ಸೋಮವಾರ, ಜೂನ್ 14, 2021
26 °C

ರಾಜ್ಯ ಬಿಜೆಪಿಯ ಆಂತರಿಕ ಬಿಕ್ಕಟ್ಟು:ರಾಜ್ಯಸಭೆ ಚುನಾವಣೆ ಮೇಲೂ ಪರಿಣಾಮ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯ ಬಿಜೆಪಿಯ ಆಂತರಿಕ ಬಿಕ್ಕಟ್ಟು ರಾಜ್ಯಸಭೆ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ಕಾಣುತ್ತಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ಪರಸ್ಪರರ ಅಭ್ಯರ್ಥಿಗಳಿಗೆ ವಿರೋಧ ವ್ಯಕ್ತಪಡಿಸಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ಈ ಚುನಾವಣೆ ಹೈಕಮಾಂಡ್‌ಗೆ ಬಿಸಿ ತುಪ್ಪವಾಗಲಿದೆ.ರಾಜ್ಯಸಭೆಗೆ ಅಪ್ಪಟ ಕನ್ನಡಿಗರಿಗೆ ಟಿಕೆಟ್ ಕೊಡಬೇಕೇ ವಿನಾ ಹೊರಗಿನವರಿಗೆ ಅಲ್ಲ ಎಂಬ ಬೇಡಿಕೆಯನ್ನು ಪಕ್ಷದ ಕಾರ್ಯಕರ್ತರು ವರಿಷ್ಠರ ಮುಂದಿಟ್ಟಿದ್ದಾರೆ. ಚಿತ್ರತಾರೆ ಹೇಮಮಾಲಿನಿ, ಉದ್ಯಮಿ ರಾಜೀವ್ ಚಂದ್ರಶೇಖರ್ ಬಿಜೆಪಿ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ಕೇರಳ ಮೂಲದವರಾದ ರಾಜೀವ್ ಚಂದ್ರಶೇಖರ್ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ. ಹೇಮಾಮಾಲಿನಿ ಅವರೂ ಹೊರಗಿನವರು. ಈ ಹಿಂದೆ ಆಂಧ್ರದವರಾದ ವೆಂಕಯ್ಯ ನಾಯ್ಡು ಅವರನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ಹಿಂದೆ ಯಡಿಯೂರಪ್ಪ ಮತ್ತು ಅನಂತ ಕುಮಾರ್ ಒಗ್ಗೂಡಿ ಈ ಆಯ್ಕೆ ಮಾಡಿದ್ದರು. ಆದರೀಗ ಅವರಿಬ್ಬರು ವಿರುದ್ಧ ದಿಕ್ಕುಗಳಿಗೆ ಮುಖ ಮಾಡಿದ್ದಾರೆ.ಹೇಮಮಾಲಿನಿ ಮತ್ತು ಜಗದೀಶ್ ಶೆಟ್ಟಿಗಾರ್ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಇವರಿಬ್ಬರೂ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆ. ಹೇಮಾಮಾಲಿನಿ ಬೇರೆ ರಾಜ್ಯದಿಂದಾದರೂ ಟಿಕೆಟ್ ನೀಡುವಂತೆ ಕೇಳಿದ್ದಾರೆ. ಶೆಟ್ಟಿಗಾರ್ ಅವರಿಗೆ ಆರ್‌ಎಸ್‌ಎಸ್ ಬೆಂಬಲವಿದೆ.ಸಾಕಷ್ಟು ಸಂಖ್ಯೆ ಶಾಸಕರ ಬೆಂಬಲ ಪಡೆದಿರುವ ಯಡಿಯೂರಪ್ಪ ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಂಭವವಿದೆ. ಎರಡು ಮತ್ತು ಮೂರನೇ ಅಭ್ಯರ್ಥಿ ಆಯ್ಕೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಬಿಜೆಪಿ ಸಂಖ್ಯಾಬಲದಲ್ಲಿ ಎರಡು ಸ್ಥಾನಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಉಳಿದಿರುವ ಹೆಚ್ಚುವರಿ ಮತಗಳನ್ನು ಮೂರನೇ ಅಭ್ಯರ್ಥಿಗೆ ವರ್ಗಾಯಿಸಬಹುದಾಗಿದೆ.ಒಂದಕ್ಕಿಂತ ಹೆಚ್ಚು ಸದಸ್ಯರನ್ನು ಆಯ್ಕೆ ಮಾಡಲು ಅವಕಾಶವಿದ್ದ ಸಂದರ್ಭದಲ್ಲಿ ಬಿಜೆಪಿ ಒಂದು ಸ್ಥಾನವನ್ನು ಹೊರಗಿನವರಿಗೆ ನೀಡುತ್ತಾ ಬಂದಿದೆ. ಬಿಜೆಪಿ ಹೈಕಮಾಂಡ್ ಮುಂದಿರುವ ಹೆಸರುಗಳಲ್ಲಿ ಉತ್ತರ ಕರ್ನಾಟಕದ ಮೂಲದವರಾದ ಸುಧೀಂದ್ರ ಕುಲಕರ್ಣಿ ಅವರ ಹೆಸರಿದೆ. ಇವರು ವಾಜಪೇಯಿ, ಅಡ್ವಾಣಿ ಒಳಗೊಂಡಂತೆ ಹಲವು ಮುಖಂಡರಿಗೆ ಹತ್ತಿರದವರಾಗಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯಸಭೆ ಉಪ ಸಭಾಪತಿ ಕೆ. ರೆಹಮಾನ್ ಖಾನ್, ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಪ್ರಯತ್ನ ನಡೆಸಿದ್ದಾರೆ. ರೆಹಮಾನ್ ಖಾನ್ ಮೂರು ಸಲ ರಾಜ್ಯದಿಂದ ಆಯ್ಕೆಯಾಗಿದ್ದು, ಈ ಸಲವೂ ಟಿಕೆಟ್ ಪಡೆಯುವರೇ ಎಂಬ ಕುತೂಹಲವಿದೆ.ಮುಖ್ಯಾಂಶಗಳು


ಯಡಿಯೂರಪ್ಪ ಅನಂತ್ ಕುಮಾರ್ ಪರಸ್ಪರರ ಅಭ್ಯರ್ಥಿಗಳಿಗೆ ವಿರೋಧ

ಹೊರ ರಾಜ್ಯದವರಿಗೆ ಟಿಕೆಟ್ ಕೊಡದಂತೆ ಒತ್ತಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.