ಸೋಮವಾರ, ಜೂನ್ 21, 2021
24 °C

ರಾಜ್ಯಸಭೆಯಲ್ಲೂ ಎನ್‌ಸಿಟಿಸಿ ಪರೀಕ್ಷೆ ಪಾಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಷ್ಟ್ರಪತಿಗಳ ಭಾಷಣದಲ್ಲಿ ಪ್ರಸ್ತಾಪಿಸಲಾಗಿದ್ದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ)ದ ವಿಚಾರಕ್ಕೆ ತಿದ್ದುಪಡಿ ತರಲು ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಮುಂದಿಟ್ಟಿದ್ದ ತಿದ್ದುಪಡಿಗಳಿಗೆ ಸೋಲಾಗಿದ್ದು, `ಎನ್‌ಸಿಟಿಸಿ~ ಪರೀಕ್ಷೆಯಲ್ಲಿ ಸರ್ಕಾರ ಮೇಲ್ಮನೆಯಲ್ಲಿಯೂ ಪಾಸಾಗಿದೆ.ಮಿತ್ರ ಪಕ್ಷಗಳಾದ ಎಸ್‌ಪಿ, ಬಿಎಸ್‌ಪಿಗಳ ನೆರವು ಹಾಗೂ ತೃಣಮೂಲ ಕಾಂಗ್ರೆಸ್ ಗೈರು ಹಾಜರಿಯಿಂದ ಸರ್ಕಾರ ಮೇಲ್ಮನೆಯಲ್ಲಿ ಮುಜುಗರಕ್ಕೆ ಒಳಗಾಗುವುದು ತಪ್ಪಿತು. 245 ಸದಸ್ಯರನ್ನು ಹೊಂದಿರುವ ರಾಜ್ಯಸಭೆಯಲ್ಲಿ ಸರ್ಕಾರ 97 ಸದಸ್ಯರನ್ನು ಹೊಂದಿದೆ.ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಒಪ್ಪಿಕೊಳ್ಳದ ಹೊರತೂ `ಎನ್‌ಸಿಟಿಸಿ~ ಸ್ಥಾಪನೆ ವಿಚಾರದಲ್ಲಿ ಮುಂದುವರಿಯಬಾರದು ಎಂದು ಆಗ್ರಹಿಸಿ ಸಿಪಿಎಂ ಹಾಗೂ ಬಿಜೆಪಿ ಒಟ್ಟು ನಾಲ್ಕು ತಿದ್ದುಪಡಿ ಮುಂದಿಟ್ಟಿದ್ದವು.105ರಿಂದ 82 ಮತಗಳ ಅಂತರದಲ್ಲಿ ನಾಲ್ಕೂ ತಿದ್ದುಪಡಿಗಳಿಗೂ ಸೋಲಾಯಿತು. 17 ಸದಸ್ಯರನ್ನು ಹೊಂದಿರುವ ಬಿಎಸ್‌ಪಿ, 4 ಸದಸ್ಯರನ್ನು ಹೊಂದಿರುವ ಎಸ್‌ಪಿ ಸರ್ಕಾರದ ಜತೆ ಮತ ಹಾಕಿದವು. ತೃಣಮೂಲ ಕಾಂಗ್ರೆಸ್‌ನ 6 ಸದಸ್ಯರು ಗೈರು ಹಾಜರಾಗಿದ್ದರು.ಸಿಪಿಐ ಹಾಗೂ ಎಐಎಡಿಎಂಕೆ ಒತ್ತಾಯದ ಮೇರೆಗೆ ಶ್ರೀಲಂಕಾ ತಮಿಳರಿಗೆ ಸಂಬಂಧಿಸಿ ಇನ್ನೂ ನಾಲ್ಕು ತಿದ್ದುಪಡಿಗಳನ್ನು ಮತಕ್ಕೆ ಹಾಕಲಾಯಿತು. ಎನ್‌ಡಿಎ ಹಾಗೂ ಎಡಪಕ್ಷಗಳು ಅದಾಗಲೇ ಸಭಾತ್ಯಾಗ ಮಾಡಿದ್ದರಿಂದ ಸರ್ಕಾರಕ್ಕೆ ಗೆಲುವು ಸಿಕ್ಕಿತು. ಸದನದಲ್ಲಿದ್ದ 94 ಸದಸ್ಯರ ಪೈಕಿ 84 ಜನ ಸರ್ಕಾರದ ಪರವಾಗಿ ಮತ ಹಾಕಿದರು.  ಈ ಮಧ್ಯೆ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.ಪ್ರಧಾನಿ ಉತ್ತರ: ಇದಕ್ಕೂ ಮುನ್ನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮನಮೋಹನ್ ಸಿಂಗ್, `ಎನ್‌ಸಿಟಿಸಿ~ ಕುರಿತಾಗಿ ಮುಂದಿನ ಹೆಜ್ಜೆ ಇಡುವ ಮುನ್ನ ಎಲ್ಲ ರಾಜ್ಯಗಳ ಸಲಹೆ ಪಡೆಯಲಾಗುವುದು. ಈ ಸಂಬಂಧ ಏಪ್ರಿಲ್ 16ರಂದು ಎಲ್ಲ ಮುಖ್ಯಮಂತ್ರಿಗಳ ಸಭೆ ಕರೆಯಲಾಗಿದೆ ಎಂದು ಸದನಕ್ಕೆ ತಿಳಿಸಿದರು.ಭಯೋತ್ಪಾದನೆ ಹಾಗೂ ಎಡಪಂಥೀಯ ಉಗ್ರವಾದವನ್ನು ಹತ್ತಿಕ್ಕಲು `ಎನ್‌ಸಿಟಿಸಿ~ ಅಗತ್ಯವಾಗಿದೆ.  ಒಡಿಶಾದಲ್ಲಿ ಇಬ್ಬರು ಇಟಲಿ ಪ್ರಜೆಗಳನ್ನು ನಕ್ಸಲರು ಅಪಹರಿಸಿದ ಘಟನೆಯನ್ನು ಉದಾಹರಿಸಿದ ಪ್ರಧಾನಿ ನಾವು ಜಾಗರೂಕರಾಗದಿದ್ದಲ್ಲಿ ಎಂತಹ ಅಪಾಯ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಇದು ನಿದರ್ಶನ ಎಂದರು.`ಎನ್‌ಸಿಟಿಸಿ~ ಸ್ಥಾಪಿಸುವಾಗ ಗಣತಂತ್ರ ವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆಯನ್ನೂ ಸಿಂಗ್ ಸದನಕ್ಕೆ ನೀಡಿದರು.ಪ್ರಧಾನಿ ಉತ್ತರದಿಂದ ತೃಪ್ತರಾಗದ ವಿರೋಧ ಪಕ್ಷಗಳು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ `ಎನ್‌ಸಿಟಿಸಿ~ ವಿಚಾರದಲ್ಲಿ ಯಾವ ಹೆಜ್ಜೆಯನ್ನೂ ಇಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುವಂತೆ ಸರ್ಕಾರವನ್ನು ಒತ್ತಾಯಿಸಿದವು.ಕಾನೂನು ಸುವ್ಯವಸ್ಥೆ ರಾಜ್ಯಗಳ ಹೊಣೆಯಾಗಿದೆ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ, `ಎನ್‌ಸಿಟಿಸಿ~ಗೆ ವ್ಯಕ್ತಿಗಳ ಬಂಧಿಸುವ ಅಧಿಕಾರವನ್ನೂ ನೀಡಿರುವುದು ರಾಜ್ಯಗಳ ಹಕ್ಕನ್ನು ಅತಿಕ್ರಮಿಸಿದಂತೆ ಆಗುತ್ತದೆ ಎಂದರು.

 

ದೌರ್ಜನ್ಯ: ನಿಲುವು ಪ್ರಕಟಿಸಲು ಒತ್ತಾಯ

ನವದೆಹಲಿ (ಐಎಎನ್‌ಎಸ್): ಶ್ರೀಲಂಕಾ ಸೇನಾಪಡೆ ತಮಿಳು ನಾಗರಿಕರ ಮೇಲೆ ನಡೆಸಿದ ದೌರ್ಜನ್ಯದ ವಿರುದ್ಧ ತಮ್ಮ ನಿಲುವನ್ನು ಪ್ರಕಟಿಸಬೇಕು ಎಂದು ಮಂಗಳವಾರ ಸಂಸತ್ತಿನಲ್ಲಿ ವಿರೋಧಪಕ್ಷಗಳು ಪ್ರಧಾನಿಯವರನ್ನು ಒತ್ತಾಯಿಸಿದವು.ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ ಸೇನೆ ನಡೆಸಿದ ಯುದ್ಧದ ಸಮಯದಲ್ಲಿ ಉಂಟಾದ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯಲ್ಲಿ ಗೊತ್ತುವಳಿಯೊಂದನ್ನು ಬೆಂಬಲಿಸುವುದಾಗಿ ಪ್ರಧಾನಿ ತಿಳಿಸಿದ್ದರೂ, ಎಐಎಡಿಎಂಕೆ ಸೇರಿದಂತೆ ವಿರೋಧ ಪಕ್ಷದ ಕೆಲವು ಸಂಸದರು ತಮಿಳು ನಾಗರಿಕರ ದೌರ್ಜನ್ಯ ಕುರಿತು ತಾವು ತೆಗೆದು ಕೊಳ್ಳುವ ನಿಲುವನ್ನು ಪ್ರಕಟಿಸಬೇಕೆಂದು  ಒತ್ತಾಯಿಸಿದ್ದಾರೆ.

 

ರೈಲು ಪ್ರಯಾಣ ದರ ಏರಿಕೆಗೆ ಡಿಎಂಕೆ ವಿರೋಧ

ನವದೆಹಲಿ (ಪಿಟಿಐ): ಹೆಚ್ಚಿಸಿದ ರೈಲು ಪ್ರಯಾಣ ದರವನ್ನು ವಾಪಸ್ ಪಡೆಯಲು ತೃಣಮೂಲ ಕಾಂಗ್ರೆಸ್ ಸಂಸದರು ಆಗ್ರಹಿಸಿರುವಂತೆ ಯುಪಿಎ ಸರ್ಕಾರದ ಇನ್ನೊಂದು ಮಿತ್ರ ಪಕ್ಷವಾದ ಡಿಎಂಕೆ ಸಹ ಒತ್ತಾಯ ಮಾಡಿದೆ. ರೈಲ್ವೆ ಬಜೆಟ್ ಮೇಲೆ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಎಂಕೆ ಸಂಸದ ಇ. ಜಿ. ಸುಗವನಂ ಅವರು ಏರಿಸಿರುವ ಪ್ರಯಾಣ ದರವನ್ನು ಇಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಶೇಕಡಾ 35ರಷ್ಟು ಏರಿಕೆಯಾಗುವುದರಿಂದ ಪ್ರಯಾಣಿಕರಿಗೆ ಹೊರೆಯಾಗುತ್ತದೆ. ಆದ್ದರಿಂದ ಏರಿಕೆಯ ನಿರ್ಧಾರವನ್ನು ಪರಾಮರ್ಶಿಸಬೇಕು ಎಂದು ಎಂದು ಸಲಹೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.