ರಾಜ್ಯೋತ್ಸವ ಜಾಗೃತಿಗೆ ರಥಯಾತ್ರೆ

7

ರಾಜ್ಯೋತ್ಸವ ಜಾಗೃತಿಗೆ ರಥಯಾತ್ರೆ

Published:
Updated:

ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯೋತ್ಸವ, ಕನ್ನಡಕ್ಕೆ ದೊರಕಿರುವ ಎಂಟನೇ ಜ್ಞಾನಪೀಠ ಪ್ರಶಸ್ತಿ ಹಾಗೂ ಇಲ್ಲಿನ ಭುವನೇಶ್ವರಿ ಕನ್ನಡ ಸಂಘದ 42ನೇ ವರ್ಷಾಚರಣೆಯ ಅಂಗವಾಗಿ ತಾಲ್ಲೂಕಿನ ತಗೂಬಗೆರೆ, ಸಾಸಲು, ಮಧುರೆ, ದೊಡ್ಡಬೆಲವಂಗಲ ಹೋಬಳಿಗಳಲ್ಲಿ ಜಾಗೃತಿ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ನಾಡು, ನುಡಿ, ಪರಂಪರೆಗಳಗಳ ಸಾರವನ್ನು ಸಾರುವ ರಥಯಾತ್ರೆಗೆ ಗ್ರಾಮಸ್ಥರು ಹೃತ್ಪೂರ್ವಕ ಸ್ವಾಗತ ಕೋರಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ತ.ನ.ಪ್ರಭುದೇವ್, `ನೆಲ, ಜಲ, ಭಾಷೆ ಕುರಿತ ಹತ್ತಾರು ಸಮಸ್ಯೆಗಳು ಹಾಗೆಯೇ ಉಳಿದುಕೊಂಡು ಬಂದಿವೆ. ಪಟ್ಟುಬಿಡದೆ ಹೋರಾಟ, ಸಂಘಟನೆಯಿಂದ ಮಾತ್ರ ನ್ಯಾಯ ಸಿಗುವ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ `ಕನ್ನಡ ಜಾಗೃತಿ ಅಭಿಯಾನ-ಜಾಥಾ ರಥ~ವನ್ನು ಹಮ್ಮಿಕೊಂಡಿದ್ದೇವೆ. ಕನ್ನಡವನ್ನು ಸಬಲಗೊಳಿಸುವ ಮಹಾಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು.ಹಕ್ಕೊತ್ತಾಯ, ಹೋರಾಟ, ಕ್ರಿಯಾಶೀಲತೆಯಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಹೇಳುವವರಷ್ಟೇ ಆಗದೆ ಕೆಲಸ ಮಾಡುವವರೂ ಆಗಬೇಕು. ಕನ್ನಡ ಶಾಲೆಗಳು ಮುಚ್ಚುತ್ತಿರುವ, ಆಂಗ್ಲಭಾಷೆ ವ್ಯಾಪಿಸುತ್ತಿರುವ ಪ್ರವೃತ್ತಿಯಿಂದ ದೊಡ್ಡ ಹಾನಿ ಆಗುವುದು ಬಡ ಕನ್ನಡಿಗರಿಗೆ ಎಂಬುದನ್ನು ಮರೆಯಬಾರದು. ಆಡಳಿತದ ಎಲ್ಲಾ ಹಂತಗಳಲ್ಲೂ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಬಂದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಆದರೆ ಇದನ್ನು ತಿಳಿಯದೆ ಕಾಗದ ಪತ್ರಗಳು ಕನ್ನಡದಲ್ಲಿರಬೇಕು ಎಂಬ ಸಾದಾ ನೆಲೆಯಲ್ಲಿ ಕನ್ನಡವನ್ನು ಗ್ರಹಿಸಲಾಗುತ್ತಿದೆ. ಆಡಳಿತದಲ್ಲಿ ಜನರ ಪಾಲುದಾರಿಕೆ ಹೆಚ್ಚಿದರೆ ಕನ್ನಡ ತಾನಾಗಿಯೇ ಬಲಗೊಳ್ಳುತ್ತದೆ~ ಎಂದರು.`ಕಾನೂನು ಭಾಷೆಗೆ ಕನ್ನಡ ಸಜ್ಜುಗೊಂಡಿಲ್ಲ ಎಂಬುದು ಕುಂಟುನೆಪ. ಕನ್ನಡದಲ್ಲಿ ಕೋರ್ಟ್ ವ್ಯವಹಾರ ನಡೆದರೆ ಕಕ್ಷಿದಾರರಿಗೆ ಎಲ್ಲವೂ ಗೊತ್ತಾಗುತ್ತದೆ. ಅವರಿಗೆ ಪ್ರಶ್ನಿಸುವ, ವಿಚಾರಿಸುವ ವಿವೇಕ ಬರುತ್ತದೆ. ಏನೂ ಗೊತ್ತಿಲ್ಲದೆ ಅಜ್ಞಾನದಲ್ಲಿದ್ದರೆ ಅವರನ್ನು ಸುಲಭವಾಗಿ ಯಾಮಾರಿಸಬಹುದು ಎಂಬ ವಿಷಯ ಬಿಟ್ಟರೆ ಇದರಲ್ಲಿ ಘನವಾದ ತರ್ಕ ಇಲ್ಲ. ಟಿಪ್ಪು ಕಾಲದ ಕನ್ನಡವನ್ನೇ ತೆಗೆದುಕೊಂಡರೆ ಆಡಳಿತ, ಕಂದಾಯ, ಕಚೇರಿ, ಕೋರ್ಟ್ ವ್ಯವಹಾರಗಳು ಉರ್ದು, ಪಷಿರ್ಯನ್ ಮಿಶ್ರೀತ ಕನ್ನಡ ಜಾರಿಯಲ್ಲಿತ್ತು.ಅದು ಜನಸಾಮಾನ್ಯರ ಬಳಕೆಗೆ ಒಗ್ಗಿಕೊಂಡಿತ್ತು ಎಂಬುದನ್ನು ಮರೆಯವಂತಿಲ್ಲ. ಸಿನಿಮಾ ಡಬ್ಬಿಂಗ್‌ಗೆ ತಡೆಯೊಡ್ಡಿದ್ದೆೀವೆ. ಆದರೆ ಹಿಂದಿ, ಇಂಗ್ಲೀಷ್ ತಯಾರಾದ ಜಾಹೀರಾತುಗಳು ಎಡ್ಡಾದಿಡ್ಡಿ ಕನ್ನಡಕ್ಕೆ ಡಬ್ ಆಗುತ್ತವೆ. ಇದು ಕನ್ನಡ ಭಾಷೆಯ ಜಾಯಮಾನವನ್ನು ಕುಲಗೆಡಿಸಿದೆ. ಇದರ ವಿರುದ್ಧ ದೊಡ್ಡ ದನಿ ಎತ್ತಬೇಕಾಗಿದೆ~ ಎಂದರು.`ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಕನ್ನಡವನ್ನು ಸಜ್ಜುಗೊಳಿಸಬೇಕು. ಸಿಲಿಕಾನ್ ವ್ಯಾಲಿ ಎಂಬ ಹೆಸರು ನಮ್ಮ ರಾಜಧಾನಿಗಿದೆ ಆದರೆ ಅಂತರ್ಜಾಲದಲ್ಲಿ ಕನ್ನಡದಲ್ಲಿ ವ್ಯವಹರಿಸುವುದಕ್ಕೆ ಸಂಬಂಧಿಸಿದಂತೆ ಕಾರ್ಯವಾಹಿಗಳನ್ನು ರೂಪಿಸುವುದರಲ್ಲಿ ಯಾರಿಗೂ ಆಸ್ಥೆ ಇಲ್ಲ. ಕನಿಷ್ಠ ಅಗತ್ಯಗಳಾದ ಪದ ಪರೀಕ್ಷಕ (ಸ್ಪೆಲ್‌ಚೆಕ್), ವ್ಯಾಕರಣ ಪರೀಕ್ಷಕ, ಸಮನಾರ್ಥ ಪದಕೋಶ, ಗುರುತು ಮಾಡುವಿಕೆ (ಟ್ಯಾಗಿಂಗ್) ಉತ್ತಮ ಅಕ್ಷರ ವಿನ್ಯಾಸ, ಧ್ವನಿಯನ್ನು ಬರವಣಿಗೆಗೆ, ಬರವಣಿಗೆಯನ್ನು ಧ್ವನಿಗೆ ಪರಿವರ್ತಿಸುವ ವ್ಯವಸ್ಥೆ ಇಲ್ಲದಾಗಿದೆ. ಇದರಿಂದ  ಕನ್ನಡದ ಬಗ್ಗೆ ಒಲವಿದ್ದವರೂ ಇಂಗ್ಲಿಷ್ ಅವಲಂಬಿಸಬೇಕಾಗಿದೆ. ಇಂತಹ ಮೂಲವ್ಯವಸ್ಥೆ ಕಲ್ಪಿಸುವುದಕ್ಕಾಗಿ  ಕರ್ನಾಟಕ ಸರ್ಕಾರ ನೇಮಿಸಿದ್ದ ತಂತ್ರಜ್ಞಾನ ಅಭಿವೃದ್ಧಿ ಸಮಿತಿ 2 ವರ್ಷಗಳಿಂದ ನಿದ್ರೆ ಹೋಗಿದೆ. ಇದನ್ನು ಬಡಿದೆಚ್ಚರಿಸಬೇಕಾಗಿದೆ~ ಎಂದರು.`ವಿದ್ಯಾರ್ಥಿಗಳ ಸಂಖ್ಯೆ ಇಲ್ಲ ಎಂಬ ಕಾರಣಕ್ಕೆ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಿಸಲಾಗುತ್ತಿದೆ. ಪಾಲಕರು ಸರ್ಕಾರಿ ಶಾಲೆಗಳತ್ತ ಹೋಗುತ್ತಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕಬೇಕು. ಪಠ್ಯ, ಬೋಧನೆ, ಆಟ, ಪಾಠ- ಎಲ್ಲಾ ವಿಷಯಗಳಲ್ಲೂ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಇರುವ ಅಂತರ ಕಡಿಮೆಯಾಗಬೇಕು.ಶಿಕ್ಷಕರ ಬೋಧನಾ ಮಟ್ಟ ಎತ್ತರಿಸಬೇಕು. ಆಗ ಮಾತ್ರ ಕನ್ನಡ ಶಾಲೆಗಳು ತುಂಬಿದಂತಿರುತ್ತವೆ. ಈ ಬಗ್ಗೆ ಎಲ್ಲಾ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಸಜ್ಜಾಗಬೇಕು~ ಎಂದರು.ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲೂ ಸಂಚರಿಸುವ ಜಾಗೃತಿ ರಥ ಅ. 31 ನಗರಕ್ಕೆ ಆಗಮಿಸಲಿದೆ. ನ.1 ರಿಂದ 5 ದಿನಗಳ ಕಾಲ ನಗರದ ಪುರಭವನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸುಗಮ ಸಂಗೀತ, ಗಮಕ ವಾಚನ, ನಾಟಕ ಪ್ರದರ್ಶನ, ಚರ್ಚಾ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry