ರಾಜ್ಯ ಸರ್ಕಾರದ ಪ್ರತಿಕೃತಿ ದಹನ

7

ರಾಜ್ಯ ಸರ್ಕಾರದ ಪ್ರತಿಕೃತಿ ದಹನ

Published:
Updated:

ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಒತ್ತುವರಿ ಭೂಮಿ ತೆರವು ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಆದೇಶ ಪ್ರತಿ ಹಾಗೂ ರಾಜ್ಯ ಸರ್ಕಾರದ ಪ್ರತಿಕೃತಿ ಸುಟ್ಟು ನಗರದಲ್ಲಿ ಬುಧವಾರ ಪ್ರತಿಭಟಿಸಿದರು.ಜೆಡಿಎಸ್ ಜಿಲ್ಲಾ ಘಟಕ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರ್‌ಗೆ ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ ನೀಡಿರುವ ಆದೇಶದ ಪ್ರತಿಯನ್ನು ಹನುಮಂತಪ್ಪ ವೃತ್ತದಲ್ಲಿ ದಹಿಸಿದರು. ಕೂಡಲೇ ಒತ್ತುವರಿ ತೆರವು ಆದೇಶ ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಬಿಜೆಪಿ ಸರ್ಕಾರದ ಪ್ರತಿಕೃತಿ ಸುಟ್ಟು, ರಾಜ್ಯ ಸರ್ಕಾರ ಮತ್ತು ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿದರು.ಒತ್ತುವರಿ ತೆರವು ಕಾರ್ಯಕ್ಕೆ ಮುಂದಾದರೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು, ವಿದ್ಯುತ್ ಸಮಸ್ಯೆ ಬಗೆಹರಿಸಬೇಕು. ಲಕ್ಯಾ, ಅಂಬಳೆ ಮತ್ತು ಕಸಬಾ ಹೋಬಳಿಗಳನ್ನು ಬರಪೀಡಿತ ಪ್ರದೇಶವೆಂದು ಘೊಷಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ, ಸರ್ಕಾರದ ಜನಪ್ರತಿನಿಧಿಗಳು ಕೇವಲ ಸುಳ್ಳು ಆಶ್ವಾಸನೆ ನೀಡಿ ಕಾಲಕಳೆಯುತ್ತಿದ್ದಾರೆ. ಅಧಿಕಾರಿಗಳು ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.ಚಿಕ್ಕಮಗಳೂರು ಮತ್ತು ಉಡುಪಿ ಕ್ಷೇತ್ರದ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಒತ್ತುವರಿ ತೆರವು ಕಾರ್ಯದ ನಾಟಕ ಮಾಡಲಾಗುತ್ತಿದೆ. ಸಂಸದರಾಗಿ ಜಿಲ್ಲೆ ಪ್ರತಿನಿಧಿಸುತ್ತಿದ್ದ ಡಿ.ವಿ.ಸದಾನಂದಗೌಡ ಅವರು ಜಿಲ್ಲೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಎಚ್.ದೇವರಾಜ್ ಆರೋಪಿಸಿದರು.ಸರ್ಕಾರ ಮೊದಲು ಜಿಲ್ಲೆಯ ಬಿಜೆಪಿ ಶಾಸಕರ ಒತ್ತವರಿ ತೆರವುಗೊಳಿಸಲು ಮುಂದಾಗಬೇಕು. ಒತ್ತುವರಿ ತೆರವು ಕಾರ್ಯವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಮೊದಲ ಹಂತವಾಗಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.ಪಕ್ಷದ ಮುಖಂಡರಾದ ಮಂಜಪ್ಪ, ಜ್ಯೋತಿ ಈಶ್ವರ್, ಹೊಲದಗದ್ದೆ ಗಿರೀಶ್, ಹಂಪಯ್ಯ, ಮುಕ್ತಯಾರ್‌ಅಹ್ಮದ್, ಎಂ.ಡಿ.ರಮೇಶ್, ಐ.ಡಿ.ಚಂದ್ರಶೇಖರ್, ಜೆ.ಡಿ.ಸುರೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry