ಶುಕ್ರವಾರ, ಮಾರ್ಚ್ 5, 2021
29 °C

ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ:ಯಾರ ಅಡಿಯಾಳು, ಸ್ವತ್ತು ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ:ಯಾರ ಅಡಿಯಾಳು, ಸ್ವತ್ತು ಅಲ್ಲ

ಬೆಂಗಳೂರು: `ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು ಯಾರ ಅಡಿಯಾಳು ಅಥವಾ ಸ್ವತ್ತು ಅಲ್ಲ. ಅದೊಂದು ಸ್ವತಂತ್ರವಾದ ಸಂಸ್ಥೆ~ ಎಂದು ಆಯೋಗದ ಮಾಜಿ ಸದಸ್ಯರಾದ ವಾಸುದೇವ ಶರ್ಮಾ ಹೇಳಿದರು.

ಸಾಮಾಜಿಕ ಪರಿವರ್ತನಾ ಜನಾಂದೋಲನವು ಸೋಮವಾರ ಆಶೀರ್ವಾದ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಆಯೋಗದ ಬಗ್ಗೆ ತಿಳಿಯುವ ಮೊದಲು ಅದರ ಕಾಯ್ದೆ ಮತ್ತು ನಿಯಮಗಳನ್ನು ತಿಳಿದುಕೊಳ್ಳಬೇಕು. ಏಕೆಂದರೆ, ಅಲ್ಲಿ ಒಳಸುಳಿಗಳಿವೆ. ಹಾರಿಕೆಯಿರುವ ಕಾಯ್ದೆಗಳಿವೆ ಅವುಗಳನ್ನು ತಿಳಿದುಕೊಂಡರೆ ಆಯೋಗ ಏನು ಮಾಡುತ್ತಿದೆ ಎಂದು ತಿಳಿಯುತ್ತದೆ. ಆಯೋಗವು ಕೆಲಸ ಮಾಡುವಂತೆ ಮಾಡಲು ಅನುಕೂಲವಾಗುತ್ತದೆ~ ಎಂದರು.`ಆಯೋಗಕ್ಕೆ ಯಾರದೇ ಬೆಂಬಲವಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆಯೋಗದ ಜತೆ ಹೇಗೆ ಸಹಕರಿಸುತ್ತದೆ ಎಂಬುದು ಪ್ರಶ್ನಾರ್ಥಕವಾಗಿದೆ~ ಎಂದರು.`ದೂರುಗಳು ಆಯೋಗವನ್ನು ಹುಡುಕಿಕೊಂಡು ಬರಲಿ ಎಂದು ಕಾಯುವ ಬದಲು ನಾವೇ ದೂರುಗಳನ್ನು ಹುಡುಕಿಕೊಂಡು ಹೋಗಬೇಕು. ಆಗಲೇ ಸಮಸ್ಯೆಗಳ ನಿಜವಾದ ದರ್ಶನವಾಗುತ್ತದೆ. ಅನೇಕ ದೂರುಗಳು ದೂರವಾಣಿಯಲ್ಲಿ ಬರುತ್ತವೆ. ಅವುಗಳ ಜಾಡು ಹಿಡಿದು ಹೋಗಿ ಆದಷ್ಟು ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಬೇಕು~ ಎಂದರು.`ಆಯೋಗದಲ್ಲಿ ಇದ್ದುದರಿಂದ ಸರ್ಕಾರದ ಅನೇಕ ಧೋರಣೆಗಳ ಪರಿಚಯವಾಯಿತು. ಅದು ಹೇಳುವುದು ಒಂದು, ಮಾಡುವುದು ಇನ್ನೊಂದು. ಅಲ್ಲದೇ, ನಮ್ಮ ಅಡಿಯಾಗಿರುವ ಸಂಸ್ಥೆಗೆ ಈ ಕಾರ್ಯ ಮಾಡಲು ಅಧಿಕಾರ ನೀಡಿದವರು ಯಾರು ಎಂದು ಆಯೋಗದ ಕ್ರಮಗಳನ್ನು ಪ್ರಶ್ನಿಸಿಸುತ್ತದೆ. ಆದರೆ, ಆಯೋಗ ಯಾರ ಸ್ವತ್ತು ಅಲ್ಲ~ ಎಂದರು.ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ನೀನಾ ಪಿ.ನಾಯಕ್ ಮಾತನಾಡಿ, `ಹಿರಿಯ ಅಧಿಕಾರಿಗಳಿಗೆ ಜಿಲ್ಲೆಗಳಲ್ಲಿ ಈ ರೀತಿ ಒಂದು ಸಂಸ್ಥೆಯಿದೆ ಎಂಬ ಅರಿವೇ ಇಲ್ಲ. ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ತಮ್ಮ ಕಚೇರಿಯನ್ನು ಬಿಟ್ಟು ಹೊರಗೆ ಬರಲಿ. ಆಗ ಸಮಸ್ಯೆಗಳು ಅವರಿಗೆ ಅರ್ಥವಾಗುತ್ತದೆ~ ಎಂದರು.`ಸರ್ಕಾರದ ಯೋಜನೆಗಳನ್ನು ಅಭಿವೃದ್ಧಿಪಡಿಸಬೇಕು. ಎಲ್ಲ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ  ಅವುಗಳ ಪರಿಹಾರಕ್ಕೆ ಪ್ರಯತ್ನಿಸಬೇಕು. ಭ್ರಷ್ಟಾಚಾರ ಎಲ್ಲ ಕಡೆಗೂ ಇದೆ. ಆದರೆ, ಅದರ ವಿರುದ್ಧ ಧ್ವನಿ ಎತ್ತುವ ಕಾರ್ಯವಾಗಬೇಕು. ಇಲ್ಲವಾದರೆ, ನನ್ನಿಂದ ಆಗಲ್ಲ ಎಂದು ಕುಳಿತರೆ ಎಂದಿಗೂ ಆಗುವುದಿಲ್ಲ~ ಎಂದರು.ಕಾರ್ಯಕ್ರಮದಲ್ಲಿ ಸಾಮಾಜಿಕ ಪರಿವರ್ತನಾ ಜನಾಂದೋಲನದ ರಾಜ್ಯ ಸಂಚಾಲಕ ಎಂ.ನಾರಾಯಣ ಸ್ವಾಮಿ, ಜನಾಂದೋಲನದ ರಾಜ್ಯ ಸಮಿತಿ ಸದಸ್ಯ ಅಂಬಣ್ಣ ಆರೋಲಿಕರ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಮಾಜಿ ಸದಸ್ಯ ಡಾ.ಮಧು ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.