ರಾಜ್ಯೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ

7

ರಾಜ್ಯೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ

Published:
Updated:

ಬೆಳಗಾವಿ: ನವೆಂಬರ್ 1ರಂದು ಜಿಲ್ಲಾ ಆಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲು ಶುಕ್ರವಾರ ನಿರ್ಧರಿಸಲಾಯಿತು.ಜಿಲ್ಲಾಧಿಕಾರಿ ಡಾ. ಏಕ್‌ರೂಪ್ ಕೌರ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅನುಕೂಲವಾಗುವಂತೆ ವಿವಿಧ ಸಮಿತಿಗಳನ್ನೂ ರಚಿಸಲಾಯಿತು.ನವೆಂಬರ್ 1 ರಂದು ಬೆಳಿಗ್ಗೆ 6 ರಿಂದ 7 ರವರೆಗೆ ಪ್ರಾರ್ಥನಾ ಮಂದಿರಗಳಲ್ಲಿ ವಿಶೇಷ ಪೂಜೆ ನಡೆಸಲಾಗುವುದು. ಬೆಳಿಗ್ಗೆ 9 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ರಾಷ್ಟ್ರ ಧ್ವಜಾರೋಹಣ ಮಾಡಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವರು. ನಂತರ ವಿವಿಧ ರೂಪಕಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.ರಾಜ್ಯೋತ್ಸವದ  ರೂಪಕಗಳ ಮೆರವಣಿಗೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿವಿಧ ಸಂಘ ಸಂಸ್ಥೆಗಳು ಇದೇ 24 ರೊಳಗೆ ತಮ್ಮ ಅರ್ಜಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಬೇಕು. ಅರ್ಜಿಗಳ ಜೊತೆಗೆ ತಾವು ಸಿದ್ಧಪಡಿಸುವ ರೂಪಕಗಳ ಬಗ್ಗೆ ಮಾಹಿತಿ ಹಾಗೂ ಅದರ ಮಾದರಿಯನ್ನು ನೀಡಬೇಕು.ಈ ಬಾರಿಯ ರಾಜ್ಯೋತ್ಸವದ ರೂಪಕಗಳ ಮೆರವಣಿಗೆಯಲ್ಲಿ ನಾಡಿನ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ರೂಪಕಗಳಿರಬೇಕು. ಇದರ ಜೊತೆಗೆ ವಿವಿಧ ಇಲಾಖೆಗಳು ಸಹ ಸರ್ಕಾರದ ಯೋಜನೆಗಳನ್ನು ಬಿಂಬಿಸುವ  ರೂಪಕಗಳನ್ನು ಸಿದ್ಧಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.ನ. 1ರಂದು ಸಂಜೆ 5.30ಕ್ಕೆ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯೋತ್ಸವದ ಅಂಗವಾಗಿ ನಗರದ ಪ್ರಮುಖ ಕಟ್ಟಡ ಹಾಗೂ ವರ್ತುಳಗಳಲ್ಲಿ ದೀಪಾಲಂಕಾರ ಮಾಡಲು ಸಭೆಯಲ್ಲಿ ಸೂಚಿಸಲಾಯಿತು.ಜಿಲ್ಲಾಧಿಕಾರಿ ಡಾ. ಏಕ್‌ರೂಪ್ ಕೌರ್, ಜಿಲ್ಲಾಡಳಿತದಿಂದ ಏರ್ಪಡಿಸಿರುವ ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಸರ್ಕಾರಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ಬಾಳಾಸಾಹೇಬ ಕಂಗ್ರಾಳಕರ, ಎಸ್‌ಪಿ ಸಂದೀಪ ಪಾಟೀಲ, ಮಾಜಿ ಮೇಯರ್ ಸಿದ್ಧನಗೌಡ ಪಾಟೀಲ ಸೇರಿದಂತೆ ವಿವಿಧ ಕನ್ನಡ ಪರ ಸಂಘಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡು ಸಲಹೆ-ಸೂಚನೆ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಚ್. ಚೆನ್ನೂರ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಎಸ್. ಚೌಗಲಾ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry