ರಾಜ್ಯ ಮಟ್ಟದ ಡರ್ಟ್ ಟ್ರ್ಯಾಕ್ ಬೈಕ್ ರ‌್ಯಾಲಿ: ಬೆಂಗಳೂರಿನ ಮಧು ಚಾಂಪಿಯನ್

7

ರಾಜ್ಯ ಮಟ್ಟದ ಡರ್ಟ್ ಟ್ರ್ಯಾಕ್ ಬೈಕ್ ರ‌್ಯಾಲಿ: ಬೆಂಗಳೂರಿನ ಮಧು ಚಾಂಪಿಯನ್

Published:
Updated:

ಚಿಕ್ಕಮಗಳೂರು: ರಾಷ್ಟ್ರಮಟ್ಟದ ಸವಾರ ಬೆಂಗಳೂರಿನ ಮಧು, ಆಟೋಮೋಟಿವ್ ಸೋರ್ಟ್ಸ್ ಕ್ಲಬ್ ಮತ್ತು ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಒಕ್ಕೂಟದ ಆಶ್ರಯದಲ್ಲಿ ಭಾನುವಾರ ಇಲ್ಲಿ ಮುಕ್ತಾಯಗೊಂಡ ರಾಜ್ಯ ಮಟ್ಟದ ಡರ್ಟ್ ಟ್ರ್ಯಾಕ್ ರ‌್ಯಾಲಿಯಲ್ಲಿ ಅಸಾಧಾರಣ ವೇಗದಲ್ಲಿ ಬೈಕ್ ಚಲಾಯಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿದರು.

ಹಿರೇಮಗಳೂರಿನ ಬೈಪಾಸ್ ರಸ್ತೆಯ ತಿರುವಿನ ಮೈದಾನದ ಡರ್ಟ್ ಟ್ರ್ಯಾಕ್‌ನಲ್ಲಿ ಅದ್ಭುತ ಚಾಲನಾ ಕೌಶಲ್ಯ ತೋರಿದ ಯುವ ರೈಡರ್ ಇಂಡಿಯನ್ ಓಪನ್ ವಿಭಾಗ, ಎಕ್ಸಪರ್ಟ್ ವಿಭಾಗ ಹಾಗೂ ಟು ಸ್ಟ್ರೋಕ್ ವಿಭಾಗದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡು ಚಾಂಪಿಯನ್‌ಷಿಪ್ ತಮ್ಮದಾಗಿಸಿಕೊಂಡರು.

ಕಳೆದ ವರ್ಷದ ರಾಷ್ಟ್ರಮಟ್ಟದ ಬೈಕ್ ರ‌್ಯಾಲಿ ರನ್ನರ್ ಅಪ್ (ಎಕ್ಸ್‌ಪರ್ಟ್ ವಿಭಾಗ) ಮಧುಗೆ ಇಲ್ಲಿ ಒಲಿದದ್ದು 600ನೇ ಟ್ರೋಫಿ ! ರಾಜ್ಯ ಮತ್ತು ದಕ್ಷಿಣ ಭಾರತಮಟ್ಟದ ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ರ‌್ಯಾಲಿ ಗೆದ್ದಿರುವ ವೃತ್ತಿಪರ ರೈಡರ್ ಇಲ್ಲಿಯೂ ಸಾಹಸಮಯ ವೇಗ ಪ್ರದರ್ಶಿಸಿ `ಬೆಸ್ಟ್ ರೈಡರ್' ಪ್ರಶಸ್ತಿ ಬಾಚಿಕೊಂಡರು.

ಇಂಡಿಯನ್ ಓಪನ್ ವಿಭಾಗದ ಸ್ಪರ್ಧೆಯಲ್ಲಿ ತಾವು ಪೂರೈಸಿದ 10 ಲ್ಯಾಪ್‌ಗಳಲ್ಲೂ ಮುನ್ನಡೆ ಕಾಯ್ದುಕೊಂಡೇ ಗುರಿ ಮುಟ್ಟಿದರು. ಫೋರ್ ಸ್ಟ್ರೋಕ್ ವಿಭಾಗದಲ್ಲಿ ಸ್ಪರ್ಧೆಯ ಆರಂಭಿಕ ಹಂತದಲ್ಲಿ ಹಿಡಿತ ಕಳೆದುಕೊಂಡು ಮೊದಲೆರಡು ಸುತ್ತುಗಳಲ್ಲಿ ಈ ಚಾಲಕ ಹಿಂದೆಬಿದ್ದಿದ್ದರು. ಮತ್ತೆ ಮುನ್ನಡೆ ಸಾಧಿಸಿ ದ್ವಿತೀಯ ಸ್ಥಾನದಲ್ಲಿ ಗುರಿ ಸೇರಿದಾಗ ಪ್ರೇಕ್ಷಕರ ಕರತಾಡನ ಮುಗಿಲುಮುಟ್ಟಿತ್ತು.

ರಾಷ್ಟ್ರಮಟ್ಟದ ರ‌್ಯಾಲಿಯಲ್ಲಿ ಟಿವಿಎಸ್ ಕಂಪೆನಿ ಪ್ರತಿನಿಧಿಸುವ ಈ ಚಾಂಪಿಯನ್ ರೈಡರ್‌ಗೆ ಇಂಡಿಯನ್ ಓಪನ್ ವಿಭಾಗದಲ್ಲಿ ನಿಕಟ ಪೈಪೋಟಿ ನೀಡಿದ ಶಿವಮೊಗ್ಗದ ರಾಜೇಂದ್ರ ಮತ್ತು ಬೆಂಗಳೂರಿನ ಶರತ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

ಇನ್ನೊಬ್ಬ ಭರವಸೆಯ ರೈಡರ್ ಚಿಕ್ಕಮಗಳೂರಿನ ಸಮೀರ್ ನೋವಿಸ್ ವಿಭಾಗದಲ್ಲಿ ಅಗ್ರಸ್ಥಾನ ಮತ್ತು ಚಿಕ್ಕಮಗಳೂರು ವಿಭಾಗದಲ್ಲಿ ದ್ವಿತೀಯ ಪಡೆದು ಗಮನ ಸೆಳೆದರು.

ಡರ್ಟ್ ಟ್ರ್ಯಾಕ್‌ನಲ್ಲಿ ಹಾಸನದ ಅತಿಖ್ ಖಾನ್, ಚಿಕ್ಕಮಗಳೂರಿನ ಫ್ರಾನ್ಸಿಸ್ ಹಾಗೂ ಬೆಂಗಳೂರಿನ ಶಾನ್ ಅತ್ಯುತ್ತಮ ಪ್ರದರ್ಶನ ನೀಡಿ, ಪ್ರಶಸ್ತಿ ಗೆದ್ದರು.

ಒಂದೊಂದು ಸುತ್ತಿನ ಸ್ಪರ್ಧೆಯಲ್ಲೂ ಒಬ್ಬಲ್ಲೊಬ್ಬ ಸವಾರ ಡಿಕ್ಕಿ ಹೊಡೆದುಕೊಂಡು ಟ್ರ್ಯಾಕ್ ನಡುವೆ ಬೀಳುತ್ತಿದ್ದರು. ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿ ಮತ್ತೆ ಬೈಕ್ ಚಾಲು ಮಾಡಿಕೊಂಡು ಗುರಿಯತ್ತ ಮುನ್ನುಗ್ಗುತ್ತಿದ್ದರು. ಬೆಂಗಳೂರಿನ ಸವಾರ ಲಿಖಿತೇಶ್ ಟ್ರ್ಯಾಕ್‌ನಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡರು.

ಅವರನ್ನು ತಕ್ಷಣವೇ ಅಂಬುಲೆನ್ಸ್‌ನಲ್ಲಿ ಸಾಗಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ.

ಫಲಿತಾಂಶ: ಇಂಡಿಯನ್ ಓಪನ್: ಮಧು (ಬೆಂಗಳೂರು), ರಾಜೇಂದ್ರ (ಶಿವಮೊಗ್ಗ), ಶರತ್ (ಬೆಂಗಳೂರು); ಟು ಸ್ಟ್ರೋಕ್: ಮಧು, ಅತಿಖ್ ಖಾನ್, ಮಹಮದ್ ಜಹೀರ್ (ಬೆಂಗಳೂರು).

ಫೋರ್ ಸ್ಟ್ರೋಕ್: ರಾಕೇಶ್, ಮಧು, ಶರತ್ (ಬೆಂಗಳೂರು).

ಎಕ್ಸ್‌ಫರ್ಟ್ ಕ್ಲಾಸ್: ಮಧು (ಬೆಂಗಳೂರು), ಅತಿಖ್ ಖಾನ್ (ಹಾಸನ), ಅಜಮತ್ (ಬೆಂಗಳೂರು); ಇಂಟರ ಮೀಡಿಯೇಟ್ ಕ್ಲಾಸ್: ಅತಿಖ್ ಖಾನ್ (ಹಾಸನ), ಶರತ್, ರಾಕೇಶ್ (ಬೆಂಗಳೂರು).

ಚಿಕ್ಕಮಗಳೂರು ವಿಭಾಗ: ಫ್ರಾನ್ಸಿಸ್, ಸಮೀರ್, ಜೀವನ್.

ಸ್ಕೂಟರ್/ನಾನ್‌ಗೇರ್: ಶಾನ್ (ಬೆಂಗಳೂರು), ಮಂಜೂರ್ (ಹಾಸನ), ಜಹೀರ್ (ಮೈಸೂರು); ನೋವಿಸ್ ಕ್ಲಾಸ್: ಸಮೀರ್, ಫ್ರಾನ್ಸಿಸ್ (ಚಿಕ್ಕಮಗಳೂರು), ರಾಕೇಶ್ (ಬೆಂಗಳೂರು).

ಮೊಪೆಡ್‌ಕ್ಲಾಸ್: ಮೋಸಿನ್, ಷಹಬಾಜ್, ಅಕ್ಬರ್ (ಹಾಸನ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry