ರಾಜ್ಯ ಗ್ರಾ.ಪಂ.ನೌಕರರ ಸಂಘದ ಧರಣಿ

ಶುಕ್ರವಾರ, ಜೂಲೈ 19, 2019
29 °C

ರಾಜ್ಯ ಗ್ರಾ.ಪಂ.ನೌಕರರ ಸಂಘದ ಧರಣಿ

Published:
Updated:

ಬೆಂಗಳೂರು: ಗ್ರಾಮ ಪಂಚಾಯ್ತಿ ನೌಕರರಿಗೆ ಸಕಾಲಕ್ಕೆ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದ ಬಳಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.`ಗ್ರಾಮ ಪಂಚಾಯ್ತಿ ನೌಕರರ ವೇತನವನ್ನು ಹೆಚ್ಚಳ ಮಾಡಿ ಸರ್ಕಾರ 2011ರ ಫೆಬ್ರುವರಿಯಲ್ಲಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಈವರೆಗೂ ಜಾರಿಯಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಮೂರ‌್ನಾಲ್ಕು ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ~ ಎಂದು ಧರಣಿನಿರತರು ದೂರಿದರು.`ಸುಪ್ರೀಂಕೋರ್ಟ್‌ನ ತೀರ್ಪಿನ ಅನ್ವಯ ಎಲ್ಲ ಸರ್ಕಾರಿ ನೌಕರರಿಗೂ ಕನಿಷ್ಠ ಕೂಲಿ ಸಿಗಬೇಕು. ಈ ತೀರ್ಪನ್ನು ಉಲ್ಲಂಘಿಸುತ್ತಿರುವ ರಾಜ್ಯ ಸರ್ಕಾರ ಗ್ರಾಮ ಪಂಚಾಯ್ತಿ ನೌಕರರಿಗೆ ಸಕಾಲಕ್ಕೆ ವೇತನ ನೀಡುತ್ತಿಲ್ಲ ಮತ್ತು ಅವರನ್ನು ಗುಲಾಮರಂತೆ ದುಡಿಸಿಕೊಳ್ಳುತ್ತಿದೆ. ಸರ್ಕಾರದ ಈ ಧೋರಣೆಯಿಂದ ಸುಮಾರು 40 ಸಾವಿರ ಗ್ರಾ.ಪಂ ನೌಕರರು ಹಾಗೂ ಅವರ ಕುಟುಂಬ ಸದಸ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ~ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ವಿ.ಜೆ.ಕೆ.ನಾಯರ್ ಹೇಳಿದರು.`ಸಂಸದರು ಹಾಗೂ ಶಾಸಕರ ವೇತನವನ್ನು ಹೆಚ್ಚಳ ಮಾಡುವ ಸರ್ಕಾರ ಬಡ ಸರ್ಕಾರಿ ನೌಕರರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ಗ್ರಾಮ ಪಂಚಾಯ್ತಿಗಳಿಗೆ ಬರುವ ತೆರಿಗೆ ಹಣದಲ್ಲೇ ವೇತನ ಪಡೆದುಕೊಳ್ಳುವಂತೆ ಅಧಿಕಾರಿಗಳು ನೌಕರರಿಗೆ ಹೇಳುತ್ತಿದ್ದಾರೆ. ಇದು ನಾಚಿಕೆಗೇಡು~ ಎಂದರು.ಸಕಾಲಕ್ಕೆ ವೇತನ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ತೆರಿಗೆ ಸಂಗ್ರಹದಾರರ ಹುದ್ದೆಯಿಂದ ಗ್ರಾ.ಪಂ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡುತ್ತಿರುವ ಕ್ರಮವನ್ನು ರದ್ದುಪಡಿಸಬೇಕು. ನೌಕರರ ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ಉಪಾಧ್ಯಕ್ಷ ವಿ.ಪಿ.ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಎಂ.ಬಿ.ನಾಡಗೌಡ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry