ಮಂಗಳವಾರ, ಏಪ್ರಿಲ್ 20, 2021

ರಾಜ್ಯ ತೊರೆಯಬೇಡಿ- ರಾಜ್ಯಪಾಲರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೆಂಗಳೂರು ದೇಶದ ಅತ್ಯಂತ ಸುರಕ್ಷಿತ ನಗರ. ಸಂವಹನ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ಯಾರೊಬ್ಬರೂ ರಾಜ್ಯವನ್ನು ಬಿಟ್ಟು ಹೋಗಬಾರದು~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಮನವಿ ಮಾಡಿದರು.ಎಂವಿಆರ್ ಫೌಂಡೇಷನ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಯೋಜನಾ ಆಯೋಗದ ಸದಸ್ಯೆ ಡಾ.ಸಯೀದಾ ಹಮೀದ್ ಮತ್ತು ಆಯೋಗದ ಮಾಜಿ ವಿಶೇಷ ಕರ್ತವ್ಯಾಧಿಕಾರಿ ಗುಂಜನ್ ವೇದಾ ಅವರ `ಬ್ಯೂಟಿಫುಲ್ ಕಂಟ್ರಿ: ಸ್ಟೋರಿಸ್ ಫ್ರಮ್ ಅನದರ್ ಇಂಡಿಯಾ~ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.`ರಾಜ್ಯದ ಮುಖ್ಯಸ್ಥನಾದ ನನ್ನ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಮುಖ್ಯಮಂತ್ರಿ, ಗೃಹ ಸಚಿವರು ಈಶಾನ್ಯ ರಾಜ್ಯಗಳ ಜನರಲ್ಲಿ ಭರವಸೆ ತುಂಬುವ ಕೆಲಸ ಮಾಡುತ್ತಿದ್ದಾರೆ. ನಾನು ಸಹ ಕೆಲವು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ್ದೇನೆ~ ಎಂದು ಅವರು ತಿಳಿಸಿದರು.`ಸಮಸ್ಯೆ ಉಂಟಾದಾಗಿನಿಂದ ನನಗೆ ನಿದ್ರೆಯೇ ಬಂದಿಲ್ಲ. ಈಶಾನ್ಯ ರಾಜ್ಯಗಳ ಜನರಲ್ಲಿ ಆತಂಕ ಉಂಟಾದ ಪ್ರಕರಣದ ಬಗ್ಗೆ ತನಿಖೆ ಆಗಬೇಕು. ಅದಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಬೇಕು~ ಎಂದು ಅವರು ಅಭಿಪ್ರಾಯಪಟ್ಟರು.`ವೇದಗಳ ಕಾಲದಿಂದ ಇಲ್ಲಿಯವರೆಗೆ ಭಾರತ, ತನ್ನ ನೆಲಕ್ಕೆ ಬಂದವರೆಲ್ಲರನ್ನೂ ಸ್ವಾಗತಿಸಿದೆ. ಎಲ್ಲರನ್ನೂ ಭಾರತೀಯರನ್ನಾಗಿಸಿದೆ. ಸಾಮರಸ್ಯದ ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಸಲ್ಲದು. ಮತ ಗಳಿಕೆಗಾಗಿ ಜಾತಿ ಮತ್ತು ಕೋಮು ಆಧಾರದಲ್ಲಿ ಜನರನ್ನು ಒಡೆದು ಆಳುವ ಕೆಲಸವನ್ನು ಯಾರೂ ಮಾಡಬಾರದು~ ಎಂದು ಅವರು ಹೇಳಿದರು.`ಬ್ರಾಹ್ಮಣರೇ ಹೆಚ್ಚಾಗಿರುವ ಬನಾರಸ್‌ನಲ್ಲಿ ಸಂತ ಕಬೀರನೇ ಈಗಲೂ ಹೀರೊ. ಕರ್ನಾಟಕದ ಬಸವಣ್ಣ, ಬುದ್ಧನ ನಂತರ ಭಾರತ ಕಂಡ ಮಹಾನ್ ಸುಧಾರಕ. ಜಾತಿ ರಹಿತ ಸಮಾಜಕ್ಕಾಗಿ ಶ್ರಮಿಸಿದ ಬಸವಣ್ಣ ಮತ್ತು ಅಂತಹವರನ್ನು ಜಾತಿಗೆ ಸೀಮಿತಗೊಳಿಸುವ ಯತ್ನ ನಡೆಯುತ್ತಿದೆ~ ಎಂದು ಅವರು ವಿಷಾದಿಸಿದರು.`ಸಯೀದಾ ಹಮೀದ್ ಅವರ ಕೃತಿಯು ಬಡ ಜನರ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಮೂಲಕ ದೇಶದ ಮತ್ತೊಂದು ಮುಖವನ್ನು ಪರಿಚಯಿಸುತ್ತದೆ. ಸಂವಿಧಾನದ ಧ್ಯೇಯದಂತೆ ಎಲ್ಲರಿಗೂ ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸಲು ಸರ್ಕಾರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು~ ಎಂದು ಅವರು ಹೇಳಿದರು.ಬಿಡುಗಡೆಯಾದ ಕೃತಿಯ ಆಯ್ದ ಭಾಗವನ್ನು ವಾಚಿಸಿದ ಸಯೀದಾ ಹಮೀದ್, `ದೇಶದ ವಿವಿಧ ರಾಜ್ಯಗಳ ಬಡ ಜನರ ವಾಸ್ತವ ಚಿತ್ರಣ ಈ ಕೃತಿಯಲ್ಲಿದೆ. ದೇಶದಲ್ಲಿ ಸಾಮರಸ್ಯದ ಸಂಸ್ಕೃತಿ ನಾಶವಾಗುತ್ತಿರುವುದು ಆಘಾತ ಉಂಟು ಮಾಡಿದೆ~ ಎಂದರು.ಅಧ್ಯಕ್ಷತೆ ವಹಿಸಿದ್ದ ವಿ.ವಿ ಕುಲಪತಿ ಡಾ.ಎನ್.ಪ್ರಭುದೇವ್ ಮಾತನಾಡಿ, `ಸಯೀದಾ ಅವರ ಕೃತಿಯು ಕಣ್ಣು ತೆರೆಸುವ ಪುಸ್ತಕವಾಗಿದೆ. ಪತ್ರಿಕೆಗಳ ಮುಖಪುಟದಲ್ಲಿ ಎಂದೂ ಸುದ್ದಿಯಾಗದವರು ಮತ್ತು ಟಿವಿ ಚಾನಲ್‌ಗಳ ಕ್ಯಾಮೆರಾಗಳ ಕಣ್ಣಿಗೆ ಬೀಳದವರ ಮಾತುಗಳು ಈ ಕೃತಿಯಲ್ಲಿ ಕೇಳಿಬಂದಿವೆ~ ಎಂದರು.  ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್ ಸ್ವಾಗತಿಸಿದರು.`ಮರೆತ ಭಾಷೆ ಉರ್ದು~

`ಉರ್ದು ಭಾರತೀಯ ಭಾಷೆ. ಅದು ದೆಹಲಿಯಲ್ಲಿ ಹುಟ್ಟಿದ ಭಾಷೆ. ಆದರೆ ನಾವು ಆ ಭಾಷೆಯನ್ನು ಮರೆತು ಬಿಟ್ಟಿದ್ದೇವೆ. ಹೀಗಾಗಿ ಅದು ಪರಕೀಯ ಭಾಷೆಯಾಗಿ ಬಿಟ್ಟಿದೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ವಿಷಾದಿಸಿದರು.`ಉರ್ದು ಭಾಷೆಯಲ್ಲಿ ಸಮೃದ್ಧ ಕಾವ್ಯವಿದೆ. ಈಗ ಉರ್ದುವಿನ ಜತೆ ಕವಿ ಸಮ್ಮೇಳನಗಳೂ ಕಣ್ಮರೆಯಾಗುತ್ತಿವೆ. ಉರ್ದು ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸ ಆಗಬೇಕಿದೆ~ ಎಂದು ಅವರು ಅಭಿಪ್ರಾಯಪಟ್ಟರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.