ರಾಜ್ಯಸಭೆ ಉಪ ಚುನಾವಣೆ: ಧನಂಜಯ ಕುಮಾರ್ ಬಿಜೆಪಿ ಅಭ್ಯರ್ಥಿ ?

7

ರಾಜ್ಯಸಭೆ ಉಪ ಚುನಾವಣೆ: ಧನಂಜಯ ಕುಮಾರ್ ಬಿಜೆಪಿ ಅಭ್ಯರ್ಥಿ ?

Published:
Updated:

ಬೆಂಗಳೂರು: ರಾಜ್ಯಸಭೆಯ ಒಂದು ಸ್ಥಾನಕ್ಕೆ ಮಾರ್ಚ್ 3ರಂದು ನಡೆಯುವ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನವದೆಹಲಿಯಲ್ಲಿನ ಕರ್ನಾಟಕದ ವಿಶೇಷ ಪ್ರತಿನಿಧಿ ವಿ.ಧನಂಜಯ ಕುಮಾರ್ ಅವರು ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ.

ಜೆಡಿಎಸ್‌ನ ಎಂ.ರಾಜಶೇಖರಮೂರ್ತಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಇದೇ 14ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಬಿಜೆಪಿ ಅಧಿಕೃತವಾಗಿ ಇನ್ನೂ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ. ಆದರೆ ಧನಂಜಯ ಕುಮಾರ್ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದು, ಕೆಲವರು ಅವರ ಪರವಾಗಿ ಲಾಬಿ ಮಾಡುತ್ತಿದ್ದಾರೆ.

ಈಗಿರುವ ಸಂಖ್ಯಾಬಲದ ಆಧಾರದ ಮೇಲೆ ಈ ಸ್ಥಾನವನ್ನು ಬಿಜೆಪಿ ಸುಲಭವಾಗಿ ಪಡೆಯಲಿದೆ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆಗಳು ತುಂಬಾ ಕಡಿಮೆ. ಪಕ್ಷೇತರ ಸದಸ್ಯ ವರ್ತೂರು ಪ್ರಕಾಶ್, ಸ್ಪೀಕರ್ ಸೇರಿದಂತೆ ಬಿಜೆಪಿ ವಿಧಾನ ಸಭೆಯಲ್ಲಿ 107 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ 71 ಮತ್ತು ಜೆಡಿಎಸ್ 27 ಸದಸ್ಯರನ್ನು ಹೊಂದಿದೆ. ನಾಮಕರಣ ಸದಸ್ಯರಿಗೆ ಮತದಾನದ ಹಕ್ಕಿಲ್ಲ. 19 ಸ್ಥಾನಗಳು ತೆರವಾಗಿವೆ.

16 ಮಂದಿ ಅನರ್ಹ ಶಾಸಕರ ಪ್ರಕರಣ ಸದ್ಯ ನ್ಯಾಯಾಲಯದ ಮುಂದಿದ್ದು, ಒಂದು ವೇಳೆ ನ್ಯಾಯಾಲಯ ಚುನಾವಣೆಗೂ ಮೊದಲೇ ತೀರ್ಪು ನೀಡಿ ಸ್ಪೀಕರ್ ಆದೇಶವನ್ನು ರದ್ದುಪಡಿಸಿದರೆ ಆಗ ಇಡೀ ಚುನಾವಣಾ ಚಿತ್ರಣವೇ ಬದಲಾಗಲಿದೆ. ಬಿಜೆಪಿಯ 11 ಅನರ್ಹ ಶಾಸಕರ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೆ, ಐವರು ಪಕ್ಷೇತರ ಶಾಸಕರ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ಪೂರ್ಣಗೊಂಡಿದ್ದು, ತೀರ್ಪು ಪ್ರಕಟವಾಗುವುದಷ್ಟೇ ಬಾಕಿ ಇದೆ.

ಈಗ ಉಪ ಚುನಾವಣೆಯಲ್ಲಿ ಆಯ್ಕೆಯಾಗುವವರ ಅವಧಿ 2012ರ ಏಪ್ರಿಲ್ 2ಕ್ಕೆ ಮುಗಿಯಲಿದೆ. ಹೀಗಾಗಿ ಯಾರೇ ಆಯ್ಕೆಯಾದರೂ ಒಂದು ವರ್ಷದ ಅವಧಿಯಷ್ಟೇ ಸಿಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry