ರಾಜ್ಯಮಟ್ಟಕ್ಕೆ ಪಸರಿಸಿದ ಜನ ಜಾಗೃತಿ

7

ರಾಜ್ಯಮಟ್ಟಕ್ಕೆ ಪಸರಿಸಿದ ಜನ ಜಾಗೃತಿ

Published:
Updated:

ಮಾನವ ಸಂಪನ್ಮೂಲ ದೇಶದ ಅಮೂಲ್ಯ ಆಸ್ತಿ. ಸಭ್ಯ, ಸುಸಂಸ್ಕೃತ ಹಾಗೂ ವ್ಯಸನಮುಕ್ತ ನಾಗರಿಕರಿದ್ದಾಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಆದರೆ ಇಂದು ಅಧಿಕ ಸಂಪಾದನೆ, ಅತಿಯಾದ ಸಂತೋಷ, ದುಃಖ, ಖಿನ್ನತೆ, ಸಹವಾಸ ದೋಷ, ಮೂಢನಂಬಿಕೆ, ಮೋಜು ಇತ್ಯಾದಿ ಹತ್ತು - ಹಲವು ಕಾರಣಗಳಿಂದ ಜನರು ಮದ್ಯವ್ಯಸನಕ್ಕೆ ಬಲಿಯಾಗುತ್ತಾರೆ. ಹವ್ಯಾಸ ಅಭ್ಯಾಸವಾಗಿ, ಅಭ್ಯಾಸ ಚಟವಾಗುತ್ತದೆ.

 

ಇದರಿಂದಾಗಿ ಕೊಲೆ, ಸುಲಿಗೆ, ಅನ್ಯಾಯ, ಅತ್ಯಾಚಾರ, ದರೋಡೆ ಮೊದಲಾದ ಸಮಾಜ ಬಾಹಿರ ಚಟುವಟಿಕೆಗಳು ನಿರಂತರ ನಡೆಯುತ್ತವೆ. ಇದರಲ್ಲಿ ಭಾಗಿಯಾಗುವವರು ಹೆಚ್ಚಿನವರು ಯುವಜನತೆ ಎಂಬುದು ತೀರಾ ಆತಂಕಕಾರಿ.ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ 21ವರ್ಷಗಳ ಹಿಂದೆ ಬೆಳ್ತಂಗಡಿ ತಾಲ್ಲೂಕು ಮಟ್ಟದಲ್ಲಿ ಜನಜಾಗೃತಿ ವೇದಿಕೆ ಪ್ರಾರಂಭಿಸಲಾಯಿತು. ಆರೋಗ್ಯಪೂರ್ಣ ಸಮಾಜ ನಿರ್ಮಾಣ, ದುಶ್ಚಟದ ಹಾನಿ ಬಗ್ಗೆ ಆರಿವು ಮೂಡಿಸುವುದು, ಸಮಾಜಬಾಹಿರ ಚಟುವಟಿಕೆ (ಜೂಜು, ಕೋಳಿ ಅಂಕ) ವಿರುದ್ಧ ಜನಾಭಿಪ್ರಾಯ ಮೂಡಿಸುವುದು, ಅಕ್ರಮ ಸಾರಾಯಿ ದಂಧೆ, ಕಳ್ಳಭಟ್ಟಿ ಮಾರಾಟ ತಡೆಯುವುದು, ಮದ್ಯವ್ಯಸನಿಗಳಿಗೆ ಸಮುದಾಯ ಚಿಕಿತ್ಸಾ ಶಿಬಿರ ಏರ್ಪಡಿಸುವುದು, ಜನಾಭಿಪ್ರಾಯ ಸಂಗ್ರಹ, ಸಾಮರ್ಥ್ಯ ವರ್ಧನೆ ಮತ್ತು ಹಕ್ಕೊತ್ತಾಯ, ನವಜೀವನ ಸಮಿತಿ ಮೂಲಕ ವ್ಯಸನಮುಕ್ತರ ಯೋಗಕ್ಷೇಮ ಚಿಂತನೆ ಈ ವೇದಿಕೆಯ ಉದ್ದೇಶ.ಮಾಹಿತಿ ಶಿಬಿರ, ವಿಚಾರ ಸಂಕಿರಣ, ಸಮಾವೇಶ, ಜಾಥಾ, ಮನೆ ಭೇಟಿ ಕಾರ್ಯಕ್ರಮ, ಬೀದಿ ನಾಟಕ, ಗ್ರಾಮ ಸುಭಿಕ್ಷಾ ಕಾರ್ಯಕ್ರಮಗಳ ಮೂಲಕ ಮದ್ಯಪಾನದ ವಿರುದ್ಧ ಜನಜಾಗೃತಿ ಮೂಡಿಸಲಾಗುತ್ತದೆ. ಯೋಗ, ಧ್ಯಾನ, ಪ್ರಾರ್ಥನೆ, ವ್ಯಾಯಾಮ, ಚಿಂತನ - ಮಂಥನ, ಗುಂಪು ಸಲಹೆ, ಕೌಟುಂಬಿಕ ಸಲಹೆ, ಗುಂಪು ಚರ್ಚೆ, ಆಟೋಟ, ಭಜನೆ ಮುಂತಾದ ಚಟುವಟಿಕೆಯಿಂದ ಮದ್ಯವ್ಯಸನಿಗಳ ಮನಪರಿವರ್ತನೆ ಮಾಡಲಾಗುತ್ತದೆ.70ಸಾವಿರ ಮಂದಿ ವ್ಯಸನಮುಕ್ತರು: ಕಳೆದ 21 ವರ್ಷಗಳಲ್ಲಿ 532 ಮದ್ಯವರ್ಜನ ಶಿಬಿರಗಳ ಮೂಲಕ 32,225 ಮಂದಿ ಮದ್ಯಪಾನ ತ್ಯಜಿಸಿ ಆದರ್ಶ ಜೀವನ ನಡೆಸುತ್ತಿದ್ದಾರೆ. ಜನಜಾಗೃತಿಯ ಪ್ರೇರಣೆ ಮತ್ತು ಚಿಕಿತ್ಸೆಯಿಂದ 70ಸಾವಿರಕ್ಕೂ ಅಧಿಕ ಮದ್ಯವ್ಯಸನಿಗಳನ್ನು ಮದ್ಯಮುಕ್ತರನ್ನಾಗಿ ಮಾಡಲಾಗಿದೆ.ಪಾನಮುಕ್ತರ ಸಮಿತಿಗಳನ್ನು ರಚಿಸಿ ಅವರಿಗೆ `ನವಜೀವನ ಸಮಿತಿ ಸದಸ್ಯ~ ಪ್ರಮಾಣಪತ್ರ ನೀಡಿ ಗಾಂಧಿ ಜಯಂತಿಯಂದು ಅವರನ್ನು ಅಭಿನಂದಿಸಲಾಗುತ್ತದೆ. ಗ್ರಾಮಾಭಿವೃದ್ಧಿ ಯೋಜನೆಯ ಸ್ವ- ಸಹಾಯ ಸಂಘಗಳ ಮೂಲಕ ಉಳಿತಾಯ ಮಾಡಲು ಪ್ರೇರೇಪಿಸಲಾಗುತ್ತದೆ. ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮೂಲಕ ವರ್ಷಕ್ಕೆ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ರಾಜ್ಯವ್ಯಾಪಿ ಕಾರ್ಯಕ್ರಮ: ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದೇ 8ರಿಂದ ಇದೇ 15 ರ ವರೆಗೆ ಬೆಂಗಳೂರಿನಲ್ಲಿ ಬಸವನಗುಡಿಯಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಮದ್ಯವರ್ಜನ ಶಿಬಿರ ಆಯೋಜಿಸಲಾಗಿದೆ. ರಾಜ್ಯ ಮಟ್ಟದ ಜನಜಾಗೃತಿ ವೇದಿಕೆಯನ್ನು ಉಪಮುಖ್ಯಮಂತ್ರಿ ಆರ್.ಅಶೋಕ್ ಇದೇ 12 ರಂದು ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೆ.ಪಿ.ಸಿ.ಸಿ ಆಧ್ಯಕ್ಷ ಜಿ.ಪರಮೇಶ್ವರ್, ಸಂಸದ ಆನಂತಕುಮಾರ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ರವಿ ಸುಬ್ರಹ್ಮಣ್ಯ ಭಾಗವಹಿಸುವರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry