ರಾಜ್ಯ ನೌಕರರಿಗೆ ಕೇಂದ್ರ ಮಾದರಿ ಸೌಲಭ್ಯಕ್ಕೆ ಒತ್ತಾಯ

7

ರಾಜ್ಯ ನೌಕರರಿಗೆ ಕೇಂದ್ರ ಮಾದರಿ ಸೌಲಭ್ಯಕ್ಕೆ ಒತ್ತಾಯ

Published:
Updated:

ದೊಡ್ಡಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಒಂದೇ ರೀತಿಯ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ತಹಶೀಲ್ದಾರರ ಮೂಲಕ ಮನವಿಸಲ್ಲಿಸಿದರು. ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ನೌಕರರ ಸಂಘದ ಸದಸ್ಯರು,  ದೇಶದ ಬಹುತೇಕ ರಾಜ್ಯ ಸರ್ಕಾರಗಳು ಕೇಂದ್ರದ ಮಾದರಿಯಲ್ಲಿ  ನೌಕರರಿಗೆ ಆರ್ಥಿಕ ಸೌಲಭ್ಯ ನೀಡುತ್ತಿವೆ. ಆದರೆ ನಮ್ಮ ರಾಜ್ಯದಲ್ಲಿ ತಾರತಮ್ಯವೆಸಗಲಾಗುತ್ತಿದೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ಜಿಲ್ಲಾ ಗೌರವಾಧ್ಯಕ್ಷ ಶಿವರಾಜು ಮಾತನಾಡಿ, ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಸರ್ಕಾರಗಳು ಕೇಂದ್ರ ಸರ್ಕಾರದ ಮಾದರಿಯಲ್ಲಿ ತನ್ನ ನೌಕರರ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಿಸಿದೆ. ರಾಜ್ಯ ಸರ್ಕಾರ ಕೂಡ ಇದೇ ಮಾದರಿಯನ್ನು ಅನುಸರಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರದ ಮಾದರಿಯಂತೆ ವೇತನ, ಭತ್ಯೆ, ಮನೆಬಾಡಿಗೆ ಮತ್ತು ನಗರ ಪರಿಹಾರ ಭತ್ಯೆಗಳನ್ನು  ರಾಜ್ಯ ಸರ್ಕಾರ ಮಂಜೂರು ಮಾಡಬೇಕು.ರಾಜ್ಯದಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆಯಾಗಿರುವ ಶಿಕ್ಷಕರು ಮತ್ತು ನೌಕರರಿಗೆ ಹಿಂದಿನ ಜಿಲ್ಲೆಯಲ್ಲಿ ಸಲ್ಲಿಸಿರುವ ಸೇವೆಗಳನ್ನು ಪರಿಗಣಿಸಿ 10 ವರ್ಷದ ಕಾಲಮಿತಿ ಬಡ್ತಿ, 15 ವರ್ಷದ ಸ್ವಯಂಚಾಲಿತ ಬಡ್ತಿ, 20 ವರ್ಷದ ವಾರ್ಷಿಕ ಬಡ್ತಿಗಳನ್ನು ನೀಡಬೇಕು ಎಂದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ವಿಷ್ಣುಮೂರ್ತಿ, ರಾಜ್ಯ ಪರಿಷತ್ ಸದಸ್ಯ ಆರ್.ಜಯರಾಮಯ್ಯ, ತಾಲ್ಲೂಕು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಸಿದ್ದಗಂಗಯ್ಯ ಇತರರು ಇದ್ದರು.ತಹಶೀಲ್ದಾರರಿಗೆ ಮನವಿ

ದೇವನಹಳ್ಳಿ : ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳಲ್ಲಿ ವ್ಯತ್ಯಾಸವಿದ್ದು ಇದನ್ನು ಸರಿಪಡಿಸುವಂತೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ರಾಮಾಜನಯ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. ಇಲ್ಲಿನ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ನೌಕರರ ಬಹಿರಂಗ ಸಭೆ ಹಾಗೂ ಸರ್ಕಾರಕ್ಕೆ ಮನವಿ ಸಮರ್ಪಣೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಈಗಾಗಲೇ ನೆರೆ ರಾಜ್ಯಗಳು ಕೇಂದ್ರ ಸರ್ಕಾರದ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ ಆರ್ಥಿಕ ಸವಲತ್ತುಗಳನ್ನು ಮತ್ತು ವೇತನ ಇನ್ನಿತರ ಭತ್ಯೆಗಳನ್ನು ಪರಿಷ್ಕರಿಸಿವೆ ಎಂದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೊಂಬಯ್ಯ ಮಾತನಾಡಿ, ಕೇಂದ್ರ ಮತ್ತು ಇತರೆ ರಾಜ್ಯಗಳ  ನೌಕರರ ವೇತನ, ಭತ್ಯೆಗಳಿಗೆ ಹೋಲಿಸಿದ್ದಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಯಲ್ಲಿ ಶೇ.30 ರಿಂದ 40 ರಷ್ಟು ವ್ಯತ್ಯಾಸವಿದೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕೆಂದರು. ಸಭೆ ನಂತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry