ರಾಜ್ಯಪಾಲರ ರಾಜೀನಾಮೆಗೆ ಆಗ್ರಹ

7

ರಾಜ್ಯಪಾಲರ ರಾಜೀನಾಮೆಗೆ ಆಗ್ರಹ

Published:
Updated:

ಬೆಂಗಳೂರು: ಓಟಿಗಾಗಿ ನೋಟು ಹಗರಣದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧ ಸಿಬಿಐ ತನಿಖೆ ಕೈಬಿಡುವಲ್ಲಿ ಶಾಮೀಲಾಗಿದ್ದರು ಎನ್ನುವ ಆರೋಪದ ಮೇಲೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರ ವಿರುದ್ಧ ನವದೆಹಲಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಸಂಸದ ಡಿ.ಬಿ. ಚಂದ್ರೇಗೌಡ ಅವರು ಒತ್ತಾಯಿಸಿದರು.ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, `ಬೇರೆಯವರ ಪ್ರಕರಣಗಳಲ್ಲಿ ಆತುರವಾಗಿ ಕ್ರಮ ತೆಗೆದುಕೊಳ್ಳುವ ಭಾರದ್ವಾಜ್ ಅವರು ಈ ಪ್ರಕರಣದಲ್ಲಿಯೂ ಅದೇ ಮಾದರಿ ಅನುಸರಿಸಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರೇ ಭಾರದ್ವಾಜ್ ಅವರನ್ನು ವಜಾ ಮಾಡಬೇಕು~ ಎಂದು ಹೇಳಿದರು.ಭಾರದ್ವಾಜ್ ಅವರು ರಾಜ್ಯಪಾಲರಾಗಿ ಬಂದಾಗ ಕೆಲವರನ್ನು ಜೈಲಿಗೆ ಕಳುಹಿಸಬೇಕು ಎಂಬ ಉದ್ದೇಶ ಇಟ್ಟುಕೊಂಡವರಂತೆ ಕಾರ್ಯ ನಿರ್ವಹಿಸಿದರು. ಅದು ಈಗ ರಾಜ್ಯದ ಜನತೆಗೂ ತಿಳಿದಿದೆ ಎಂದು ಲೇವಡಿ ಮಾಡಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, `ಯಡಿಯೂರಪ್ಪ ಅವರ ಪ್ರಕರಣದಲ್ಲಿ ಕೆಳ ಹಂತದ ನ್ಯಾಯಾಲಯಗಳಿಗೆ ಜಾಮೀನು ನಿರಾಕರಿಸುವ ಅಧಿಕಾರ ಇಲ್ಲ. ಆ ಅಧಿಕಾರ ಇರುವುದು ಹೈಕೋರ್ಟ್‌ಗೆ ಮಾತ್ರ. ಇಲ್ಲಿ ಕೆಳ ಹಂತದ ನ್ಯಾಯಾಲಯ ತನ್ನ ಅಧಿಕಾರ ವ್ಯಾಪ್ತಿ ಮೀರಿತೇ~ ಎಂದು ಪ್ರಶ್ನಿಸಿದರು.`ಇಂದು ರಾಜ್ಯದಲ್ಲಿ ನೂತನ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲು ಸೂಕ್ತರು ಸಿಗದಂಥ ಸನ್ನಿವೇಶ ಸೃಷ್ಟಿಯಾಗಿದೆ. ಇಂಥ ಸ್ಥಿತಿ ಎದುರಾಗಲು ಕಾರಣ ಏನು ಎಂಬ ಕುರಿತು ಪರಾಮರ್ಶೆ ನಡೆಯಬೇಕು.ಒಳ್ಳೆಯವರನ್ನು ಸ್ವರ್ಗದಿಂದ ಕರೆತರಲು ಸಾಧ್ಯವಿಲ್ಲ.ನಮ್ಮ ಸುತ್ತಲಿನಿಂದಲೇ ಆರಿಸಬೇಕು~ ಎಂದರು.

 ಸಂಸದ ಪಿ.ಸಿ. ಮೋಹನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry