ರಾಜ್ಯ ಸರ್ಕಾರದ ವೈಫಲ್ಯಕ್ಕೆ ಖಂಡನೆ

7
ಕೆಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ರಾಜ್ಯ ಸರ್ಕಾರದ ವೈಫಲ್ಯಕ್ಕೆ ಖಂಡನೆ

Published:
Updated:

ಶಿವಮೊಗ್ಗ: ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಕೆಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ನಗರದ ಸೈನ್ಸ್ ಮೈದಾನದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯಪಾಲರು ಮಧ್ಯೆ ಪ್ರವೇಶಿಸಿ, ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡುವ ಮೂಲಕ ಜನರ ಸಂಕಷ್ಟಗಳನ್ನು ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಅವರಿಗೆ ಮನವಿ ಸಲ್ಲಿಸಿದರು.ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಕೆಜೆಪಿ ಮುಖಂಡರು, ರಾಜ್ಯ ಸರ್ಕಾರದ ಆಡಳಿತ ಯಂತ್ರ ನಿಷ್ಕೃಯವಾಗಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಭಾಗ್ಯಲಕ್ಷ್ಮೀ ಯೋಜನೆ ಅಡಿ ಸೆ. 2001ರಿಂದ 57,780 ಫಲಾನುಭವಿಗಳಿಗೆ ಬಾಂಡ್ ವಿತರಣೆ ಮಾಡಿಲ್ಲ. ವಿವಿಧ ಮಾಸಾಶನಗಳಾದ ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ವಿಧವಾ ವೇತನ ಯೋಜನೆಯಲ್ಲಿ ಮಾರ್ಚ್ 2012ರಿಂದ ರಾಜ್ಯದಾದ್ಯಂತ 10ಲಕ್ಷ ಫಲಾನುಭವಿಗಳಿಗೆ ಮಾಸಾಶನ ನೀಡಿಲ್ಲ ಎಂದು ಕೆಜೆಪಿ ರಾಜ್ಯ ಸಮಿತಿ ಸದಸ್ಯ ಕೆ.ಪಿ. ಪುರುಷೋತ್ತಮ್ ದೂರಿದರು.ಬಜೆಟ್‌ನಲ್ಲಿ ಘೋಷಿಸಿದ ಶೇಕಡ ಶೂನ್ಯ ಬಡ್ಡಿದರದಲ್ಲಿ ವಿತರಣೆ ಮಾಡಬೇಕಾದ ಸಾಲದಲ್ಲಿ ರೂ. 267 ಕೋಟಿ ಸಾಲ ವಿತರಣೆ ಮಾಡಿಲ್ಲ. ಸ್ವಸಹಾಯ ಸಂಘಗಳಿಗೆ ರಿಯಾಯ್ತಿ ದರದಲ್ಲಿ ಸಾಲದ ವ್ಯತ್ಯಾಸ ಬಡ್ಡಿ ಡಿಸಿಸಿ ಬ್ಯಾಂಕುಗಳಿಗೆ ವಿತರಣೆ ಮಾಡಿಲ್ಲ. ಪ್ರತಿ ಲೀಟರ್ ಹಾಲಿಗೆ ರೂ. 2ಪ್ರೋತ್ಸಾಹಧನ ನೀಡುವ ಹಣವನ್ನು ಅಕ್ಟೋಬರ್ 2012ರಿಂದ ಇಲ್ಲಿಯವರೆಗೆ ಒಕ್ಕೂಟಗಳಿಗೆ ಬಿಡುಗಡೆ ಮಾಡಿಲ್ಲ ಎಂದು ಕೆಜೆಪಿ ಮುಖಂಡ ಗುರುಮೂರ್ತಿ ದೂರಿದರು.ಸರ್ಕಾರ ಹಣ ಬಿಡುಗಡೆ ಮಾಡದಿರುವುದರಿಂದ ಅಸಹಾಯಕರಾದ ಲಕ್ಷಾಂತರ ಜನ ತೊಂದರೆಗೆ ಒಳಗಾಗಿದ್ದಾರೆ. ಅದರಲ್ಲೂ ವೃದ್ಧರು, ವಿಧವೆಯರು, ಅಂಗವಿಕಲರು, ಮಾಸಾಶನ ಪಡೆಯದೆ ಉಪವಾಸ ಅನುಭವಿಸುವ ಸ್ಥಿತಿ ಬಂದಿದೆ. ವಂಚಿತಗೊಂಡಿರುವ ಫಲಾನುಭವಿಗಳಿಗೆ ದೊರೆಯಬೇಕಾದ ಆರ್ಥಿಕ ನೆರವು ಸಕಾಲದಲ್ಲಿ ನೀಡದಿರುವುದು ಸರ್ಕಾರದ ದೊಡ್ಡ ವೈಫಲ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ಮೆರವಣಿಗೆಯನ್ನು ಉದ್ದೇಶಿಸಿ ಮುಖಂಡರಾದ ಜಿ. ಬಸವಣ್ಯಪ್ಪ, ಎಸ್.ಎಸ್. ಜ್ಯೋತಿಪ್ರಕಾಶ್, ಎಸ್. ರುದ್ರೇಗೌಡ, ಸುಧಾಮಣಿ ಬೋರಯ್ಯ ಮಾತನಾಡಿದರು. ಮುಖಂಡರಾದ ಬಿಳಕಿ ಕೃಷ್ಣಮೂರ್ತಿ, ನಾಗರಾಜ್, ಬಳ್ಳೆಕೆರೆ ಸಂತೋಷ್, ಹೊನ್ನಪ್ಪ, ಐಡಿಯಲ್ ಗೋಪಿ, ಸಿ.ಎಲ್. ರಮೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry