ಭಾನುವಾರ, ಏಪ್ರಿಲ್ 18, 2021
33 °C

ರಾಜ್ಯೋತ್ಸವ: ಕೊಡಗಿನಾದ್ಯಂತ ಸಂಭ್ರಮಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ:  ಶಾಲಾ ಮಕ್ಕಳ ನೃತ್ಯ... ಸಶಸ್ತ್ರ ಪಡೆಗಳ ಆಕರ್ಷಕ ಪಥ ಸಂಚಲನ... ಮೊಳಗಿದ ನಾಡಗೀತೆ ಹಾಗೂ ರೈತ ಗೀತೆ... ಇವು ನಗರದ ಕೋಟೆ ಆವರಣದಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವದ ನಿಮಿತ್ತ ಕಂಡು ಬಂದ ಸಂಭ್ರಮದ ಝಲಕ್.ಬೆಳಿಗ್ಗೆ 9 ಗಂಟೆ ಸುಮಾರಿಗೆ ಸುರಿದ ಹನಿಹನಿ ಮಳೆ - ಮಂಜು - ಚಳಿಯ ನಡುವೆ  ರಾಷ್ಟ್ರ ಧ್ವಜ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಸಚಿವ ಅಪ್ಪಚ್ಚು ರಂಜನ್ ಅವರು, ಇಂದು ಕನ್ನಡ ನಾಡಿಗೆ ಹಬ್ಬದ ಸಡಗರ. ಧೈರ್ಯ ಮತ್ತು ಶಾಂತಿಯ ಪ್ರತೀಕವಾದ ಹಳದಿ-ಕೆಂಪು ಬಣ್ಣದ ಕನ್ನಡ ಧ್ವಜ ಎಲ್ಲೆಡೆ ರಾರಾಜಿಸುತ್ತಿದೆ. ಇದು ಸದಾ ಕಾಲ ಜಾಗೃತವಾಗಿರಲು ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಪರಂಪರೆ ಇದೆ. ಈ ಭಾಷೆಯ ಬೆಳವಣಿಗೆಗೆ ನಾವಿಂದು ಜೈಕಾರ ಹಾಕುವುದರ ಜೊತೆಗೆ  ಇದನ್ನು ಬೆಳೆಸುವ ಮತ್ತು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.ವಿಶೇಷವಾಗಿ ಶಾಲಾ-ಕಾಲೇಜುಗಳು ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಹೆಚ್ಚಿನ ಕಾಳಜಿ ವಹಿಸಿ ಮಕ್ಕಳಿಗೆ ಕನ್ನಡವನ್ನು ಓದುವ, ಬರೆಯುವ ಕೌಶಲ್ಯ ಕಲಿಸಬೇಕು ಎಂದರು.ಭಾಷೆ ಬದುಕಿನ ಸಮೃದ್ಧಿಯ ಸಂಕೇತ. ಸಂಸ್ಕೃತಿಯ ಪ್ರತೀಕ. ಈ ದಿಸೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗಾಗಿ ಕೆಲಸ ಮಾಡುತ್ತೇನೆ ಎಂಬುದು ಹೆಮ್ಮೆಯ  ವಿಚಾರವಾದಾಗ, ಅಭಿಮಾನ ಮೂಡಿದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಅವರು ಹೇಳಿದರು.ಕೇಂದ್ರ ಸರ್ಕಾರ ಈಗಾಗಲೇ ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ಘೋಷಿಸಿದೆ. ಇದು ವಾಸ್ತವವಾಗಿ ಜಾರಿಯಾಗಿ ಅದರ ಲಾಭಗಳು ಭಾಷೆಗೆ ದಕ್ಕುವಂತೆ ನಾವೆಲ್ಲಾ ಸಂಘಟಿತ ಪ್ರಯತ್ನ ಮಾಡಬೇಕಾಗಿದೆ ಎಂದರು.ರಾಜ್ಯ ಇಂದು ಅಭಿವೃದ್ಧಿಯ ಮುಂಚೂಣಿಯಲ್ಲಿ ಇರುವುದು ಹೆಮ್ಮೆಯ ವಿಚಾರ. ಸ್ವಾತಂತ್ರ್ಯಾ ನಂತರ ರಾಜ್ಯವು ಕಲೆ, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಯ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ, ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಂಜನಪ್ಪ, ಅಪರ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್, ಉಪವಿಭಾಗಾಧಿಕಾರಿ ಜಿ.ಪ್ರಭು ಹಾಗೂ ಇತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.