ರಾಜ್ಯ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ

7

ರಾಜ್ಯ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ

Published:
Updated:

ನವದೆಹಲಿ: ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಸಲ್ಲಿಸಿರುವ ಅರ್ಜಿಗೆ ಉತ್ತರಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಾಲ್ಕು ವಾರ ಕಾಲಾವಕಾಶ ನೀಡಿದೆ.ಈ ಪ್ರಕರಣದಲ್ಲಿ ಉತ್ತರ ಸಲ್ಲಿಸಲು 4 ವಾರ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರದ ವಕೀಲರು ಮನವಿ ಮಾಡಿದ ಬಳಿಕ ನ್ಯಾ. ಅಲ್ತಾಮಸ್ ಕಬೀರ್‌ಹಾಗೂ ನ್ಯಾ. ಎಸ್. ಎಸ್. ನಿಜ್ಜಾರ್ ಅವರನ್ನು ಒಳಗೊಂಡ ಪೀಠ ವಿಚಾರಣೆ ಮುಂದೂಡಿತು.ಲೋಕಾಯುಕ್ತ ವರದಿ ಆಧಾರದ ಮೇಲೆ ಕೃಷ್ಣ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸುವುದಕ್ಕೆ ಸುಪ್ರೀಂ ಕೋರ್ಟ್ ಜನವರಿ 27ರಂದು ತಡೆಯಾಜ್ಞೆ ನೀಡಿದೆ. ಕೃಷ್ಣ 1999ರಿಂದ  2004ರ ನಡುವೆ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಘೋಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ ಆರೋಪಕ್ಕೆ ಒಳಗಾಗಿದ್ದಾರೆ. ಈ ಸಂಬಂಧದ ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಲು ಹೈಕೋರ್ಟ್ ನೀಡಿದ ಅನುಮತಿಯನ್ನು ವಿದೇಶಾಂಗ ಸಚಿವರು ಸುಪ್ರೀಂ ಕೋರ್ಟ್‌ನಲ್ಲಿ ಜನವರಿ 24ರಂದು ಪ್ರಶ್ನಿಸಿದ್ದಾರೆ.ಕೇಂದ್ರ ಸರ್ಕಾರದ ಖನಿಜ ಸಂಪತ್ತಿನ ನೀತಿಗೆ ಅನುಗುಣವಾಗಿ ಗಣಿಗಾರಿಕೆಗೆ ಅನುಮತಿ ನೀಡಿದ್ದಾಗಿ ಕೃಷ್ಣ ವಾದಿಸಿದ್ದಾರೆ. ಆದರೆ, ಘೋಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ಕೇಳಿ ಅಟಾರ್ನಿ ಜನರಲ್ ಜಿ.ಇ ವಹನ್ವತಿ ಅವರಿಗೆ ಬೆಂಗಳೂರಿನ ಟಿ.ಜೆ. ಅಬ್ರಹಾಂ ಗುರುವಾರ ಅರ್ಜಿ ಸಲ್ಲಿಸಿದ್ದಾರೆ. ಅರಣ್ಯ ಪ್ರದೇಶ, ಪ್ರಾಣಿ- ಪಕ್ಷಿ ಧಾಮಗಳು ಹಾಗೂ ರಾಷ್ಟ್ರೀಯ ಉದ್ಯಾನಗಳನ್ನು ಘೋಷಿತ ಪ್ರದೇಶದ ವ್ಯಾಪ್ತಿಯಿಂದ ಹೊರಗಿಡಬಾರದೆಂದು ಸುಪ್ರೀಂ ಕೋರ್ಟ್ 2000ದ ನ. 13ರಂದು ನೀಡಿರುವ ತೀರ್ಪನ್ನು ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕ್ರಿಯೆ ಆರಂಭಿಸಲು ಅಟಾರ್ನಿ ಜನರಲ್ ಅನುಮತಿ ಅಗತ್ಯ ಎಂದು ಅರ್ಜಿದಾರರು ಹೇಳಿದ್ದಾರೆ.ಸರ್ಕಾರ ಅಬ್ರಹಾಂ ಅವರ ಅರ್ಜಿಗೆ ನಾಲ್ಕು ತಿಂಗಳಲ್ಲಿ ಉತ್ತರಿಸಬೇಕಾಗಿದೆ. ಇಂಥ ಅರ್ಜಿ ಮೇಲೆ ನಿಗದಿತ ಅವಧಿಯೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ಒಪ್ಪಿಗೆಯಿದೆ ಎಂದು ಭಾವಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಈಚೆಗೆ 2ಜಿ ಪ್ರಕರಣದ ತೀರ್ಪಿನ ಸಂದರ್ಭದಲ್ಲಿ ಹೇಳಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry