ಬುಧವಾರ, ಜೂನ್ 16, 2021
22 °C

ರಾಜ್ಯ ಬಜೆಟ್ 2012-13: ವಿಶ್ಲೇಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಬಜೆಟ್ 2012-13: ವಿಶ್ಲೇಷಣೆ

ಸಾಮಾಜಿಕ ವಲಯಕ್ಕೆ ಆದ್ಯತೆ ಇಲ್ಲ

ಡಾ.ಅಬ್ದುಲ್ ಅಜೀಜ್

ಕೃಷಿಗೆ ಒತ್ತು ನೀಡಿರುವುದು ಒಳ್ಳೆಯದು. ಆದರೆ ಗ್ರಾಮೀಣಾಭಿವೃದ್ಧಿ, ಕೈಗಾರಿಕೆಯನ್ನು ನಿರ್ಲಕ್ಷಿಸಲಾಗಿದೆ. ಬಜೆಟ್‌ನಲ್ಲಿ ಸಮತೋಲನ ಕಾಣುತ್ತಿಲ್ಲ. ಪ್ರಾದೇಶಿಕ ಅಸಮತೋಲನ ನಿವಾರಣೆ ಮತ್ತು ಸಾಮಾಜಿಕ ವಲಯಕ್ಕೆ ನಿರೀಕ್ಷಿತ ಮಟ್ಟದ ಆದ್ಯತೆ ನೀಡಿಲ್ಲ.ಕಳೆದ ವರ್ಷ ಕೃಷಿ ಬೆಳವಣಿಗೆ ದರ ಶೇ 2.9ರಷ್ಟು ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೃಷಿಗೆ ಆದ್ಯತೆ ನೀಡಿರುವುದು ಕಂಡು ಬರುತ್ತದೆ. ಕೃಷಿ ಬೆಳವಣಿಗೆ ದರ ಹೆಚ್ಚಾಗಬೇಕಾದರೆ, ಕೃಷಿಗೆ ಪೂರಕವಾದ ನೀರಾವರಿ, ರಸಗೊಬ್ಬರ, ರಾಸಾಯನಿಕಗಳು, ಬಿತ್ತನೆ ಬೀಜಗಳ ಪೂರೈಕೆಗೂ ಒತ್ತು ನೀಡಬೇಕು.ಎಂಟು ಲಕ್ಷ ಟನ್ ರಸಗೊಬ್ಬರ ಸಂಗ್ರಹ, ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಪೂರೈಕೆ ಮಾಡಲು ನಿರ್ಧರಿಸಿರುವುದು ಒಳ್ಳೆಯದು. ಆದರೆ ಕೃಷಿ ಕ್ಷೇತ್ರದಲ್ಲಿ ಸುಧಾರಣೆಯಾಗಬೇಕಾದರೆ ರೈತರಿಗೆ ಕನಿಷ್ಠ 7-8 ಗಂಟೆ ಕಾಲ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಇಲ್ಲದೆ ರೈತರು ಪರಿತಪ್ಪಿಸುತ್ತಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು.ನಗರಾಭಿವೃದ್ಧಿಗೆ 5500 ಕೋಟಿ ರೂಪಾಯಿ, ಗ್ರಾಮೀಣಾಭಿವೃದ್ಧಿಗೆ 6500 ಕೋಟಿ ರೂಪಾಯಿ ನೀಡಲಾಗಿದೆ. ಸುಮಾರು 70ರಷ್ಟು ಜನಸಂಖ್ಯೆ ಇರುವ ಗ್ರಾಮೀಣ ಪ್ರದೇಶಗಳಿಗೆ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಹಣ ನೀಡಿರುವುದು ಸರಿಯಲ್ಲ. ನಗರ ಪ್ರದೇಶದವರ ಲಾಬಿಯಿಂದಾಗಿ ನಗರಾಭಿವೃದ್ಧಿಗೆ ಹೆಚ್ಚಿನ ಹಣ ಹಂಚಿಕೆಯಾಗಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಜಲಮಂಡಳಿಗೆ ತಲಾ ಒಂದು ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಉಳಿದ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯತ್ತ ಗಮನ ಹರಿಸಿಲ್ಲ. ಎರಡು ಮತ್ತು ಮೂರನೇ ಹಂತದ ನಗರಗಳ ಅಭಿವೃದ್ಧಿ, ನೀರು ಪೂರೈಕೆ ಯೋಜನೆಗಳು, ರಸ್ತೆ ಅಭಿವೃದ್ಧಿಯತ್ತ ಚಿಂತನೆ ನಡೆಸಿಲ್ಲ.ಆಹಾರ ಧಾನ್ಯಗಳ ಸಂಗ್ರಹ ಸಾಮರ್ಥ್ಯ ಹೆಚ್ಚಳಕ್ಕೆ ವ್ಯವಸ್ಥೆ ಮಾಡುವ ನಿರ್ಧಾರ ಒಳ್ಳೆಯದು. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಮಾಹಿತಿ ತಂತ್ರಜ್ಞಾನ ಪಾರ್ಕ್‌ಗಳ ಮಾದರಿಯಲ್ಲಿ ತೊಗರಿ ಮತ್ತು ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಸ್ಥಾಪನೆ ಮಾಡುತ್ತಿರುವುದು, ಕೃಷಿ ಆಧುನೀಕರಣದತ್ತ ಗಮನಹರಿಸಿರುವುದು ಸ್ವಾಗತಾರ್ಹ.ಹಿಂದುಳಿದ ವರ್ಗಗಳ ಕಲ್ಯಾಣ ಯೋಜನೆಗಳಿಗೆ ಒಂದು ಸಾವಿರ ಕೋಟಿ ರೂಪಾಯಿ ನೀಡಿರುವುದು, ವಿದ್ಯಾರ್ಥಿವೇತನ ಹೆಚ್ಚಳ, ಕ್ರೈಸ್ತರು, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹೆಚ್ಚಿನ ಹಣ ನೀಡಿರುವುದು ಒಳ್ಳೆಯ ನಿರ್ಧಾರ. ಆದರೆ ಗುರು ಪೀಠಗಳು, ಮಠಗಳಿಗೆ ಸರ್ಕಾರ ಹಣ ನೀಡುವುದು ಸರಿಯಲ್ಲ. ಮಠಗಳು ಖಾಸಗಿಯವರ ನೆರವಿನಿಂದ ಅಭಿವೃದ್ಧಿಯಾಗಬೇಕು.ಕರ್ನಾಟಕದಲ್ಲಿ ಕೃಷಿಯ ಜೊತೆಗೆ ಕೈಗಾರಿಕಾ ವಲಯ ಹಿಂದುಳಿದಿದೆ. ಹಿಂದೆ ಶೇ 9-10ರಷ್ಟು ಇದ್ದ ಕೈಗಾರಿಕಾ ಬೆಳವಣಿಗೆ ದರ ಈಗ ಶೇ 4-5ಕ್ಕೆ ಇಳಿದಿದೆ. ಕೈಗಾರಿಕಾ ಅಭಿವೃದ್ಧಿಗೆ ಏನಾದರೂ ಮಾಡಬಹುದಿತ್ತು. ಗುಡಿ ಕೈಗಾರಿಕೆ, ಗ್ರಾಮೀಣ ಪ್ರದೇಶದ ಕೈಗಾರಿಕೆಗಳಿಗೆ ಒತ್ತು ನೀಡಿಲ್ಲ.ಆಹಾರ ಹಣದುಬ್ಬರ ಜಾಸ್ತಿಯಾದರೆ ಶ್ರೀಸಾಮಾನ್ಯನಿಗೆ ತೊಂದರೆಯಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಬತ್ತ, ಅಕ್ಕಿ, ಗೋಧಿ ಮೇಲಿನ ತೆರಿಗೆಯನ್ನು ರದ್ದುಪಡಿಸಿರುವುದು ಒಳ್ಳೆಯ ಬೆಳವಣಿಗೆ. ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡಿರುವುದರಿಂದ ಬಹುತೇಕ ಎಲ್ಲ ವರ್ಗದವರಿಗೂ ಅನುಕೂಲವಾಗಲಿದೆ. ಸಿಗರೇಟು, ತಂಬಾಕು ಇತ್ಯಾದಿಗಳ ಮೇಲೆ ತೆರಿಗೆ ಜಾಸ್ತಿ ಮಾಡಿರುವುದು ಒಳ್ಳೆಯದು.ಹಿಂದುಳಿದ ಪ್ರದೇಶವಾದ ಉತ್ತರ ಕರ್ನಾಟಕಕ್ಕೆ ಸಿಗಬೇಕಾದಷ್ಟು ಮಹತ್ವ ದೊರೆತಿಲ್ಲ. ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ಶಿಫಾರಸುಗಳ ಪ್ರಕಾರ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಾಮಾನ್ಯ ಬಜೆಟ್‌ನಲ್ಲಿ 31 ಸಾವಿರ ಕೋಟಿ ರೂಪಾಯಿ ನೀಡಬೇಕಾಗಿತ್ತು.

 

ಆದರೆ ಪ್ರತಿ ವರ್ಷ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ನೀಡುವುದು ಬಿಟ್ಟರೆ ಹೆಚ್ಚು ಒತ್ತು ನೀಡಿಲ್ಲ. ಬಡತನ ನಿರ್ಮೂಲನೆ, ಶ್ರೀಸಾಮಾನ್ಯನಿಗೆ ಉಪಯೋಗವಾಗುವ ಕಾರ್ಯಕ್ರಮಗಳಿಲ್ಲ. ಒಟ್ಟಾರೆ ಪರವಾಗಿಲ್ಲ ಅನಿಸಿದರೂ ಯುವಕರು, ಮಹಿಳೆಯರಿಗೆ ಅನುಕೂಲವಾಗುವ ಯೋಜನೆಗಳು ಇಲ್ಲ.- ಡಾ.ಅಬ್ದುಲ್ ಅಜೀಜ್, ಆರ್ಥಿಕ ಚಿಂತಕರು, ಬೆಂಗಳೂರು                                               ============ಜನಸಾಮಾನ್ಯ, ಉದ್ದಿಮೆದಾರರಿಗೆ ಖುಷಿಬಿ. ಟಿ. ಮನೋಹರ್

ರಾಜ್ಯ ಸರ್ಕಾರದ 2012-13ನೇ ಸಾಲಿನ ಬಜೆಟ್‌ನಲ್ಲಿ ಜನ ಸಾಮಾನ್ಯರ ಮೇಲೆ ಯಾವುದೇ ಹೊಸ ತೆರಿಗೆಗಳನ್ನು ಹೇರದಿರುವುದರಿಂದ, ತೆರಿಗೆ ಪ್ರಸ್ತಾವಗಳನ್ನು ಸಮರ್ಥಿಸಲು ನಾನು ಇಷ್ಟಪಡುವೆ.ಪ್ರತಿಯೊಬ್ಬರ ದಿನ ಬಳಕೆಯ ಸರಕುಗಳಾದ ಅಕ್ಕಿ, ಗೋಧಿ, ಚಪಾತಿ, ಪರೋಟಾಗಳಿಂದ ಹಿಡಿದು, ಡೀಸೆಲ್, ಹತ್ತಿ, ಮುದ್ರಾಂಕ ಶುಲ್ಕ ಮತ್ತು ಚಿನ್ನದವರೆಗೆ ತೆರಿಗೆ ದರಗಳಲ್ಲಿ ರಿಯಾಯ್ತಿ ಘೋಷಿಸಿರುವುದು ಜನಸಾಮಾನ್ಯರು ಮತ್ತು ಉದ್ಯಮಿಗಳಿಗೆ ಸಂತಸ ನೀಡಿದೆ ಎಂದೇ ವಿಶ್ಲೇಷಿಸಬಹುದು.ಮೌಲ್ಯವರ್ಧಿತ ತೆರಿಗೆಯಡಿ (ವ್ಯಾಟ್) ಭತ್ತ, ಅಕ್ಕಿ, ಗೋಧಿ, ಬೇಳೆಕಾಳು ಮತ್ತು ಅಕ್ಕಿ ಹಾಗೂ ಗೋಧಿ  ಮೇಲಿನ ತೆರಿಗೆ ವಿನಾಯ್ತಿಯನ್ನು ಮತ್ತೆ  ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಚಪಾತಿ ಮತ್ತು ಪರೋಟಾಗಳ ಮೇಲಿನ ತೆರಿಗೆ ಹೊರೆಯನ್ನು ಶೇ 14ರಿಂದ ಶೇ 5ಕ್ಕೆ ಇಳಿಸಲಾಗಿದೆ. ಚಪಾತಿ, ಪರೋಟಾ ಸಿದ್ಧಪಡಿಸಿ  ಪೂರೈಸುವುದನ್ನು (ಪ್ಯಾಕೇಜ್ಡ್) `ಇಂಡಿಯನ್ ಬ್ರೆಡ್~ ಎಂದು ಪರಿಗಣಿಸಿ ವಿನಾಯ್ತಿ ನೀಡಲು ಕೇಳಿಕೊಳ್ಳಲಾಗಿತ್ತು. ಅದಕ್ಕೆ ಮನ್ನಣೆ ಸಿಕ್ಕಿದೆ.ಶಿಕ್ಷಣ ರಂಗಕ್ಕೆ ಸಂಬಂಧಿಸಿದಂತೆ ಕಪ್ಪು ಹಲಗೆ ಮೇಲಿನ ತೆರಿಗೆ ರದ್ದು ಮಾಡಲು ಮನವಿ ಸಲ್ಲಿಸಲಾಗಿತ್ತು.  ಈ ಮನವಿಗೆ ಸ್ಪಂದಿಸದ  ಮುಖ್ಯಮಂತ್ರಿಗಳು ತೆರಿಗೆ ದರವನ್ನು ಶೇ 5ಕ್ಕೆ ಇಳಿಸಿದ್ದಾರೆ. ಹತ್ತಿ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಎಂಬುದು ಬೆಳೆಗಾರರ ಹಕ್ಕೊತ್ತಾಯವಾಗಿತ್ತು. ಈ ಬೇಡಿಕೆಗೆ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವೂ ಒತ್ತಾಸೆಯಾಗಿ ನಿಂತಿತ್ತು. ಕಚ್ಚಾ ಹತ್ತಿ ಮೇಲಿನ ತೆರಿಗೆಯನ್ನು ಶೇ 5ರಿಂದ ಶೇ 2ಕ್ಕೆ ಇಳಿಸಿರುವುದರಿಂದ ಈ ಬೇಡಿಕೆಯೂ ಈಡೇರಿದೆ.ರಾಜ್ಯದಲ್ಲಿ ಬೆಳೆದ ಹತ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಸ್ಥಳೀಯವಾಗಿಯೇ ಮಾರಾಟ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ನೆರೆಯ ರಾಜ್ಯಗಳಿಗೆ ಸಾಗಿಸಲಾಗುತ್ತಿತ್ತು. ಈ ಸಾಗಾಣಿಕೆ ಮೇಲೆ (ಅಂತರರಾಜ್ಯ ಮಾರಾಟ) ಮೇಲೆ ಶೇ 2ರಷ್ಟು ಕೇಂದ್ರ ಮಾರಾಟ ತೆರಿಗೆ ಸೇರಿ ಒಟ್ಟು ಶೇ 5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಶೇ 3ರಷ್ಟು ತೆರಿಗೆಯನ್ನು ವಾಪಸ್ ಕೊಡಲಾಗುತ್ತಿತ್ತು. ಆದರೆ, ಈ ತೆರಿಗೆ ಮರು ಪಾವತಿ ಮೊತ್ತ ತಡವಾಗಿ ಕೈಸೇರುತ್ತಿತ್ತು. ಇದರಿಂದ ಸಕಾಲದಲ್ಲಿ ಬಂಡವಾಳ ಇಲ್ಲದೆ ಉದ್ಯಮಿಗಳಿಗೆ ತೊಂದರೆಯಾಗುತ್ತಿತ್ತು.ಕಣ್ಣೊರೆಸುವ ತಂತ್ರ: ಡೀಸೆಲ್ ಮೇಲಿನ ಗರಿಷ್ಠ ತೆರಿಗೆ ದರ ಇಳಿಸಲು ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬರಲಾಗಿತ್ತು. ಸಾಗಾಣಿಕಾ ವೆಚ್ಚ ಹೆಚ್ಚಳದ ಕಾರಣಕ್ಕೆ ರಾಜ್ಯದಲ್ಲಿ ಡೀಸೆಲ್‌ನ ಮೂಲ ದರ ಗರಿಷ್ಠ ಮಟ್ಟದಲ್ಲಿ ಇದೆ.

 

ನೆರೆ ರಾಜ್ಯಗಳಲ್ಲಿ ಕಡಿಮೆ ಬೆಲೆ ಇದ್ದ ಕಾರಣಕ್ಕೆ ಗಡಿ ಭಾಗದ ಜಿಲ್ಲೆಗಳಲ್ಲಿ ಪ್ರತಿ ಲೀಟರ್ ಬೆಲೆಯಲ್ಲಿ ರೂ.1ರಿಂದ ರೂ. 2ರಷ್ಟು ವ್ಯತ್ಯಾಸ ಇರುತ್ತಿತ್ತು. ಹೀಗಾಗಿ ಗಡಿ ಜಿಲ್ಲೆಗಳಲ್ಲಿ ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳು, ಸರಕು ಸಾಗಿಸುವವರು ಗಡಿಯಾಚೆಗೆಯೇ ಡೀಸೆಲ್ ಖರೀದಿಸುತ್ತಿದ್ದರು. ಇದರಿಂದ ರಾಜ್ಯದ ಡೀಸೆಲ್ ಮಾರಾಟ ಕಡಿಮೆಯಾಗುವುದರ ಜತೆಗೆ, ತೆರಿಗೆ ವರಮಾನ ನೆರೆ ರಾಜ್ಯಗಳ ಪಾಲಾಗುತ್ತಿತ್ತು.ಈ ಗಂಭೀರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ನಿರಂತರ ಒತ್ತಡ ಹೇರಿದ್ದರಿಂದ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು  ಶೇ 1.25ರಷ್ಟು ಇಳಿಸಿ ಶೇ 18ರಿಂದ ಶೇ 16.75ಕ್ಕೆ ಕಡಿಮೆ ಮಾಡಲಾಗಿದೆ. ಇದರಿಂದ ಕೇವಲ 60 ಪೈಸೆಗಳಷ್ಟು ಮಾತ್ರ ರಿಯಾಯಿತಿ  ಸಿಕ್ಕಂತಾಗಿದೆ. ಇದರಿಂದ ಸರ್ಕಾರಕ್ಕೂ ಯಾವುದೇ ಪ್ರಯೋಜನ ಇಲ್ಲ. ಈ ಬೆಲೆ ವ್ಯತ್ಯಾಸ ಸರಿಪಡಿಸಲೇಬೇಕು. ಬಜೆಟ್ ಅಂಗೀಕಾರ ಸಂದರ್ಭದಲ್ಲಾದರೂ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕು.ಚಿನ್ನ ಈಡೇರಿದ ಬೇಡಿಕೆ:  ಕಳೆದ ವರ್ಷ ಚಿನ್ನದ ಮೇಲೆ `ವ್ಯಾಟ್~ ದರವನ್ನು ಶೇ 1ರಿಂದ ಶೇ 2ಕ್ಕೆ ಹೆಚ್ಚಿಸಿದ್ದನ್ನು ಈಗ ಮತ್ತೆ ಶೇ 1ಕ್ಕೆ ಇಳಿಸಲಾಗಿದೆ. ಚಿನ್ನದ ವ್ಯಾಪಾರವು ನೆರೆ ರಾಜ್ಯಗಳಿಗೆ ಹೋಗಬಾರದು ಎನ್ನುವ ಕಾರಣಕ್ಕೆ ತೆರಿಗೆ ದರ ಇಳಿಸಲು ಚಿನ್ನಾಭರಣ ವರ್ತಕರು ಕಳೆದ ವರ್ಷ ಬೀದಿಗೆ ಇಳಿದು ಪ್ರತಿಭಟನೆಯನ್ನೂ ನಡೆಸಿದ್ದರು. ಆ ಬೇಡಿಕೆ ಈ ಬಾರಿ ನೆರವೇರಿದೆ.ಮೌಲ್ಯವರ್ಧಿತ ತೆರಿಗೆ ವಿಷಯದಲ್ಲಿ ಕೆಲ ಆಡಳಿತಾತ್ಮಕ ವಿಷಯಗಳನ್ನು ಸರಿಪಡಿಸಲು ಮುಂದಾಗಿರುವುದೂ ಸ್ವಾಗತಾರ್ಹವಾಗಿದೆ. ತೆರಿಗೆ ಪಾವತಿಸದೆ, ನಿರ್ಲಕ್ಷ್ಯ ತೋರಿದ ವರ್ತಕರಿಗೆ ದಂಡ ಹೆಚ್ಚಿಸಲು ಮುಂದಾಗಿರುವುದು ಉತ್ತಮ ಹೆಜ್ಜೆಯಾಗಿದೆ. ಇದರಿಂದ ಸಹಜವಾಗಿಯೇ ತೆರಿಗೆ ಸಂಗ್ರಹ ಹೆಚ್ಚಲಿದೆ.ಮುದ್ರಾಂಕ ಶುಲ್ಕ: ಮನೆ ಮಾರಾಟ, ಆಸ್ತಿ ಹಸ್ತಾಂತರ ಮೇಲಿನ ತೆರಿಗೆ ದರವನ್ನು ಶೇ 6ರಿಂದ ಶೇ 5ಕ್ಕೆ ಇಳಿಸಿರುವುದರಿಂದ ವಸತಿ ನಿರ್ಮಾಣ ರಂಗಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಅಡಮಾನ ಒಪ್ಪಂದಗಳ ಮೇಲಿನ ತೆರಿಗೆಯನ್ನು ಶೇ 0.5ರಿಂದ ಶೇ 0.1ಕ್ಕೆ ಇಳಿಸಲಾಗಿದೆ. ಉದ್ದಿಮೆ - ವಹಿವಾಟು  ವಿಸ್ತರಣೆಯಲ್ಲಿ `ಅಡಮಾನ ಒಪ್ಪಂದ~ ಪ್ರಮುಖ ಪಾತ್ರ ನಿರ್ವಹಿಸುವುದರಿಂದ ಈ ಕ್ರಮವು ಉತ್ತೇಜನಕಾರಿಯಾಗಿದೆ.ರಾಜ್ಯದಲ್ಲಿ ತೆರಿಗೆ ಪಾವತಿದಾರರಿಂದ ಉತ್ತಮ ಪ್ರತಿಕ್ರಿಯೆ ಇದೆ. ವಾಣಿಜ್ಯ ತೆರಿಗೆಗಳ ಮೂಲಕ 2011-12ನೇ ಸಾಲಿನಲ್ಲಿ ರೂ. 26 ಸಾವಿರ ಕೋಟಿಗಳಷ್ಟು ತೆರಿಗೆ ಸಂಗ್ರಹ ಗುರಿ ನಿಗದಿಪಡಿಸಲಾಗಿತ್ತು. ಇದೇ ಮಾರ್ಚ್ ಅಂತ್ಯದ ಹೊತ್ತಿಗೆ ತೆರಿಗೆ ಸಂಗ್ರಹ ಪ್ರಮಾಣ ರೂ. 27 ಸಾವಿರ ಕೋಟಿಗಳಿಗೆ ಏರಿಕೆಯಾಗಲಿದೆ. ತೆರಿಗೆ ಆಡಳಿತ ಸುಧಾರಣೆ ಮತ್ತಿತರ ಕ್ರಮಗಳಿಂದ ಮುಂದಿನ ಹಣಕಾಸು ವರ್ಷದಲ್ಲಿ ವಾಣಿಜ್ಯ ತೆರಿಗೆ ಬಾಬತ್ತಿನಲ್ಲಿಯೇ ರೂ. 31,110 ಕೋಟಿಗಳಷ್ಟು ವರಮಾನ ಸಂಗ್ರಹವಾಗಲಿರುವುದರಲ್ಲಿ ಅನುಮಾನವೇ ಇಲ್ಲ.-ಬಿ. ಟಿ. ಮನೋಹರ್

(ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ ರಾಜ್ಯ ತೆರಿಗೆ ಸಮಿತಿ ಅಧ್ಯಕ್ಷ)                                                   =======
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.