ರಾಜ್ಯ ಸರ್ಕಾರ ವಿಫಲ: ಸಿದ್ದರಾಮಯ್ಯ

7

ರಾಜ್ಯ ಸರ್ಕಾರ ವಿಫಲ: ಸಿದ್ದರಾಮಯ್ಯ

Published:
Updated:

ಕೋಲಾರ: ರಾಜ್ಯದ ಜನರ ಕಷ್ಟವನ್ನು ಕಾವೇರಿ ನದಿ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟಿಗೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾನುವಾರ ಶ್ರೀನಿವಾಸಪುರಕ್ಕೆ ತೆರಳುವ ಮುನ್ನ ನಗರದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದ ಅವರು ಪತ್ರಕರ್ತರೊಡನೆ ಮಾತನಾಡಿ, ಕಾವೇರಿ ನೀರು ಹರಿಸಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಗೆ ಸಮರ್ಪಕ ಸ್ಪಷ್ಟನೆ ನೀಡಲು ಸರ್ಕಾರ ವಿಫಲವಾಗಿದೆ ಎಂದರು.ನ್ಯಾಯಾಲಯದಲ್ಲಿ ವಕೀಲರಾದ ನಾರಿಮನ್ ಮತ್ತು ತಂಡವು ರಾಜ್ಯದ ನಿಲುವು ಪ್ರತಿಪಾದಿಸುವಲ್ಲಿಯೂ ವಿಫಲವಾಗಿದೆ ಎಂದು ದೂರಿದರು.ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಕಾವೇರಿ ಅಚ್ಟುಕಟ್ಟು ಪ್ರದೇಶ ಸೇರಿದಂತೆ 43 ತಾಲ್ಲೂಕುಗಳಲ್ಲಿ ಬೆಳೆಗಳಿಗೆ ನೀರಿಲ್ಲ. ಕಾವೇರಿ ಜಲಾಶಯದಲ್ಲಿ ಕೇವಲ 69 ಟಿಎಂಸಿ ನೀರು ಇದೆ. ನಮ್ಮ ರೈತರಿಗೆ 155 ಟಿಎಂಸಿ ನೀರು ಅಗತ್ಯವಿದೆ. ಕುಡಿಯುವುದಕ್ಕೆ 35 ಟಿಎಂಸಿ ನೀರು ಬೇಕು. ರಾಜ್ಯದಲ್ಲಿ 85 ಟಿಎಂಸಿ ನೀರಿನ ಕೊರತೆ ಎದುರಾಗಿದೆ. ಸನ್ನಿವೇಶ ಹೀಗಿರುವಾದ ತಮಿಳುನಾಡಿಗೆ ದಿನವೂ ನೀರು ಹರಿಸಿದರೆ ರಾಜ್ಯದ ರೈತರ ಗತಿ ಏನು? ಎಂದು ಪ್ರಶ್ನಿಸಿದರು.ರೈತರ ಹೋರಾಟಕ್ಕೆ ಕಾಂಗ್ರೆಸ್ ಸದಾ ಬೆಂಬಲ ನೀಡುತ್ತದೆ. ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಧಾನಿ ಸಿಂಗ್ ರಾಜಕೀಯ ಮಾಡಲಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.1924ರಿಂದಲೂ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಲೇ ಇದೆ. ಆಗ ಏರ್ಪಟ್ಟ ಅವೈಜ್ಞಾನಿಕ ಕರಾರುಗಳಿಂದ ರಾಜ್ಯದ ರೈತರು ನಿರಂತರವಾಗಿ ಶೋಷಣೆಗೊಳಗಾಗುತ್ತಲೇ ಇದ್ದಾರೆ. ವಿವಾದವನ್ನು ಬಗೆಹರಿಸಲು ವೇದಿಕೆಯನ್ನು ರಚಿಸಬೇಕು.ತಮಿಳುನಾಡಿನಲ್ಲಿ ಜಯಲಲಿತಾ ಅವರು ಅಧಿಕಾರಕ್ಕೆ ಬಂದಾಗ ಮಾತ್ರ ಕಾವೇರಿ ವಿವಾದ ತಾರಕಕ್ಕೇರುತದೆ. ಕರುಣಾನಿಧಿ  ಅಧಿಕಾರದಲ್ಲಿದ್ದಾಗ ಸಮಸ್ಯೆ ತೀವ್ರಗೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟರು.ಮಾಜಿ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಭ್ರಷ್ಟರಾಗಿ ಜೈಲುವಾಸ ಕಂಡಿರುವ ರಾಜಕಾರಣಿ. ಅವರನ್ನು ಕಾಂಗ್ರೆಸ್‌ಗೆ ಏಕೆ ಸೇರಿಸಿಕೊಳ್ಳಬೇಕು? ಅದರ ಅಗತ್ಯ ಪಕ್ಷಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿವಾದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖಂಡರು ಅಧ್ಯಕ್ಷ ಸ್ಥಾನ ಕೇಳಿದ ಮಾತ್ರಕ್ಕೆ ಅವರ ಜಾತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯಾಖ್ಯಾನಿಸುವುದು ಸರಿ ಅಲ್ಲ ಎಂದರು.ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಚಿವ ಕೆ.ಎ.ನಿಸಾರ್ ಅಹ್ಮದ್, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಡಿ.ವಿ.ಹರೀಶ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್, ಮುಖಂಡರಾದ ವೆಂಕಟಮುನಿಯಪ್ಪ, ಪ್ರಸಾದ್‌ಬಾಬು, ಕುಮಾರ್, ಕೆ.ಜಯದೇವ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry