ರಾಜ್ಯಸಭೆಯಲ್ಲಿ ಚರ್ಚೆ ಸಾಧ್ಯತೆ

7
ಆಹಾರ ಭದ್ರತಾ ಮಸೂದೆ

ರಾಜ್ಯಸಭೆಯಲ್ಲಿ ಚರ್ಚೆ ಸಾಧ್ಯತೆ

Published:
Updated:

ನವದೆಹಲಿ (ಐಎಎನ್‌ಎಸ್): ಲೋಕಸಭೆಯ ಒಪ್ಪಿಗೆ ಪಡೆದಿರುವ ಕೇಂದ್ರದ ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಆಹಾರ ಭದ್ರತಾ ಮಸೂದೆ ಕುರಿತು ಸೋಮವಾರ ರಾಜ್ಯಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.ಮೇಲ್ಮನೆಯಲ್ಲಿ ಆಡಳಿತರೂಢ ಯುಪಿಎ ಬಹುಮತ ಹೊಂದಿಲ್ಲ. ಆದರೂ, ಇತರ ಪಕ್ಷಗಳ ಬೆಂಬಲದೊಂದಿಗೆ ಮಸೂದೆಗೆ ಒಪ್ಪಿಗೆ ದೊರೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.ಕೇಂದ್ರ ಸರ್ಕಾರ ಈಗಾಗಲೇ ಸಂಸತ್ತಿನ ಮುಂಗಾರು ಅಧಿವೇಶನವನ್ನು ಸೆಪ್ಟೆಂಬರ್ 6ರ ವರೆಗೆ ವಿಸ್ತರಿಸಿದೆ. ವಿರೋಧ ಪಕ್ಷಗಳು ಸೂಚಿಸಿದ್ದ 305 ತಿದ್ದುಪಡಿಗಳನ್ನು ತಿರಸ್ಕರಿಸಿ, ಸರ್ಕಾರದ 11 ತಿದ್ದುಪಡಿ ಅಂಗೀಕರಿಸುವುದರೊಂದಿಗೆ ಮಸೂದೆ ಲೋಕಸಭೆಯ ಒಪ್ಪಿಗೆ ಪಡೆದುಕೊಂಡಿತ್ತು.ಭಾರತದ ಒಟ್ಟು ಜನಸಂಖ್ಯೆಯಲ್ಲಿ (123 ಕೋಟಿ)  2/3ರಷ್ಟು ಜನರಿಗೆ ಸಬ್ಸಿಡಿ ದರದಲ್ಲಿ ಆಹಾರ ಪೂರೈಸಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಆಹಾರ ಧಾನ್ಯ ಪೂರೈಕೆಗೆ ತಗಲುವ ವೆಚ್ಚವನ್ನು ಕೇಂದ್ರ ಭರಿಸಲಿದೆ. ಇದೇ ವೇಳೆ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದೆ.ಮಸೂದೆಯನ್ನು ಮೊದಲ ಬಾರಿಗೆ 2011ರ ಡಿಸೆಂಬರ್‌ನಲ್ಲಿ ಮಂಡಿಸಲಾಗಿತ್ತು. ಸುಮಾರು ಒಂದು ವರ್ಷಕ್ಕೂ ಹೆಚ್ಚು ಸಮಯ ಸಂಸತ್ತಿನ ಸ್ಥಾಯಿ ಸಮಿತಿ ಬಳಿಯೇ ಉಳಿದಿತ್ತು. ಬಳಿಕ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿಗೊಳಿಸಿತ್ತು. ಸಂಸತ್ತಿನ ಎರಡು ಮನೆಗಳಲ್ಲಿ ಮಸೂದೆ ಒಪ್ಪಿಗೆ ಪಡೆದ ಬಳಿಕ ರಾಷ್ಟ್ರಪತಿಯವರ ಹಸ್ತಾಕ್ಷರಕ್ಕೆ ಕಳುಹಿಸಿಕೊಡಲಾಗುತ್ತದೆ. ನಂತರ ಅದು ಕಾಯ್ದೆಯಾಗಿ ಜಾರಿಗೆ ಬರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry