ಭಾನುವಾರ, ಸೆಪ್ಟೆಂಬರ್ 22, 2019
27 °C

ರಾಜ್ಯೋತ್ಸವ: ಜಿಲ್ಲೆಯಲ್ಲಿ ವ್ಯಾಪಕ ಬಂದೋಬಸ್ತ್

Published:
Updated:
ರಾಜ್ಯೋತ್ಸವ: ಜಿಲ್ಲೆಯಲ್ಲಿ ವ್ಯಾಪಕ ಬಂದೋಬಸ್ತ್

ಬೆಳಗಾವಿ: “ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಗರ ಸೇರಿದಂತೆ ಜಿಲ್ಲೆಯಾದ್ಯಾಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ” ಎಂದು ಎಸ್ಪಿ ಸಂದೀಪ ಪಾಟೀಲ ತಿಳಿಸಿದ್ದಾರೆ.“ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಕಾರ್ಯಕ್ರಗಳನ್ನು ಶಾಂತಿಯಿಂದ ಆಚರಿಸುವಂತೆ ಕನ್ನಡ ಹಾಗೂ ಮರಾಠಿ ಮುಖಂಡರ ಸಭೆ ಕರೆದು ಚರ್ಚಿಸಲಾಗಿದೆ” ಎಂದು ತಿಳಿಸಿದರು.“ರಾಜ್ಯೋತ್ಸವದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ರೂಪಕಗಳು ಹಾಗೂ ಬೆಳಗಾವಿ ನಗರ ಮತ್ತು ಜಿಲ್ಲೆಯಿಂದ ಕನ್ನಡಪರ ಸಂಘಟನೆಗಳ ರೂಪಕಗಳು ಬಂದು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಳಗಾವಿ ನಗರವನ್ನು 14 ಸೆಕ್ಟರ್‌ಗಳಾಗಿ ವಿಂಗಡಣೆ ಮಾಡಲಾಗಿದೆ.ಬಂದೋಬಸ್ತ್ ಕರ್ತವ್ಯಕ್ಕಾಗಿ 1 ಎಎಸ್‌ಪಿ, 9-ಡಿಎಸ್‌ಪಿ, 32 ಸಿಪಿಐ, 114 ಪಿಎಸ್‌ಐ, 163 ಎಎಸ್‌ಐ, 1806 ಪೊಲೀಸ್ ಸಿಬ್ಬಂದಿ, 10 ಕೆಎಸ್‌ಆರ್‌ಪಿ ತುಕಡಿಗಳು ಮತ್ತು 15 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಸೂಕ್ಷ್ಮ ಸ್ಥಳಗಳಲ್ಲಿ 10 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಂದು ರೂಪಕಗಳ ಜೊತೆ 5 ಸ್ವಯಂ ಸೇವಕರೂ ಭಾಗವಹಿಸುವರು.ಜಿಲ್ಲಾ ಪೊಲೀಸ್ ಭವನದಲ್ಲಿ ಶನಿವಾರ ನಡೆದ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಮೆರವಣಿಗೆ ಕಾಲಕ್ಕೆ ರೂಪಕಗಳಲ್ಲಿ ಕನ್ನಡ ಬಾವುಟ, ಕನ್ನಡ ಗೀತೆಗಳು ಹಾಗೂ ಕನ್ನಡಕ್ಕೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಅವಕಾಶವಿದೆ. ಬೇರೆ ಯಾವುದೇ ರೀತಿಯ ಚಿಹ್ನೆ, ಬಾವುಟ ಹಾಗೂ ಗೀತೆಗಳಿಗೆ ಅವಕಾಶ ನೀಡದಿರಲು ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು.“ಮೆರವಣಿಗೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು ಪ್ರಯತ್ನಿಸುವ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನಿನ ಕ್ರಮ ಕೈಗೊಳ್ಳಲಾಗುವುದು” ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.ಬೆಂಗಳೂರು ಚಲೋ 4ರಂದು

ಬೆಳಗಾವಿ:
ಬಡತನ ನಿವಾರಣೆ, ಮಹಿಳಾ ಸಬಲೀ ಕರಣ, ಜನಸಂಖ್ಯಾಸ್ಫೋಟ, ಆಹಾರ ಸಮಸ್ಯೆ, ಮಹಿಳೆಯರ ಮೇಲಿನ ಶೋಷಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಕರ್ನಾಟಕ ರಾಜ್ಯ ರೈತ ಮತ್ತು ಸ್ವಸಹಾಯ ಸ್ತ್ರೀಶಕ್ತಿ ಸೇನೆಯ ರಾಜ್ಯ ಸಮಿತಿಯು ನವೆಂಬರ್ 4ರಂದು `ಬೆಂಗಳೂರು ಚಲೋ~ ಮೂಲಕ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ.ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಸಾವಿರಾರು ಕಾರ್ಯಕರ್ತರು ಸಮೀಪದ ರೈಲು ನಿಲ್ದಾಣದಿಂದ ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸಬೇಕು ಎಂದು ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ. ಮಹೇಶ್ವರಸ್ವಾಮಿ ಕೋರಿದ್ದಾರೆ.

Post Comments (+)