ರಾಜ್ಯ ಮಟ್ಟದ ಕುಸ್ತಿ ಚಾಂಪಿಯನ್‌ಷಿಪ್: ಬೆಳಗಾವಿ, ದ.ಕ. ಜಿಲ್ಲಾ ತಂಡಗಳಿಗೆ ಪ್ರಶಸ್ತಿ

7

ರಾಜ್ಯ ಮಟ್ಟದ ಕುಸ್ತಿ ಚಾಂಪಿಯನ್‌ಷಿಪ್: ಬೆಳಗಾವಿ, ದ.ಕ. ಜಿಲ್ಲಾ ತಂಡಗಳಿಗೆ ಪ್ರಶಸ್ತಿ

Published:
Updated:

ಮಂಗಳೂರು: ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ತಂಡಗಳು ಭಾನುವಾರ ಮುಕ್ತಾಯಗೊಂಡ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ತಂಡ ಪ್ರಶಸ್ತಿ ಗೆದ್ದುಕೊಂಡವು.

ಗೋಕರ್ಣನಾಥೇಶ್ವರ ಪ.ಪೂ. ಕಾಲೇಜು ಮತ್ತು ಪ.ಪೂ. ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಬೆಳಗಾವಿ ಪೈಲ್ವಾನರು 28 ಪಾಯಿಂಟ್ಸ್ ಶೇಖರಿಸಿದರೆ, ದಾವಣಗೆರೆ ಜಿಲ್ಲೆಯವರು 22 ಪಾಯಿಂಟ್ಸ್ ಸಂಗ್ರಹಿಸಿದರು.

ಬಾಲಕಿಯರ ವಿಭಾಗದಲ್ಲಿ ನಿರೀಕ್ಷೆಯಂತೆ ದ.ಕ. 26 ಪಾಯಿಂಟ್‌ಗಳೊಡನೆ ತಂಡ ಪ್ರಶಸ್ತಿ ಗೆದ್ದುಕೊಂಡರೆ, ಬೆಳಗಾವಿ 17 ಪಾಯಿಂಟ್‌ಗಳೊಡನೆ ಎರಡನೇ ಸ್ಥಾನ ಗಳಿಸಿತು.

ಕೊನೆಯ ದಿನ ಬಾಲಕರ ವಿಭಾಗದಲ್ಲಿ ಪೈಪೋಟಿ ಕಂಡುಬಂದರೆ ಬಾಲಕಿಯರ ವಿಭಾಗದಲ್ಲಿ ಹೆಚ್ಚಿನ ಸ್ಪರ್ಧೆಗಳು ಬೇಗನೇ ಮುಗಿದವು.

ಅಜರ್‌ಬೈಜಾನ್‌ನಲ್ಲಿ (ಆಗಸ್ಟ್) ನಡೆದ ವಿಶ್ವ ಶಾಲಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಹಾಗೂ ಏಷ್ಯಾ ಮಟ್ಟದಲ್ಲಿ (ಕಿರ್ಗಿಜಿಸ್ತಾನ) ಚಿನ್ನದ ಪದಕ ಪಡೆದಿದ್ದ ಗದಗ ಜಿಲ್ಲೆಯ ಬಾಲಕಿ ಪ್ರೇಮಾ ಹುಚ್ಚೆಣ್ಣವರ 44 ಕೆ.ಜಿ. ಫೈನಲ್‌ನಲ್ಲಿ ಕೇವಲ 8 ಸೆಕೆಂಡುಗಳಲ್ಲಿ ಎದುರಾಳಿ ಧಾರವಾಡದ ಸರಸ್ವತಿ ಅವರನ್ನು `ಚಿತ್' ಮಾಡಿದರೆ, ದ.ಕ.ದ ಆಳ್ವಾಸ್ ಕಾಲೇಜಿನ ಅನುಶ್ರೀ ಕೂಡ 67 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಎದುರಾಳಿಯನ್ನು ಬೇಗನೇ  ಕೆಡವಿಬಿಟ್ಟರು. ಅನುಶ್ರೀ ಅವರ ಅವಳಿ ಸೋದರಿ ಆತ್ಮಶ್ರೀ, 63 ಕೆ.ಜಿ. ವಿಭಾಗದಲ್ಲಿ ಹಾಸನದ ಎದುರಾಳಿ ವಿರುದ್ಧ ಫೈನಲ್‌ನಲ್ಲಿ ವಾಕ್‌ಓವರ್ ಪಡೆದು ಬೆವರಿಳಿಸದೇ ಗೆಲುವಿನ ನಗೆ ಬೀರಿದರು.

ಫಲಿತಾಂಶಗಳು ಕೆಳಕಂಡಂತೆ ಇವೆ: ಬಾಲಕರು: 42 ಕೆ.ಜಿ ವಿಭಾಗ: ಸಂತೋಷ್ ಕವಳೂರು (ಗದಗ) -1, ಅಣ್ಣಪ್ಪ ಎಲ್. ಬಂಗಾರ್ (ಬೆಳಗಾವಿ)-2, ಶಿವಕುಮಾರ ಜಿ. (ಬೆಂಗಳೂರು ದಕ್ಷಿಣ) ಮತ್ತು ಅನಿವಾಶ್ (ದ.ಕ.)-3; 46 ಕೆ.ಜಿ. ವಿಭಾಗ: ಪಾಲಾಕ್ಷ ಗೌಡ (ಧಾರವಾಡ)-1, ಬಲರಾಜ್ (ದ.ಕ.)-2, ವಿನೋದ್ ವೈ. (ಬಾಗಲಕೋಟೆ) ಮತ್ತು ವಿಜಯ್ (ಕಾರವಾರ)-3; 50 ಕೆ.ಜಿ: ಕೆಂಚಪ್ಪ (ದಾವಣಗೆರೆ)-1, ಮಂಜುನಾಳ ಜಾಲಿಹಾಳ (ಧಾರವಾಡ)-2, ವಿತೇಶ್ (ದ.ಕ) ಮತ್ತು ದಸ್ತಗೀರ್ ಸಾಬ್ (ಬೆಳಗಾವಿ)-3; 55 ಕೆ.ಜಿ: ರಾಜೇಶ್ (ದಾವಣಗೆರೆ)-1, ಶ್ರವಣ್ ಸಾವಂತ್ (ಧಾರವಾಡ)-2, ರಾಜು ಡಿ.ಗೋಟೂರ (ಬೆಳಗಾವಿ) ಮತ್ತು ಅಡಿವೆಪ್ಪ ಎಂ.ಎನ್. (ಬಾಗಲಕೋಟೆ)-3.60 ಕೆ.ಜಿ: ಸಿದ್ದಣ್ಣ ಪಾಟೀಲ (ಬೆಳಗಾವಿ)-1, ಪ್ರವೀಣ್ ಚೌಹಾನ್ (ಬಾಗಲಕೋಟೆ)-2, ಜಯಂತ ಟಿ.ಎಸ್. (ಚಿಕ್ಕಮಗಳೂರು) ಮತ್ತು ವಿಷ್ಣು ಕುಮಾರ್ (ದಾವಣಗೆರೆ)-3; 66 ಕೆ.ಜಿ: ಮಹದೇವ ಶಿಂಧೆ (ದಾವಣಗೆರೆ)-1, ಹನುಮಂತ (ಧಾರವಾಡ)-2, ಶಿವನಾಯ್ಕ ಎಸ್. (ಮೈಸೂರು) ಮತ್ತು ಅನಿಲ್ ಎಂ.ಗಾವಳಿ (ಬಾಗಲಕೋಟೆ)-3; 74 ಕೆ.ಜಿ ವಿಭಾಗ: ಗುರುಲಿಂಗ ಯರಗಟ್ಟಿ (ಬೆಳಗಾವಿ)-1, ಸುನೀಲ್ (ದಾವಣಗೆರೆ)-2, ಪ್ರಕಾಶ್ ಬಿ.ಕೆ. (ಹಾವೇರಿ) ಮತ್ತು ಗಣೇಶ್ (ಧಾರವಾಡ)-3.

84 ಕೆ.ಜಿ: ವಿಠ್ಠಲ್ ಬಿಸ್ನಾಳ (ಬೆಳಗಾವಿ)-1, ಪ್ರಶಾಂತ್ (ಬಾಗಲಕೋಟೆ)-2, ನವೀನ್ ಬಿ.ಜಿ. (ಚಿತ್ರದುರ್ಗ) ಮತ್ತು ಧನಂಜಯ (ಧಾರವಾಡ)-3; 96 ಕೆ.ಜಿ: ಶಿವಾನಂದ (ಬೆಳಗಾವಿ)-1, ಪ್ರಭು ನಾಯ್ಕ (ದಾವಣಗೆರೆ)-2, ಸಂಗಪ್ಪ ಕೆ. (ಬಾಗಲಕೋಟೆ) ಮತ್ತು ನಾಗಪ್ರಸಾದ್ (ಧಾರವಾಡ)-3; ಪ್ಲಸ್ 96 ರಿಂದ 120 ಕೆ.ಜಿ: ಪ್ರಜ್ವಲ್ (ದ.ಕ.)-1, ಅಲ್ತಾಫ್ (ಬೆಳಗಾವಿ)-2, ವಿವೇಕ್ (ಬೆಂಗಳೂರು ಗ್ರಾಮಾಂತರ)-3.

ಬಾಲಕಿಯರು: 44 ಕೆ.ಜಿ. ವಿಭಾಗ: ಪ್ರೇಮಾ ಉಚ್ಚಣ್ಣವರ್ (ಗದಗ)-1, ಸರಸ್ವತಿ (ಧಾರವಾಡ)-2, ರೇಖಾ (ದ.ಕ) ಮತ್ತು ಪೂಜಾ (ಹಾಸನ)-3; 48 ಕೆ.ಜಿ: ಗೀತಾ ಎಸ್.ಮಿಶಾಲಿ (ಬೆಳಗಾವಿ)-1, ಸಾಯಿರಾ ಬಾನು (ಗದಗ)-2, ಕಾವೇರಿ (ಶಿವಮೊಗ್ಗ) ಮತ್ತು ಅನ್ವಿತಾ (ದ.ಕ.)-3; ಬಶೀರಾ ಕೆ. (ಗದಗ)-1, ಶರಣ್ಯಾ (ದ.ಕ)-2, ಸುನಿತಾ (ಬೆಳಗಾವಿ) ಮತ್ತು ರೂಪಾ (ದಾವಣಗೆರೆ)-3; 55 ಕೆ.ಜಿ: ರಾಣಿ ಬಿ.ಗುರವ್ (ಬೆಳಗಾವಿ)-1, ಸೌಂದರ್ಯ (ದಾವಣಗೆರೆ)-2, ನಿಖಿತಾ (ಶಿವಮೊಗ್ಗ) ಮತ್ತು ರಂಜಿತಾ (ದ.ಕ)-3.

59 ಕೆ.ಜಿ ವಿಭಾಗ: ಮೇಘನಾ (ದ.ಕ)-1, ಧನಶ್ರೀ (ಬೆಳಗಾವಿ)-2, ಪದ್ಮಾ (ಮೈಸೂರು) ಮತ್ತು ಸುಶ್ಮಿತಾ (ಹಾಸನ)-3; 63 ಕೆ.ಜಿ: ಆತ್ಮಶ್ರೀ (ದ.ಕ.)-1, ಮಧುರಾ (ಹಾಸನ)-2, ರಂಜಿತಾ (ಮಂಡ್ಯ)-3; 67 ಕೆ.ಜಿ: ಅನುಶ್ರೀ (ದ.ಕ.)-1, ಯಲ್ಲೂತಾಯಿ (ಬೆಳಗಾವಿ)-2, ಸುಶ್ಮಾ (ಶಿವಮೊಗ್ಗ)-3; 72 ಕೆ.ಜಿ: ಭೂಮಿಕಾ (ದ.ಕ.)-1, ಪ್ರೀತಿ (ಹಾಸನ)-2, ಕಾವ್ಯಶ್ರೀ (ದಾವಣಗೆರೆ)-3.

ಸಿಗದ ಪ್ರಮಾಣಪತ್ರ!

ಪದವಿ ಪೂರ್ವ ಕಾಲೇಜು ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ಮೂರನೇ ಸ್ಥಾನ ಪಡೆದವರಿಗೆ ನಿರಾಶೆ ಕಾದಿತ್ತು. ಮೊದಲ ಎರಡು ಸ್ಥಾನ ಪಡೆದವರಿಗೆ ಮಾತ್ರ ಬೆಂಗಳೂರಿನಿಂದ ಪ್ರಮಾಣಪತ್ರ ಬಂದಿತ್ತು. ಮೂರನೇ ಸ್ಥಾನ ಪಡೆದವರ ಪ್ರಮಾಣಪತ್ರ ಬಂದಿರಲಿಲ್ಲ!ಗುಂಪು ಕ್ರೀಡೆಗಳಲ್ಲಿ ಮೊದಲ ಎರಡು ಸ್ಥಾನ ಪಡೆದವರಿಗೆ ಮಾತ್ರ `ಸರ್ಟಿಫಿಕೇಟ್' ನೀಡಲಾಗುತ್ತದೆ. ಆದರೆ ಕುಸ್ತಿಯಂಥ ವೈಯಕ್ತಿಕ ಕ್ರೀಡೆಯಲ್ಲಿ ಮೂರನೇ ಸ್ಥಾನ ಗಳಿಸಿದವರಿಗೂ ನೀಡುವುದು ವಾಡಿಕೆ. ಆದರೆ ಸ್ಥಳೀಯರ ಜತೆಗೆ ದೂರದ ಜಿಲ್ಲೆಗಳಿಂದ ಬಂದು 3ನೇ ಸ್ಥಾನ ಪಡೆದ ಸ್ಪರ್ಧಿಗಳು ಬೇಸರಪಟ್ಟುಕೊಂಡರು.`ಇದರಲ್ಲಿ ನಮ್ಮ ಪಾತ್ರವಿಲ್ಲ. ಈ ಪ್ರಮಾಣಪತ್ರಗಳನ್ನು ನಂತರ ಕಳುಹಿಸಿಕೊಡಲಾಗುವುದು ಎಂದು ಬೆಂಗಳೂರಿನ ಪದವಿ ಪೂರ್ವ ಶಿಕ್ಷಣ ಮಂಡಳಿ ಸಿಬ್ಬಂದಿ ತಿಳಿಸಿದ್ದಾರೆ.ನಂತರ ಆಯಾ ಊರಿನ ಸ್ಪರ್ಧಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ' ಎಂದು ಆತಿಥ್ಯ ವಹಿಸಿದ್ದ ಗೋಕರ್ಣನಾಥೇಶ್ವರ ಪ.ಪೂ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಂದೀಪ್ ಎಸ್.ರಾವ್ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry