ಮಂಗಳವಾರ, ಜೂನ್ 15, 2021
25 °C

ರಾಜ್ಯ ಬಿಕ್ಕಟ್ಟು : ವರಿಷ್ಠರಲ್ಲಿ ಮೂಡದ ಒಮ್ಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಖ್ಯಮಂತ್ರಿ ಕುರ್ಚಿಗಾಗಿ  ಬಿ. ಎಸ್. ಯಡಿಯೂರಪ್ಪನವರ ಬಣದ `ಹೋರಾಟ~ ರಾಜಧಾನಿಯಲ್ಲಿ ಮಂಗಳವಾರವೂ ಮುಂದುವರಿಯಿತು. ಸಂಸದೀಯ ಪಕ್ಷದ ಸಭೆಯಲ್ಲೂ ಈ ವಿಷಯ ಪ್ರತಿಧ್ವನಿಸಿತು. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ರಾಜ್ಯದ ಬಿಕ್ಕಟ್ಟು ಕುರಿತು ಚರ್ಚಿಸಿದರು.ಸಂಸತ್‌ಭವನದ `ಅನೆಕ್ಸ್~ನಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಹುದ್ದೆಗೆ ನೇಮಿಸಬೇಕೆಂಬ ಬೇಡಿಕೆ ಪ್ರಸ್ತಾಪವಾಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಮುಖಂಡರಾದ ಎಲ್. ಕೆ.  ಅಡ್ವಾಣಿ, ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರಿಂದ ಯಾವುದೇ ಖಚಿತ ಭರವಸೆ ಸಿಗಲಿಲ್ಲ. ನಾಗಪುರದಲ್ಲಿರುವ ನಿತಿನ್ ಗಡ್ಕರಿ ದೆಹಲಿಗೆ ಹಿಂತಿರುಗಿದ ತಕ್ಷಣ ಈ ಬಗ್ಗೆ ಚರ್ಚಿಸಲಾಗುವುದೆಂಬ ಮಾಮೂಲಿ ಉತ್ತರ ಮುಖಂಡರಿಂದ ಬಂತು.ಬಿಜೆಪಿ ನಾಯಕಿ ಮೇನಕಾ ಗಾಂಧಿ ಹಾಗೂ ಬೆಳಗಾವಿ ಲೋಕಸಭಾ ಸದಸ್ಯ ಸುರೇಶ್ ಅಂಗಡಿ ರಾಜ್ಯದ ಬಿಕ್ಕಟ್ಟು ಕುರಿತು ಪ್ರಸ್ತಾಪಿಸಿದರು. `ಕರ್ನಾಟಕದಲ್ಲಿ ರಾಜಕೀಯ ಪರಿಸ್ಥಿತಿ ವಿಪರೀತ ಹದಗೆಡುತ್ತಿದೆ. ತಕ್ಷಣವೇ ಅದನ್ನು ಸರಿಪಡಿಸಿ~ ಎಂದು ಮೇನಕಾ ಆಗ್ರಹಿಸಿದರು. `ಯಡಿಯೂರಪ್ಪ 40 ವರ್ಷಗಳಿಂದ ಪಕ್ಷ ಕಟ್ಟಿದ್ದಾರೆ. ಅವರಿಗೆ ಅನ್ಯಾಯವಾಗಿದೆ. ತಕ್ಷಣ ಸರಿಪಡಿಸಿ. ಅಕ್ರಮ ಗಣಿಗಾರಿಕೆಗೆ ಸಂಬಂಧದ ದೂರನ್ನು (ಎಫ್‌ಐಆರ್) ಹೈಕೋರ್ಟ್ ರದ್ದುಪಡಿಸಿದ್ದು ವಿಳಂಬ ಮಾಡದೆ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ನೇಮಕ ಮಾಡಿ~ ಎಂದು ಅಂಗಡಿ ಆಗ್ರಹಿಸಿದರು.ನಾಗಪುರದಲ್ಲಿ ನಿತಿನ್ ಗಡ್ಕರಿ ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿ ಯಡಿಯೂರಪ್ಪ ಅವರ `ಬಂಡಾಯ~ ಕುರಿತು ಸಮಾಲೋಚಿಸಿದರು. `ಇದನ್ನು ಆರ್‌ಎಸ್‌ಎಸ್ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತುರ್ತು ತೀರ್ಮಾನ ಕೈಗೊಳ್ಳಬೇಕಾದ ಅಗತ್ಯವಿದೆ~ ಎಂದು ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಬಯ್ಯಾಜಿ ಹೇಳಿದ್ದಾರೆ.ಗಡ್ಕರಿ ಯಾವುದೇ ಗಳಿಗೆಯಲ್ಲಿ ರಾಜಧಾನಿಗೆ ಹಿಂತಿರುಗಿ ಹಿರಿಯ ನಾಯಕರ ಜತೆ ಸಮಾಲೋಚಿಸುವ ಸಾಧ್ಯತೆಯಿದೆ ಎಂದು  ಉನ್ನತ ಮೂಲಗಳು ತಿಳಿಸಿವೆ. ಯಡಿಯೂರಪ್ಪ ಅವರಿಗೆ ನಿಷ್ಠರಾಗಿರುವ ಸಂಸದರು ಮಂಗಳವಾರ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಯಡಿಯೂರಪ್ಪ ಅವರಿಗೆ ಮತ್ತೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಅಡ್ವಾಣಿ ಮತ್ತಿತರ ಮನವೊಲಿಸುವಂತೆ ಮನವಿ ಮಾಡಿದರು.ಯಡಿಯೂರಪ್ಪನವರ ಪರ ಒತ್ತಡ ಇದೇ ರೀತಿ ಮುಂದುವರಿದರೆ ಹೈಕಮಾಂಡ್ ನಿರ್ದಿಷ್ಟ ತೀರ್ಮಾನ ಕೈಗೊಳ್ಳಬೇಕಾಗಬಹುದು. ಆದರೆ, ಮಾಜಿ ಮುಖ್ಯಮಂತ್ರಿ ಮರು ನೇಮಕಕ್ಕೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರಲ್ಲಿ ಒಮ್ಮತವಿಲ್ಲ. ಹೀಗಾಗಿ ನಿರ್ಧಾರ ಏನಾಗಬಹುದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ರಾಜ್ಯಸಭೆ ಟಿಕೆಟ್ ಹಂಚಿಕೆ ಸಂಬಂಧ ಗಡ್ಕರಿ ಮತ್ತು  ಅಡ್ವಾಣಿ ಬಣದ ನಡುವೆ ಜಟಾಪಟಿ ನಡೆಯುತ್ತಿದೆ. ಕರ್ನಾಟಕದ ರಾಜಕೀಯ ಬೆಳವಣಿಗೆ ಮೇಲೂ ಇದು ಪರಿಣಾಮ ಬೀರಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ. `ಸದ್ಯಕ್ಕೆ ಹೈಕಮಾಂಡ್ ಯಡಿಯೂರಪ್ಪ ಅವರ ಮನವೊಲಿಸುತ್ತಿದೆ. `ಮುಖ್ಯಮಂತ್ರಿ ಸದಾನಂದಗೌಡ ಅವರಿಗೆ ಬಜೆಟ್ ಮಂಡಿಸಲು ಅಡ್ಡಿಪಡಿಸಬಾರದೆಂಬ ಕಟ್ಟುನಿಟ್ಟಿನ ಸಂದೇಶ ಕಳುಹಿಸಿದೆ.ಗೌಡರು ಬಜೆಟ್ ಮಂಡಿಸಿ ಸದನದ ಒಪ್ಪಿಗೆ ಪಡೆಯುತ್ತಾರೆ. ಅನಂತರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಬದಲಾವಣೆ ಅಗತ್ಯವಿದೆಯೇ ಎಂಬ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ~ ಎಂದು ಮೂಲಗಳು ಹೇಳಿವೆ.ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣಗಳು ಮತ್ತು ಹೈಕೋರ್ಟ್ ತೀರ್ಪು ಕುರಿತು ಖ್ಯಾತ ವಕೀಲರೂ ಆಗಿರುವ ಅರುಣ್ ಜೇಟ್ಲಿ ಪರಿಶೀಲಿಸಿದ್ದಾರೆ. ಈಗ ಮತ್ತೊಬ್ಬ ಹಿರಿಯ ವಕೀಲ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಅಧ್ಯಯನ ಮಾಡುತ್ತಿದ್ದಾರೆ.ಎಲ್ಲ ಪ್ರಕರಣಗಳು ಮತ್ತು ಕೋರ್ಟ್ ತೀರ್ಪು ಓದಿದ ಬಳಿಕ ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಅಕ್ರಮ ಗಣಿಗಾರಿಕೆ ಕುರಿತು ಅಧ್ಯಯನ ನಡೆಸುತ್ತಿರುವ `ಕೇಂದ್ರ ಉನ್ನತಾಧಿಕಾರ ಸಮಿತಿ~ (ಸಿಇಸಿ) ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಸಿಬಿಐ ತನಿಖೆ ಅಗತ್ಯವಿದೆಯೇ ಎಂಬ ಬಗ್ಗೆ ಏಪ್ರಿಲ್ 11ರಂದು ಅಂತಿಮ ವಿಚಾರಣೆ ನಡೆಸಲಿದೆ.ಹೇಳಿಕೆ ಮತ್ತು ದಾಖಲೆಗಳನ್ನು ಏಪ್ರಿಲ್ 9ರೊಳಗೆ ಸಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ವಕೀಲರು, ಜೆಎಸ್‌ಡಬ್ಲ್ಯು ಮತ್ತು ಅದಾನಿ ಎಂಟರ್‌ಪ್ರೈಸಸ್ ಕಂಪೆನಿಗಳ ವಕೀಲರಿಗೆ ಮಂಗಳವಾರ ಸೂಚಿಸಿದೆ. ಏಪ್ರಿಲ್ 20ರೊಳಗೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.