ರಾಜ್ಯ ಫುಟ್‌ಬಾಲ್ ಸಂಸ್ಥೆಯಲ್ಲಿ ಸಂಚಲನ

7
ಕ್ರೀಡಾ ಸಂಸ್ಥೆಗಳ ಮೇಲೆ ಕೇಂದ್ರದ ಚಾಟಿ: ಎಚ್ಚೆತ್ತ ಎಐಎಫ್‌ಎಫ್

ರಾಜ್ಯ ಫುಟ್‌ಬಾಲ್ ಸಂಸ್ಥೆಯಲ್ಲಿ ಸಂಚಲನ

Published:
Updated:

ಬೆಂಗಳೂರು: ಭಾರತ ಒಲಿಂಪಿಕ್ ಸಂಸ್ಥೆಯ ಮೇಲೆ ಐಒಸಿ ಚಾಟಿ ಬೀಸಿದ ನಂತರ ದೇಶದ ವಿವಿಧ ಕ್ರೀಡಾ ಫೆಡರೇಷನ್ ಮತ್ತು ಸಂಸ್ಥೆಗಳಲ್ಲಿ ಸಂಚಲನ ಉಂಟಾಗಿದ್ದು, ಇದೀಗ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆಗಳು ನಿಚ್ಚಳವಾಗಿದೆ.`ಬೀಸುವ ದೊಣ್ಣೆಯಿಂದ ಪಾರಾದರೆ ಸಾವಿರ ವರ್ಷ ಆಯಸ್ಸು' ಎಂಬಂತೆ ಕೇಂದ್ರ ಸರ್ಕಾರದ ಕ್ರೀಡಾ ಮಾರ್ಗದರ್ಶಿ ಸೂತ್ರಕ್ಕೆ ಹೊಂದಿಕೊಂಡು ತಮ್ಮ ತಲೆ ಉಳಿಸಿಕೊಳ್ಳುವತ್ತ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಹೆಜ್ಜೆ ಇಡುತ್ತಿದೆ.ಇನ್ನೊಂದು ವಾರದಲ್ಲಿ ರಾಷ್ಟ್ರೀಯ ಫೆಡರೇಷನ್‌ಗೆ ಚುನಾವಣೆ ನಡೆಯಲಿದ್ದು, ಹಿಂದೆ ಎರಡು ಅವಧಿಗೆ ಉಪಾಧ್ಯಕ್ಷರಾಗಿದ್ದ ಬೆಂಗಳೂರಿನ ಎ.ಆರ್.ಖಲೀಲ್ ಅವರು ಚುನಾವಣಾ ಪ್ರಕ್ರಿಯೆಯಿಂದಲೇ ದೂರವಾಗಿದ್ದಾರೆ.ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಮೇಲೆ ತಮ್ಮ ಬಿಗಿ ಹಿಡಿತವಿರಿಸಿಕೊಂಡಿರುವ ಖಲೀಲ್, ರಾಷ್ಟ್ರೀಯ ಫೆಡರೇಷನ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪ್ರಭಾವಿ ಸ್ಥಾನಮಾನ ಹೊಂದಿದ್ದರು.ಪ್ಪತ್ತು ವರ್ಷ ವಯಸ್ಸು ದಾಟಿರುವ ಖಲೀಲ್ ಸರ್ಕಾರದ ಕ್ರೀಡಾ ಮಾರ್ಗದರ್ಶಿ ಸೂತ್ರದಂತೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಫೆಡರೇಷನ್‌ನ ಮೂಲಗಳು ತಿಳಿಸಿವೆ. ಫೆಡರೇಷನ್‌ನಲ್ಲಿ ದಕ್ಷಿಣ ವಲಯವನ್ನು ಖಲೀಲ್ ಪ್ರತಿನಿಧಿಸುತ್ತಿದ್ದರು.ಆದರೆ ಈವರೆಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಕೇರಳದ ಕೆ.ಎಂ.ಮಾಥರ್ ದಕ್ಷಿಣ ವಲಯವನ್ನು ಪ್ರತಿನಿಧಿಸಲಿದ್ದು, ಉಪಾಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಇದಲ್ಲದೆ ಇನ್ನೂ ಎರಡು ಹೊಸ ಮುಖಗಳು ಉಪಾಧ್ಯಕ್ಷ ಸ್ಥಾನಕ್ಕೇರಿದರೆ, ಐದು ವಲಯಗಳಿಂದ ಯುವಕರೇ ಕೇಂದ್ರ ಸಮಿತಿಯೊಳಗೆ ಬರುವುದು ಸ್ಪಷ್ಟವಾಗಿದೆ. ಆದರೆ, ಖಲೀಲ್ ಅವರು ಸಮಿತಿಯ ಸದಸ್ಯರಾಗಿರುತ್ತಾರೆ.ರಾಷ್ಟ್ರೀಯ ಘಟಕ `ಗಾಳಿ ಬಂದತ್ತ ತೂರಿಕೊಳ್ಳುವ' ಜಾಣ್ಮೆ ತೋರಿಸುತ್ತಿರುವಂತೆಯೇ ಇತ್ತ ಬೆಂಗಳೂರಿನ ಫುಟ್‌ಬಾಲ್ ವಲಯದಲ್ಲಿ ಸರ್ಕಾರದ ಕ್ರೀಡಾ ಮಾರ್ಗದರ್ಶಿ ಸೂತ್ರದ ಬಗ್ಗೆ ಚರ್ಚೆಗೆ ಗ್ರಾಸ ಸಿಕ್ಕಂತಾಗಿದೆ. ಕರ್ನಾಟಕದಲ್ಲಿ ಫುಟ್‌ಬಾಲ್ ಚಟುವಟಿಕೆ ಎಂದರೆ ದಶಕಗಳಿಂದ ಅದು ಬೆಂಗಳೂರು ಕೇಂದ್ರಿತವೇ ಆಗಿದೆ.ಇದಕ್ಕೆ ಆಡಳಿತಗಾರರ ಚುನಾವಣಾ `ರಾಜಕಾರಣ'ವೇ ಕಾರಣ ಎಂಬುದೂ ನಿಜ. ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ)ಯಲ್ಲಿ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ವ್ಯಾಪ್ತಿಗೆ ಬರುವ 117 ಕ್ಲಬ್‌ಗಳೂ ಸದಸ್ಯತ್ವ ಪಡೆದಿವೆ.ಈ ಸದಸ್ಯ ಬಲದಿಂದ ಬಿಡಿಎಫ್‌ಎನಿಂದಲೇ 8ಮಂದಿ ಪ್ರತಿನಿಧಿಗಳು ರಾಜ್ಯ ಸಂಸ್ಥೆಯೊಳಗಿದ್ದಾರೆ. ಮೈಸೂರು ಜಿಲ್ಲೆಯ 4ಮಂದಿಗೆ ಪ್ರಾತಿನಿಧ್ಯವಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ದಾವಣಗೆರೆ, ಧಾರವಾಡ, ಬೆಳಗಾವಿ, ಕೋಲಾರ ಜಿಲ್ಲೆಗಳ ಒಬ್ಬೊಬ್ಬರಿಗೆ ಪ್ರಾತಿನಿಧ್ಯವಿದೆ.ಹೀಗಾಗಿ ರಾಜ್ಯ ಸಂಸ್ಥೆಗೆ ಚುನಾವಣೆ ನಡೆದಾಗಲೆಲ್ಲಾ ಜಿಲ್ಲಾ ಪ್ರತಿನಿಧಿಗಳ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆಯೇ ಇದೆ. ಬೆಂಗಳೂರಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಕುಳಿತವರು ಜಿಲ್ಲೆಗಳಲ್ಲಿ ಫುಟ್‌ಬಾಲ್ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಫುಟ್‌ಬಾಲ್ ಜನಪ್ರಿಯವಾಗಿದ್ದರೂ, ಆಡಳಿತಗಾರರು ಮಾತ್ರ ಬೆಂಗಳೂರು ಬಿಟ್ಟು ಹೊರಗೆ ಕಾಲಿಕ್ಕಿದ್ದೇ ಅಪರೂಪ.ಇಂತಹ ಕ್ರೀಡಾ ಸಂಸ್ಥೆಗಳಿಗೆ ಆಜೀವ ಸದಸ್ಯರು ಇರಬೇಕೆಂಬ ನಿಯಮ ಭಾರತ ಒಲಿಂಪಿಕ್ ಸಂಸ್ಥೆಯ ನಿಯಮಾವಳಿಯಲ್ಲಂತೂ ಇಲ್ಲ. ಆದರೂ ರಾಜ್ಯ ಫುಟ್‌ಬಾಲ್ ಸಂಸ್ಥೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಅಜೀವ ಸದಸ್ಯರಿದ್ದಾರೆ. ಇವರಿಗೆಲ್ಲಾ ಮತದಾನದ ಹಕ್ಕು ಇದೆ ! ಇದಕ್ಕೆ ಪೂರಕವಾಗುವಂತೆ ರಾಜ್ಯ ಸಂಸ್ಥೆಯ ನಿಯಮಾವಳಿಗೆ ತಿದ್ದುಪಡಿ ಮಾಡಿಕೊಳ್ಳಲಾಗಿದೆ. ಇದು ಕೇಂದ್ರದ ಕ್ರೀಡಾ ಮಾರ್ಗದರ್ಶಿ ಸೂತ್ರಗಳಿಗೆ ಸಂಪೂರ್ಣ ವಿರುದ್ಧವಾದುದು.ಪ್ರಸಕ್ತ ರಾಜ್ಯ ಘಟಕದಲ್ಲಿಯೂ ಎಪ್ಪತ್ತು ವರ್ಷ ವಯಸ್ಸು ದಾಟಿದವರ ಸಂಖ್ಯೆ ಗಣನೀಯವೇ ಇದೆ. ಹೀಗಾಗಿ ಇನ್ನು ಏಳು ತಿಂಗಳಲ್ಲಿ ರಾಜ್ಯ ಘಟಕಕ್ಕೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಹೊಸ ಲೆಕ್ಕಾಚಾರಗಳು ಆರಂಭವಾಗಿವೆ. ಕೇಂದ್ರ ಕ್ರೀಡಾ ಮಾರ್ಗದರ್ಶಿ ಸೂತ್ರದ ಪ್ರತಿಗಳು ಇದೀಗ ಫುಟ್‌ಬಾಲ್ ಸಂಸ್ಥೆಯ ಸದಸ್ಯರ ಕೈಗಳಲ್ಲಿ ಓಡಾಡತೊಡಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry