ರಾಜ್ಯಪಾಲರ ತಪ್ಪು ನಡೆ

7

ರಾಜ್ಯಪಾಲರ ತಪ್ಪು ನಡೆ

Published:
Updated:

ಕನ್ನಡದ ವಿದ್ವಾಂಸ ಮತ್ತು ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಲು ಮಾಡಿದ್ದ ಶಿಫಾರಸನ್ನು ರಾಜ್ಯಪಾಲರು ತಡೆಹಿಡಿಯುವ ಮೂಲಕ ಕನ್ನಡ ಸಾರಸ್ವತ ಲೋಕದ ಖ್ಯಾತ ಬರಹಗಾರರೊಬ್ಬರನ್ನು ಅವಮಾನಗೊಳಿಸಿದ್ದಾರೆ ಎಂಬ ಭಾವನೆ ಮತ್ತು ಕಟು ಟೀಕೆ ಸಾರ್ವಜನಿಕವಾಗಿ ವ್ಯಕ್ತವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಇದು ಪ್ರತಿಧ್ವನಿಸಿದೆ. ರಾಜ್ಯಪಾಲರ ನಿರ್ಧಾರ ನಿಜಕ್ಕೂ ದುರದೃಷ್ಟಕರ. ಈ ಕ್ರಮದಿಂದ ರಾಜ್ಯಪಾಲರ ಕಾರ್ಯವೈಖರಿ ಮತ್ತೆ ಸಾರ್ವಜನಿಕವಾಗಿ ಟೀಕೆಗೆ ಒಳಗಾಗಿದೆ.ಚಿದಾನಂದಮೂರ್ತಿ ಅವರು, ಚರ್ಚ್‌ಗಳ ಮೇಲೆ ನಡೆದ ದಾಳಿಯನ್ನು ಕುರಿತು ನ್ಯಾಯಾಂಗ ವಿಚಾರಣೆ ನಡೆಸಿದ ನ್ಯಾ. ಬಿ.ಕೆ. ಸೋಮಶೇಖರ್ ಆಯೋಗದ ವರದಿಯನ್ನು ಸಮರ್ಥಿಸಿದ್ದೇ ರಾಜ್ಯಪಾಲರ ಈ ನಿರ್ಧಾರಕ್ಕೆ ಕಾರಣ. ‘ಚಿದಾನಂದಮೂರ್ತಿ ಅವರು ಆಯೋಗದ ವರದಿಯನ್ನು ಸಮರ್ಥಿಸುವ ಮೂಲಕ ಒಂದು ವರ್ಗದ ಭಾವನೆಗೆ ಆಘಾತ ಉಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನನಗೆ ಸರಿ ಅನ್ನಿಸಿದಂತೆ ತೀರ್ಮಾನ ತೆಗೆದುಕೊಂಡಿದ್ದೇನೆ. ಕೆಲವರಿಗೆ ಇದು ಇಷ್ಟವಾಗಬಹುದು ಮತ್ತೆ ಕೆಲವರಿಗೆ ಇಷ್ಟವಾಗದಿರಬಹುದು’ ಎಂದು ರಾಜ್ಯಪಾಲರು ತಮ್ಮ ನಿರ್ಧಾರವನ್ನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.ಚಿದಾನಂದಮೂರ್ತಿ ಅವರು 20ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಬರೆದಿದ್ದಾರೆ. ನಮ್ಮ ಕೆಲವೇ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಖ್ಯಾತ ಭಾಷಾ ವಿಜ್ಞಾನಿಯೂ ಆಗಿರುವ ಅವರು ರಾಜ್ಯೋತ್ಸವ, ಪಂಪ, ಸಾಹಿತ್ಯ ಅಕಾಡೆಮಿ ಮತ್ತು ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ವಿವಿಯ ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಕನ್ನಡ ಕ್ರಿಯಾ ಸಮಿತಿಯ ನೇತೃತ್ವವಹಿಸಿ ಕನ್ನಡಕ್ಕಾಗಿ ಹೋರಾಡಿದ್ದಾರೆ. ಜೊತೆಗೆ ಒಬ್ಬ ಸಂಶೋಧಕರಾಗಿ ಹಂಪಿಯ ಪರಿಸರ ಮತ್ತು ಶಾಸನಗಳ ಸಂರಕ್ಷಣೆಯಲ್ಲಿ ಅವರು ತೋರಿರುವ ಆಸಕ್ತಿ ಶ್ಲಾಘನೀಯವಾದುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವ ಮತ್ತು ಸಂಘಪರಿವಾರದ ಪರವಾದ ನಿಲುವನ್ನು ಹೊಂದಿರುವುದು ವಿಶೇಷ. ಅದು ಅವರ ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಅನೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಿರುವ ಅವರ ಅಭಿಪ್ರಾಯಕ್ಕೆ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಬಲವಾದ ವಿರೋಧವೂ ವ್ಯಕ್ತವಾಗಿದೆ. ಹಾಗೆಯೇ ಅವರ ನಿಲುವನ್ನು ಬೆಂಬಲಿಸುವ ಬಳಗವೂ ಇದೆ.

 

‘ನಾನು ಚರ್ಚ್‌ಗಳ ಮೇಲಿನ ದಾಳಿಯನ್ನು ಬೆಂಬಲಿಸಿಲ್ಲ. ಆದರೆ ಬಲತ್ಕಾರದ ಮತಾಂತರವನ್ನು ವಿರೋಧಿಸುತ್ತಾ ಬಂದಿದ್ದೇನೆ’ ಎಂದು ಚಿದಾನಂದಮೂರ್ತಿ ಅವರು ತಮ್ಮ ಹಿಂದುತ್ವಪರವಾದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಆದರೆ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡುವ ಬಗೆಗೆ ನಿರ್ಧಾರ ತೆಗೆದುಕೊಳ್ಳುವಾಗ ಅವರು  ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಮಾನದಂಡವನ್ನಾಗಿ ಪರಿಗಣಿಸಿದೆ. ಆದ್ದರಿಂದಲೇ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಮಾಡಿದ ಆಯ್ಕೆಗೆ ಶೈಕ್ಷಣಿಕ ಮತ್ತು ಸಾರ್ವಜನಿಕ ವಲಯದಿಂದ ವಿರೋಧವೇನೂ ವ್ಯಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ತಮ್ಮ ನಿರ್ಧಾರವನ್ನು ಪುನರ್‌ಪರಿಶೀಲಿಸುವ ಮೂಲಕ ತಮ್ಮ ತಪ್ಪನ್ನು ತಿದ್ದಿಕೊಳ್ಳುವುದು ಉಚಿತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry