ಮಂಗಳವಾರ, ನವೆಂಬರ್ 19, 2019
23 °C

`ರಾಜ್ಯ ಕಾಂಗ್ರೆಸ್‌ಗೆ ನಾಯಕರೇ ಇಲ್ಲ'

Published:
Updated:

ಬೀದರ್: ಬೀದರ್‌ನಿಂದ ಸಂಸದರಾಗಿ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಲೋಕಸಭೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಕುರ್ಚಿ ಬಿಟ್ಟು ಎದ್ದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ವ್ಯಂಗ್ಯವಾಡಿದರು.ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ನಗರದ ಗಣೇಶ ಮೈದಾನದಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಮಾತನಾಡಿದರು. ಧರ್ಮಸಿಂಗ್ ಒಂದು ಬಾರಿಯೂ ಬೀದರ್ ಅಥವಾ ಕರ್ನಾಟಕದ ಪರವಾಗಿ ಧ್ವನಿ ಎತ್ತಿಲ್ಲ ಎಂದು ಟೀಕಿಸಿದರು. ಹೈದರಾಬಾದ್ ಕರ್ನಾಟಕ ಭಾಗ ಹಾಳಾದದ್ದು ಧರ್ಮಸಿಂಗ್ ಹಾಗೂ ಖರ್ಗೆ ಅವರಿಂದ. ಈ ಇಬ್ಬರು ಕಳೆದ ಮೂರು ದಶಕಗಳಲ್ಲಿ ಮಾಡಿದ್ದು ಕುಟುಂಬ ಮತ್ತು ಮಕ್ಕಳ ಅಭಿವೃದ್ಧಿಯನ್ನು ಮಾತ್ರ ಎಂದು ಆರೋಪಿಸಿದರು.ರಾಜ್ಯ ಕಾಂಗ್ರೆಸ್‌ಗೆ ನಾಯಕರೇ ಇಲ್ಲ. ಅದಾಗಿಯೂ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ. ಕೃಷ್ಣ, ಸಿದ್ಧರಾಮಯ್ಯ, ಡಾ. ಜಿ. ಪರಮೇಶ್ವರ್ ಸೇರಿದಂತೆ ಎಲ್ಲರೂ ಮುಖ್ಯಮಂತ್ರಿ ಆಕಾಂಕ್ಷಿಯೇ ಆಗಿದ್ದಾರೆ. ಅದನ್ನು ಬಾಯಿ ಬಿಟ್ಟು ಹೇಳುತ್ತಿಲ್ಲವಷ್ಟೇ. ಬಿಜೆಪಿಯಲ್ಲಿ ಅಂಥ ಭ್ರಮಾಲೋಕ ಇಲ್ಲ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೇ ನಮ್ಮ ನಾಯಕರಾಗಿದ್ದಾರೆ ಎಂದರು.ಕಾಂಗ್ರೆಸ್‌ಗೆ ಸೋನಿಯಾಗಾಂಧಿ ಮಾಲೀಕರಾಗಿದ್ದಾರೆ. ಹೀಗಾಗಿ ಅವರ ನಿರ್ಣಯವೇ ಅಂತಿಮ. ಬಿಜೆಪಿಗೆ ಕರ್ನಾಟಕದ 6 ಕೋಟಿ ಜನ ಮಾಲೀಕರು. ನಮ್ಮ ಅಭ್ಯರ್ಥಿಗಳ ಆಯ್ಕೆ ಆಗುವುದು ಬೆಂಗಳೂರಿನಲ್ಲಿಯೇ ಎಂದು ಹೇಳಿದರು. ಕಾಂಗ್ರೆಸ್ ಜನವಿರೋಧಿಯಾಗಿದ್ದು,  ಯುಪಿಎ ಸರ್ಕಾರದ ಎಂಟು ವರ್ಷದ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ ಎಂದು ದೂರಿದರು.ಇಂದಿನ ಬೀದರ್‌ಗೂ ಐದು ವರ್ಷದ ಹಿಂದಿನ ಬೀದರ್‌ಗೂ ಅಜಗಜಾಂತರ ವ್ಯತಾಸವಿದೆ. ರಾಜ್ಯ ಸರ್ಕಾರ ನೂರಾರು ಕೋಟಿ ರೂಪಾಯಿ ಅನುದಾನ ಒದಗಿಸಿ ರಸ್ತೆ, ಒಳಚರಂಡಿ, ಕುಡಿಯುವ ನೀರು ಮತ್ತಿತರ ಸೌಕರ್ಯಗಳನ್ನು ಕಲ್ಪಿಸಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ್ ಜೋಶಿ ನುಡಿದರು.

ಹಿಂದೆಯೂ ಶಾಸಕರು, ಸಚಿವರು, ಸರ್ಕಾರ ಇತ್ತು. ಅಭಿವೃದ್ಧಿ ಆಗದೇ ಇರುವುದಕ್ಕೆ ಇಚ್ಛಾಶಕ್ತಿ ಕೊರತೆ ಕಾರಣ ಎಂದು ಆರೋಪಿಸಿದರು.ಬೀದರ್-ಗುಲ್ಬರ್ಗ ರೈಲು ಮಾರ್ಗ ಆರಂಭಿಸಿದ್ದು ಎನ್‌ಡಿಎ ಸರ್ಕಾರ. ಕೇಂದ್ರದ ಯುಪಿಎ ಸರ್ಕಾರ ಕಳೆದ ಒಂಭತ್ತು ವರ್ಷಗಳಲ್ಲಿ ಯೋಜನೆಗೆ ಎಷ್ಟು ಅನುದಾನ ಒದಗಿಸಿದೆ ಎಂದು ಪ್ರಶ್ನಿಸಿದರು. ರಾಜ್ಯದ ರೈಲ್ವೆ ಯೋಜನೆಗಳಿಗೆ 15 ಸಾವಿರ ಕೋಟಿ ರೂಪಾಯಿ ಬೇಡಿಕೆ ಇದ್ದರೆ, 600 ಕೋಟಿ ರೂಪಾಯಿ ಮಾತ್ರ ನೀಡಲಾಗಿದೆ ಎಂದು ಆಪಾದಿಸಿದರು.ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದೆ. 2ಜಿ ಸ್ಪೆಕ್ಟ್ರಂ, ಕಾಮನವೆಲ್ತ್ ಕ್ರೀಡಾಕೂಟ, ಕಲ್ಲಿದ್ದಲು, ಹೆಲಿಕಾಪ್ಟರ್ ಖರೀದಿ, ರಾಹುಲ್‌ಗಾಂಧಿ ಭೂ ಹಗರಣ ಇದರ ಭಾಗವಾಗಿವೆ. ಯುಪಿಎ ಜನರಿಗೆ ಕನಿಷ್ಠ ಸಿಲಿಂಡರ್ ಕೊಡಲೂ ಆಗದ ಸರ್ಕಾರ ಎಂದು ಜರಿದರು. ಕಾಂಗ್ರೆಸ್ 45  ಹಾಗೂ ಜೆಡಿಎಸ್ 10 ವರ್ಷಗಳಲ್ಲಿ ಮಾಡದ ಅಭಿವೃದ್ಧಿಯನ್ನು ಬಿಜೆಪಿ ರಾಜ್ಯದಲ್ಲಿ ಐದು ವರ್ಷಗಳಲ್ಲೇ ಮಾಡಿ ತೋರಿಸಿದೆ. ಮತದಾರರು ಪಕ್ಷಕ್ಕೆ ಮತ್ತೊಮ್ಮೆ ಅವಕಾಶ ಕೊಡಬೇಕು ಎಂದರು.

ಪ್ರತಿಕ್ರಿಯಿಸಿ (+)