ಭಾನುವಾರ, ಜನವರಿ 26, 2020
25 °C

ರಾಜ್ಯ ಪ್ರವಾಸಕ್ಕೆ ಬಿಎಸ್‌ವೈ ಅಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ 7ರಿಂದ ರಾಜ್ಯದಾ ದ್ಯಂತ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ. ರೇಸ್‌ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಮಂಗಳವಾರ ಆಪ್ತ ಸಚಿವರ ಜತೆ ಮಾತುಕತೆ ನಡೆಸಿ, ಪ್ರವಾಸ ಕಾರ್ಯಕ್ರಮವನ್ನು ಅಂತಿಮ ಗೊಳಿಸಿದ್ದಾರೆ.ಮೊದಲ ಸಭೆಯನ್ನು ಶಿವಮೊಗ್ಗದಲ್ಲೇ ಆಯೋಜಿ ಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಅಲ್ಲಿ ಅಂದು ಕೆ.ಎಂ.ಎಫ್ ಕಾರ್ಯಕ್ರಮ ಇದೆ. ಅದರ ನಂತರ ನಾಲ್ಕೈದು ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ. ಯಡಿಯೂರಪ್ಪ ಅವರ ಪ್ರವಾಸದ ಕಾರ್ಯಕ್ರಮಗಳು ಪಕ್ಷದ ಬ್ಯಾನರ್‌ನಡಿ ನಡೆಯುವುದಿಲ್ಲ. ಬದಲಾಗಿ ಸ್ಥಳೀಯ ಪ್ರಮುಖ ಕಾರ್ಯಕ್ರಮಗಳನ್ನೇ ವೇದಿಕೆ ಮಾಡಿಕೊಂಡು ಪ್ರವಾಸ ಮಾಡಲು ಅವರು ನಿರ್ಧರಿ ಸಿದ್ದು, ಆ ಮೂಲಕ ವರಿಷ್ಠರಿಗೆ ತಿರುಗೇಟು ನೀಡಲು ತೀರ್ಮಾನಿಸಿದ್ದಾರೆ. ಕೆಲವು ಸರ್ಕಾರಿ ಕಾರ್ಯಕ್ರಮ ಗಳಲ್ಲೂ ಭಾಗವಹಿಸಲಿದ್ದಾರೆ.ತಮ್ಮನ್ನು ನಂಬಿರುವ ಕಾರ್ಯಕರ್ತರು ಮತ್ತು ಶಾಸಕರನ್ನು ಕೈಬಿಡಬಾರದು ಎಂಬ ಕಾರಣಕ್ಕೆ ಈ ಪ್ರವಾಸ ಹಮ್ಮಿಕೊಂಡಿದ್ದಾರೆ. ಇದರಿಂದ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾದರೆ ಅದಕ್ಕೆ ತಾವು ಜವಾ ಬ್ದಾರರಲ್ಲ ಎಂದು ಅವರ ಆಪ್ತರು ಹೇಳಿಕೊಂಡಿದ್ದಾರೆ. ಪ್ರವಾಸ ಈ ತಿಂಗಳ 20ರ ವರೆಗೂ ಮುಂದು ವರಿಯಲಿದೆ.ಸಚಿವರಾದ ವಿ.ಸೋಮಣ್ಣ, ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಉಮೇಶ ಕತ್ತಿ, ಎಂ.ಪಿ.ರೇಣುಕಾಚಾರ್ಯ, ಸಿ.ಪಿ.ಯೋಗೀಶ್ವರ್, ಸಿ.ಸಿ.ಪಾಟೀಲ, ಆನಂದ ಅಸ್ನೋಟಿಕರ್ ಸೇರಿದಂತೆ ಇತರರು ಯಡಿಯೂರಪ್ಪ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.ಲೋಕಾಯುಕ್ತ ನೇಮಕ: ಪ್ರವಾಸ ಕುರಿತ ಚರ್ಚೆ ನಂತರ ಲೋಕಾಯುಕ್ತ ನೇಮಕ ವಿಚಾರ ಕುರಿತೂ ಚರ್ಚಿಸಲಾಗಿದೆ. ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರನ್ನೇ ಲೋಕಾಯುಕ್ತರನ್ನಾಗಿ ನೇಮಿಸಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರ ಬೇಕೆಂದು ಸಚಿವರಿಗೆ ಸೂಚನೆ ನೀಡಿದರು. `ತಕ್ಷಣವೇ ಹೋಗಿ ಮುಖ್ಯಮಂತ್ರಿಗೆ ಹೇಳಿ~ ಎಂದರು. ಆ ಪ್ರಕಾರವೇ ಎಲ್ಲ ಸಚಿವರೂ ಸದಾನಂದಗೌಡರನ್ನು ಭೇಟಿ ಮಾಡಿ, ಬನ್ನೂರಮಠ ಅವರನ್ನೇ ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ.ಇದಕ್ಕೆ ಸ್ಪಂದಿಸಿದ ಗೌಡರು, `ಈ ವಿಷಯದಲ್ಲಿ ಅರುಣ್ ಜೇಟ್ಲಿ ಸೇರಿದಂತೆ ಇತರ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದು, ಅದರ ನಂತರ ಮತ್ತೊಮ್ಮೆ ರಾಜ್ಯಪಾಲರಿಗೆ ಪತ್ರ ಬರೆದು, ಬನ್ನೂರ ಮಠ ಅವರನ್ನೇ ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ಕೋರಲಾಗುವುದು. ಈ ವಿಷಯದಲ್ಲಿ ಹಿಂದೆ ಸರಿದಿಲ್ಲ. ಇದನ್ನು ಯಡಿಯೂರಪ್ಪ ಅವರಿಗೂ ವಿವರಿಸಿದ್ದೇನೆ~ ಎಂದು ಸಚಿವರ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟರು. ಇದು ಸಚಿವರಿಗೂ ತೃಪ್ತಿ ತಂದಿತು ಎನ್ನಲಾಗಿದೆ.ಆರ್‌ಎಸ್‌ಎಸ್ ಮಧ್ಯಪ್ರವೇಶ: ಇತ್ತೀಚಿನ ರಾಜ ಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವೆ ಮನಸ್ತಾಪ ಹೆಚ್ಚಾಗಿದ್ದು, ಅದನ್ನು ತಿಳಿಗೊಳಿಸಲು ಆರ್‌ಎಸ್‌ಎಸ್ ಮುಖಂಡರು ಮಧ್ಯಪ್ರವೇಶ ಮಾಡಿದ್ದಾರೆ.ಇಬ್ಬರನ್ನೂ ಪ್ರತ್ಯೇಕವಾಗಿ ಭೇಟಿ ಮಾಡಿ ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಸುಮ್ಮನೆ ಇರುವಂತೆಯೂ ಯಡಿಯೂರಪ್ಪ ಅವರಿಗೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.ಮಾತಿನ ಸಮರಕ್ಕೆ ಇತಿಶ್ರೀ: ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ಮಾತಿನ ಸಮರಕ್ಕೆ ಇತಿಶ್ರೀ ಹೇಳಿ ಅವರಿಬ್ಬರ ಮನದಲ್ಲಿರುವ ಕೋಪ- ತಾಪವನ್ನು ನಿವಾರಿಸಲಾಗುವುದು ಎಂದು ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.ತಮ್ಮ ಗೃಹ ಕಚೇರಿ `ಕೃಷ್ಣಾ~ದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು `ಪಕ್ಷದ ಹಿರಿಯರು ಇಬ್ಬರನ್ನೂ ಕರೆಸಿ ಬುದ್ಧಿ ಹೇಳಲಿದ್ದಾರೆ. ಇಬ್ಬರನ್ನೂ ಒಟ್ಟಿಗೆ ಕರೆ ದೊಯ್ಯುವ ವಿಶ್ವಾಸ ಇದೆ~ ಎಂದರು.ಪಕ್ಷದಲ್ಲಿನ ಕೆಲ ಗೊಂದಲಗಳಿಂದಾಗಿ ಸಂಪುಟ ವಿಸ್ತ ರಣೆಗೆ ಹೈಕಮಾಂಡ್ ಅನುಮತಿ ನೀಡಿಲ್ಲ. ಹಾಗೆಯೇ ಪಕ್ಷದ ಪ್ರಮುಖರ ಸಭೆ ಕೂಡ ಕರೆಯಲು ಆಗಿಲ್ಲ. ಗೊಂದಲ ನಿವಾರಣೆ ನಂತರ ಎಲ್ಲವೂ ನೆರವೇರಲಿದೆ~ ಎಂದು ಹೇಳಿದರು.ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿರುವ ವರದಿ ಪ್ರಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.ಅಶೋಕ ದೆಹಲಿಗೆ: ಪಕ್ಷದಲ್ಲಿನ ಇತ್ತೀಚಿನ ಬೆಳ ವಣಿಗೆಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲು ಗೃಹ ಸಚಿವ ಆರ್.ಅಶೋಕ ಮಂಗಳವಾರ ಸಂಜೆ ದೆಹಲಿಗೆ ತೆರಳಿದರು. ಅಖಿಲ ಭಾರತದ ಮಟ್ಟದ ಸಾರಿಗೆ ವಸ್ತು ಪ್ರದರ್ಶನ ದೆಹಲಿಯಲ್ಲಿ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸುವುದು ಅವರ ಅಧಿಕೃತ ಕಾರ್ಯಕ್ರಮ. ಇದರ ನಂತರ ಅವರು ವರಿಷ್ಠರನ್ನು ಭೇಟಿ ಮಾಡಿ ಇತ್ತೀಚಿನ ಗೊಂದಲ ನಿವಾರಿಸುವಂತೆ ಕೋರಲು ತೀರ್ಮಾನಿಸಿದ್ದಾರೆ.ಸೋಮವಾರ ನಗರದ ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಆ ಸಂದರ್ಭದಲ್ಲಿ ನಡೆದ ಚರ್ಚೆ ಬಗ್ಗೆ ಅಶೋಕ ಅವರು ಮುಖ್ಯಮಂತ್ರಿ ಸದಾನಂದ ಗೌಡರನ್ನು ಭೇಟಿ ಮಾಡಿ ವಿವರಿಸಿದ್ದಾರೆ. ಯಡಿಯೂರಪ್ಪ ಅವರ ನಿಲುವು ಮತ್ತು ಮುಂದಿನ ನಡೆ ಬಗ್ಗೆ ಇಬ್ಬರೂ ಚರ್ಚಿಸಿದರು ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)