ರಾಜ್ಯ ಸರ್ಕಾರ ವಿರುದ್ಧ ಜೆಡಿಎಸ್ ಪ್ರತಿಭಟನೆ

7

ರಾಜ್ಯ ಸರ್ಕಾರ ವಿರುದ್ಧ ಜೆಡಿಎಸ್ ಪ್ರತಿಭಟನೆ

Published:
Updated:

ತುಮಕೂರು: ಶಾಸಕ ಜಮೀರ್ ಅಹಮದ್ ಅವರ ಹೆಸರನ್ನು ದರೋಡೆ ಪ್ರಕರಣಕ್ಕೆ ಸೇರಿಸಿರುವ ಕ್ರಮ ಖಂಡಿಸಿ ಬಿಜೆಪಿ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಯಡಿಯೂರಪ್ಪ ಸರ್ಕಾರದ ಪ್ರತಿಕೃತಿ ದಹನ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು.ದ್ವೇಷದ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.ಬೆಂಗಳೂರು ಬಳಿ ಪ್ರಕರಣ ನಡೆದು, ಮೂರು ತಿಂಗಳಾದರೂ ಶಾಸಕರ ಹೆಸರು ಎಲ್ಲೂ ಪ್ರಸ್ತಾಪ ಆಗಿಲ್ಲ.ಈಗ ಡಕಾಯಿತಿ ಆರೋಪ ಹೊರಿಸಿ, ಶಾಸಕರನ್ನು ಜೈಲಿಗೆ ಕಳುಹಿಸುವ ಸಂಚು ನಡೆದಿದೆ.ಪ್ರಕರಣದಿಂದ ಜಮೀರ್ ಹೆಸರು ಕೈಬಿಡಬೇಕು ಎಂದು ಆಗ್ರಹಿಸಿದರು.ಆಪರೇಷನ್ ಕಮಲ, ಸ್ಪೀಕರ್ ಮೂಲಕ ಯಡಿಯೂರಪ್ಪ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ. ಈಗ ಪೊಲೀಸ್ ಶಕ್ತಿ ಬಳಸಿಕೊಂಡು ಅಲ್ಪಸಂಖ್ಯಾತರ ನಾಯಕ ಜಮೀರ್ ಅಹಮದ್ ಅವರ ರಾಜಕೀಯ ಭವಿಷ್ಯ ಮುಗಿಸುವ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್.ನಿಂಗಪ್ಪ, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಸುಲ್ತಾನ್ ಮಹಮದ್, ಯುವ ಘಟಕದ ಅಧ್ಯಕ್ಷ ಕುತುಬ್ಬುದಿನ್, ಉಪಾಧ್ಯಕ್ಷ ಜೋಸೆಫ್, ತಾಲ್ಲೂಕು ಘಟಕದ ಅಧ್ಯಕ್ಷ ಅಲೀಂ ಉಲ್ಲಾ ಖಾನ್, ಮುಖಂಡರಾದ ಮುಕ್ತಾರ್ ಅಹಮದ್, ಬಾಬು, ಅಬ್ದುಲ್ ಸೈಯದ್, ವಾಜಿದ್, ತಾಹೇರಾ ಕುಲ್ಸುಂ, ಹಬೀದಾ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry