ರಾಜ್ಯಮಟ್ಟದ ವಸ್ತುಪ್ರದರ್ಶನಕ್ಕೆ ಚಾಲನೆ

7

ರಾಜ್ಯಮಟ್ಟದ ವಸ್ತುಪ್ರದರ್ಶನಕ್ಕೆ ಚಾಲನೆ

Published:
Updated:

ಮೈಸೂರು: ನಗರದ ವಿದ್ಯಾವಿಕಾಸ ಎಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳ ರಾಜ್ಯಮಟ್ಟದ ವಸ್ತು ಪ್ರದರ್ಶನ ಶುಕ್ರವಾರ ಆರಂಭವಾಯಿತು.ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಎಕ್ಸಿಬಿಷನ್‌ಲ್ಲಿ ಸಿವಿಲ್, ಮೆಕಾನಿಕಲ್, ಆಟೋಮೋಬೈಲ್ ಸೇರಿದಂತೆ 11 ವಿಭಾಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಾದರಿ (ಮಾಡೆಲ್)ಗಳು ಗಮನ ಸೆಳೆದವು. ರೋಬೋಟ್, ರಿಮೋಟ್ ಕಂಟ್ರೋಲ್ ವಿಮಾನ, ವಿದ್ಯುತ್ ಕಾರ್ಡ್, ನಿದ್ದೆಯ ಶೋಧಕ (ಡ್ರೌಸಿ ಡಿಟೆಕ್ಟರ್) ಸೇರಿದಂತೆ ನೂರಾರು ಮಾದರಿಗಳು ಪ್ರದರ್ಶನಗೊಂಡವು.ಗಂಗಾವತಿ ತಾಲ್ಲೂಕಿನ ಎಂಎಸ್‌ಎಂಎಸ್ ಗ್ರಾಮೀಣ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿದ್ಯುತ್ ಉಳಿತಾಯದ ಪ್ರೊಜೆಕ್ಟ್ ವಿಶೇಷವಾಗಿತ್ತು. ಮೊಬೈಲ್ ಸಿಮ್ ಕಾರ್ಡ್‌ನಂತೆ ವಿದ್ಯುತ್ ಸಂರಕ್ಷಕ ಕಾರ್ಡ್ ಅನ್ನು ಅವರು ಅನ್ವೇಷಿಸಿದ್ದಾರೆ. ಕೆಇಬಿಯಿಂದ ಕಾರ್ಡ್ ಅನ್ನು ಕೊಂಡು ವಿದ್ಯುತ್ ಬಳಸುವ ಈ ವಿನೂತನ ಮಾದರಿ ಗಮನ ಸೆಳೆಯಿತು.ಕಾರ್ಡ್‌ನಲ್ಲಿರುವ ಕರೆನ್ಸಿ ಮೌಲ್ಯಕ್ಕೆ ಅನುಗುಣವಾಗಿ ಮನೆಗೆ ವಿದ್ಯುತ್ ಸರಬರಾಜು ಆಗುತ್ತದೆ. ಹೀಗಾಗಿ ವಿದ್ಯುತ್ ಕಂಪೆನಿಗಳ ನೌಕರರು ಎಲ್ಲ ಮನೆಗಳಿಗೆ ಮೀಟರ್ ಅಳೆಯಲು ಹೋಗುವ ತಾಪತ್ರಯ ಇರುವುದಿಲ್ಲ. ಅಲ್ಲದೇ ಕಂಪೆನಿಗಳಿಗೆ ಇದು ಹಣ ಗಳಿಸುವ ಯೋಜನೆ ಕೂಡ ಹೌದು. ಗ್ರಾಹಕರು ತಾವು ಉಪಯೋಗಿಸುವುದಕ್ಕೂ ಮುನ್ನವೇ ವಿದ್ಯುತ್‌ಗೆ ಹಣ ಪಾವತಿ ಮಾಡಬೇಕು. ಇದರಿಂದ ವಿದ್ಯುತ್ ಸೋರಿಕೆಯನ್ನು ತಡೆಗಟ್ಟಬಹುದು.ಮಂಗಳೂರಿನ ಪಿ.ಎ. ಪಾಲಿಟೆಕ್ನಿಕ್ ಸೈಯದ್ ಸದಾಉಲ್ಲಾ ಮತ್ತು ಯತೀಶ್ ಅವರ ನಿದ್ದೆ ಶೋಧಕ ಕೂಡ ಎಕ್ಸಿಬಿಷನ್ ಆಕರ್ಷಕ ಮಾಡೆಲ್‌ಗಳಲ್ಲಿ ಒಂದಾಗಿತ್ತು. ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ನಿದ್ದೆಗೆ ಜಾರುವ ಚಾಲಕರನ್ನು ಇದು ಪತ್ತೆ ಹಚ್ಚಿ, ಎಚ್ಚರಿಸುತ್ತದೆ. ಇದನ್ನು ವಾಹನ ಹಾಗೂ ರೈಲುಗಳಲ್ಲಿ ಅಳವಡಿಸುವುದರಿಂದ ಬಹುಪಾಲು ಅಪಘಾತಗಳನ್ನು ತಡೆಗಟ್ಟಬಹುದು ಎಂದು ವಿದ್ಯಾರ್ಥಿಗಳಿಬ್ಬರು ವಿವರಿಸಿದರು.ಹಗರಿಬೊಮ್ಮನಹಳ್ಳಿಯ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿಗಳು ಎಟಿಎಂ ಕೇಂದ್ರ ಹಾಗೂ ಜೈಲುಗಳಲ್ಲಿನ ಭದ್ರತೆ ಕುರಿತು, ಬಾಗಲಕೋಟೆಯ ಗುಳೇದಗುಡ್ಡದ ಬಿವಿವಿ ಸಂಘದ ಎಸ್.ಆರ್. ವಸ್ತ್ರದ್ ಗ್ರಾಮೀಣ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಮಣ್ಣಿನಿಂದ ಪ್ರಿಂಟಿಂಗ್ ಬ್ಲಾಕ್ ತಯಾರಿಕೆಯ ಮಾದರಿ ಪ್ರದರ್ಶಿಸಿದರು.ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಎನ್.ಡಿ.ಪ್ರಸಾದ್ ಎಕ್ಸಿಬಿಷನ್ ಉದ್ಘಾಟಿಸಿದರು. ಎಟಿಎಸ್ ಜಂಟಿ ನಿರ್ದೇಶಕ ನಿರಂಜನ್ ದಾಸ್ ರಾಜ್‌ಬನ್, ಸಿಡಿಸಿ ಜಂಟಿ ನಿರ್ದೇಶಕ ಎಸ್.ವಿಜಯ್ ಕುಮಾರ್, ಕಮಲಾಕ್ಷಿ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವಿಶ್‌ಗೌಡ, ಪ್ರಾಂಶುಪಾಲ ಬಿ.ಚಂದ್ರಶೇಖರ್ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry