ರಾಜ್ಯಸಭೆ ಚುನಾವಣೆ: ಧನಂಜಯ ಬಿಜೆಪಿ ಅಭ್ಯರ್ಥಿ?

7

ರಾಜ್ಯಸಭೆ ಚುನಾವಣೆ: ಧನಂಜಯ ಬಿಜೆಪಿ ಅಭ್ಯರ್ಥಿ?

Published:
Updated:

ನವದೆಹಲಿ: ಹಿರಿಯ ರಾಜಕಾಆರರಣಿ ಎಂ.ರಾಜಶೇಖರಮೂರ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ವಿ.ಧನಂಜಯ ಕುಮಾರ್ ಸ್ಪರ್ಧೆ ಬಹುತೇಕ ಖಚಿತವಾಗಿದೆ.ಲೋಕಸಭೆಯ ಮಾಜಿ ಸದಸ್ಯ ಬಳ್ಳಾರಿಯ ಕೋಳೂರು ಬಸವನಗೌಡ, ಬೀದರ್ ಜಿಲ್ಲೆಯ ರಘುನಾಥ ಮಲ್ಕಾಪುರೆ ಹಾಗೂ ದಯಾನಂದ ಪೈ ಸೇರಿದಂತೆ ಹಲವರು ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರೂ ಅಂತಿಮವಾಗಿ ಧನಂಜಯ ಕುಮಾರ್ ಕಣಕ್ಕಿಳಿಯಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

ಮೂರ್ತಿಯವರು ಜಾತ್ಯತೀತ ಜನತಾದಳವನ್ನು ಪ್ರತಿನಿಧಿಸಿದ್ದರೂ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಆ ಪಕ್ಷ ತೀರ್ಮಾನಿಸಿಲ್ಲ. ಕಾಂಗ್ರೆಸ್‌ನಿಂದ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಸ್ತಾಪ ಬಂದರೆ ಪರಿಶೀಲಿಸಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.ಕೇಂದ್ರದ ಮಾಜಿ ಸಚಿವರೂ ಆದ ಧನಂಜಯ ಕುಮಾರ್ ಅವರನ್ನು ಕಣಕ್ಕಿಳಿಸಲು ಮುಖ್ಯಮಂತ್ರಿ ಒಲವು ತೋರಿದ್ದಾರೆ. ದೆಹಲಿಯಲ್ಲಿ ಈಚೆಗೆ ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷರಾದ ಅಡ್ವಾಣಿ ಅವರನ್ನು ಯಡಿಯೂರಪ್ಪ ಭೇಟಿ ಮಾಡಿದ ವೇಳೆ ಇವರನ್ನು ಕಣಕ್ಕಿಳಿಸುವ ಕುರಿತು ಪ್ರಸ್ತಾಪಿಸಿದರು.ಬಿಜೆಪಿ ಮುಖಂಡರಾದ ಸುಷ್ಮಾಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರೇ ಖುದ್ದಾಗಿ ಧನಂಜಯ ಕುಮಾರ್ ಹೆಸರನ್ನು ಹೇಳಿದ್ದಾರೆ. ಇದರಿಂದಾಗಿ ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ಸೇರಿದ ಇವರ ಸ್ಪರ್ಧೆ ಬಹುತೇಕ ಖಚಿತವಾಗಿದೆ.ಧನಂಜಯ ಕುಮಾರ್ ಸ್ಪರ್ಧೆಗೆ ಅವರ ಬದ್ಧ ವೈರಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಹಾಗೂ ಈಶ್ವರಪ್ಪ ವಿರೋಧ ಮಾಡಬಹುದು. ಆದರೆ, ಮುಖ್ಯಮಂತ್ರಿ ಇವರ ಪರ ಪಟ್ಟು ಹಿಡಿಯಲಿದ್ದಾರೆ. ಅಲ್ಲದೆ. ವರಿಷ್ಠರ ಬೆಂಬಲವೂ ಇರುವುದರಿಂದ ಸಮಸ್ಯೆ ಆಗಲಾರದು ಎಂದು ವಿಶ್ಲೇಷಿಸಲಾಗುತ್ತಿದೆ.ಬಳ್ಳಾರಿ ರೆಡ್ಡಿ ಸಹೋದರರು ವೀರಶೈವ ಸಮಾಜದ ಕೋಳೂರು ಬಸವನಗೌಡ, ರಾಜ್ಯ ಬಿಜೆಪಿ ಅಧ್ಯಕ್ಷ  ಕೆ.ಎಸ್.ಈಶ್ವರಪ್ಪ ಕುರುಬ ಸಮಾಜದ ಮಲ್ಕಾಪುರೆ ಅವರನ್ನು ಬೆಂಬಲಿಸುತ್ತಿದ್ದಾರೆ. ಉದ್ಯಮಿ ದಯಾನಂದ ಪೈ ಅವರಿಗೆ ಕೆಲವು ಆರ್‌ಎಸ್‌ಎಸ್ ಪ್ರಮುಖರ ‘ಆಶೀರ್ವಾದ’ವಿದೆ.ಮಾರ್ಚ್ 3ರಂದು ಚುನಾವಣೆ ನಡೆಯಲಿದ್ದು, ಫೆ.21ರಂದು ಸೋಮವಾರ ನಾಮಪತ್ರ ಸಲ್ಲಿಕೆಗೆ ಕಡೇ ದಿನ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲು ರಾಜ್ಯ ಬಿಜೆಪಿ ಪ್ರಮುಖರ ಸಮಿತಿ ಶೀಘ್ರದಲ್ಲಿಯೇ ಸಭೆ ಸೇರಲಿದೆ.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಚಿವ ಜಗದೀಶ್ ಶೆಟ್ಟರ್, ಮಾಜಿ ಅಧ್ಯಕ್ಷ ಡಿ.ವಿ.ಸದಾನಂದ ಗೌಡ ಮತ್ತಿತರರು ಸಭೆಯಲ್ಲಿ ಭಾಗವಹಿಸಲಿದ್ದಾರೆ.ಕುಮಾರಸ್ವಾಮಿ ಹೇಳಿಕೆ 

 ಈ ಮಧ್ಯೆ, ಸಾಮಾನ್ಯ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್‌ನಿಂದ ಸೂಕ್ತ ಪ್ರಸ್ತಾಪ ಬಂದರೆ ಪರಿಶೀಲಿಸಬಹುದೆಂದು ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ಹೇಳಿದ್ದಾರೆ.‘ಸುಪ್ರೀಂ ಕೋರ್ಟ್ ಮುಂದಿರುವ 11 ಬಿಜೆಪಿ ಶಾಸಕರ ಅನರ್ಹತೆ ಪ್ರಕರಣದ ತೀರ್ಪು ಹೊರಬಿದ್ದು, ಸ್ಪೀಕರ್ ಬೋಪಯ್ಯ ಕ್ರಮ ಅನೂರ್ಜಿತವಾದರೆ ಕಾಂಗ್ರೆಸ್ ಜೆಡಿಎಸ್ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ಒಂದು ಚಾನ್ಸ್ ತೆಗೆದುಕೊಳ್ಳಬಹುದು’ ಎಂಬುದು ಕುಮಾರ ಲೆಕ್ಕಾಚಾರ.ರಾಜಶೇಖರ ಮೂರ್ತಿ ಅವರ ರಾಜ್ಯಸಭಾ ಸದಸ್ಯತ್ವ ಅವಧಿಯು ಪೂರ್ಣಗೊಳ್ಳಲು ಕೇವಲ ಒಂದು ವರ್ಷ ಉಳಿದಿತ್ತು. ಹೀಗಾಗಿ ಹೊಸ ಸದಸ್ಯರ ಅವಧಿ 2012ರ ಏಪ್ರಿಲ್‌ಗೆ ಅಂತ್ಯವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry