದು ತಮ್ಮ ಗಮನಕ್ಕೆ ಬಂದ ಲೋಪಗಳನ್ನು ಎತ್ತಿ ತೋರಿದ್ದಾರೆ. ತಿದ್ದಿಕೊಳ್ಳುವಂತೆ ಸಲಹೆ ಮಾಡಿದ್ದಾರೆ. ಆದರೆ, ಅವರ ಮಾತನ್ನು ಕಡೆಗಣಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry