ಸೋಮವಾರ, ಆಗಸ್ಟ್ 26, 2019
27 °C

ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ 4ರಂದು

Published:
Updated:

ಹಾವೇರಿ: `ರಾಜ್ಯ ವೀರಶೈವ ಪಂಚಮಸಾಲಿ ಸಂಘದ ವತಿಯಿಂದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಜನಪ್ರತಿನಿಧಿಗಳ ಸನ್ಮಾನ ಸಮಾರಂಭ ಆ.4ರಂದು ಬೆಳಿಗ್ಗೆ 11ಗಂಟೆಗೆ ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ' ಎಂದು ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.ಗುರುವಾರ ನಗರದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಹಾಗೂ ವೃತ್ತಿ ಕೋರ್ಸ್‌ಗಳಲ್ಲಿ ಶೇ 85ಕ್ಕಿಂತ ಹೆಚ್ಚಿನ ಅಂಕ ಪಡೆದು ಯಾವುದೇ ಒಂದು ವಿಷಯದಲ್ಲಿ ಶೇ 98 ಇಲ್ಲವೇ 100 ರಷ್ಟು ಅಂಕ ಪಡೆದ 250 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು ಎಂದರು.ಪುರಸ್ಕಾರ ಪಡೆಯುವ ವಿದ್ಯಾರ್ಥಿಗಳಿಗೆ ಒಂದು ಸಾವಿರ ನಗದು, ಒಂದು ಬೆಳ್ಳಿ ಲಿಂಗದ ಕಾಯಿ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು. ಇದೇ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಹಾಗೂ ರಾಜ್ಯದ ಪಂಚಮಸಾಲಿ ಸಮಾಜದ ಎಲ್ಲ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.ಇದಕ್ಕೂ ಮುನ್ನ ಅಂದು ಬೆಳಗ್ಗೆ 9 ಗಂಟೆಗೆ ವಿವಿಧ ವಾದ್ಯ ವೈಭವದ ಜತೆಗೆ 508 ಮಹಿಳೆಯರಿಂದ ಕುಂಭ ಮೇಳದೊಂದಿಗೆ ಹರಿಹರದ ಸಿದ್ಧಲಿಂಗ ಶ್ರೀಗಳ ಬೃಹತ್ ಮೆರವಣಿಗೆ ನಡೆಸಲಾಗುವುದು. ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ಹಾಯ್ದು ಶಿವಬಸವ ಕಲ್ಯಾಣಮಂಟಪ ತಲುಪುಲಿದೆ ಎಂದು ತಿಳಿಸಿದರು.ನಂತರ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಉದ್ಘಾಟಿಸಲಿದ್ದಾರೆ. ಸಾನಿಧ್ಯವನ್ನು ಹರಿಹರದ ಪಂಚಮಸಾಲಿ ಪೀಠದ ಸಿದ್ಧಲಿಂಗೇಶ್ವರ ಶ್ರೀಗಳು, ಸಮ್ಮುಖವನ್ನು ಹುಕ್ಕೇರಿಮಠದ ಸದಾಶಿವ ಶ್ರೀಗಳು, ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ದಿಂಡೂರ ವಹಿಸಲಿದ್ದಾರೆ ಎಂದು ಹೇಳಿದರು.ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಮಾಜಿ ಸಚಿವ ಮುರುಗೇಶ ನಿರಾಣಿ, ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಕೆ.ಬಿ. ಕೋಳಿವಾಡ, ಮನೋಹರ ತಹಸೀಲ್ದಾರ್, ಬಸವರಾಜ ಬೊಮ್ಮಾಯಿ, ಯು.ಬಿ. ಬಣಕಾರ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಸಮಾರಂಭದಲ್ಲಿ ಪಂಚಮಸಾಲಿ ಸಮಾಜದ ಶಾಸಕರನ್ನು ಹಾಗೂ ಯಿಂದ ಗಾರ್ಡನ್ ಬ್ರೌನ್ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ಅಂಗಡಿಯನ್ನು ಸನ್ಮಾನಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಪಿ.ಡಿ. ಶಿರೂರ, ಜಿಲ್ಲಾ ಅಧ್ಯಕ್ಷ ಎಸ್.ಆರ್. ಅಂಗಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಆರ್. ತೋಟದ, ಜಿ.ಪಂ. ಸದಸ್ಯೆ ಬಸಮ್ಮ ಅಬಲೂರ, ಹಾವೇರಿ ಶಹರ ಘಟಕದ ಅಧ್ಯಕ್ಷ ನಾಗೇಂದ್ರ ಕಟಕೋಳ, ತಾಲ್ಲೂಕು ಅಧ್ಯಕ್ಷ ವೀರೇಶ ಮತ್ತಿಹಳ್ಳಿ ಇತರರು ಹಾಜರಿದ್ದರು.

Post Comments (+)