ಬುಧವಾರ, ಜೂನ್ 23, 2021
24 °C

ರಾಜ್ಯ ಸಲಹಾ ಬೆಲೆ ಕಾನೂನು ಜಾರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಕಾನೂನನ್ನು ಸರ್ಕಾರ ಬಜೆಟ್ ಅಧಿವೇಶನದಲ್ಲಿ ಜಾರಿಗೆ ತರಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.ನಗರದ ನೀಲಕಂಠೇಶ್ವರ ಮಠದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಬುಧವಾರ ಹಮ್ಮಿಕೊಂಡಿದ್ದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಯುವ ವೆಚ್ಚ ಹೆಚ್ಚಾಗಿದೆ. ಆದರೆ ಅದಕ್ಕೆ ಸಿಗುವ ಬೆಲೆ ಮಾತ್ರ ತೀರಾ ಕಡಿಮೆ. ಅಲ್ಲದೇ, ಕಬ್ಬು ಕಟಾವು ಕೂಲಿಯನ್ನು ಕಾರ್ಖಾನೆಗಳು ಟನ್‌ಗೆ ರೂ. 450ಕ್ಕೆ ಹೆಚ್ಚಿಸಿವೆ. ಹೀಗಾಗಿ ಸರ್ಕಾರ ರಾಜ್ಯ ಸಲಹಾ ಬೆಲೆ ಕಾನೂನನ್ನು ಜಾರಿಗೆ ತರಬೇಕು. ಇಲ್ಲದಿದ್ದರೆ ಬಜೆಟ್ ಮಂಡನೆಯಾದ ದಿನದಿಂದಲೇ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮಾರ್ಚ್ 2 ರಂದು ಬೆಂಗಳೂರಿನಲ್ಲಿ ರೈತರ ಸಭೆ ಕರೆದಿದ್ದು, ಈ ಕುರಿತು ಅಲ್ಲಿ ಚರ್ಚಿಸಲಾಗುವುದು. ಅರಿಶಿನ ಬೆಳೆಯ ಉತ್ಪಾದನಾ ವೆಚ್ಚ ಪರಿಗಣಿಸಿ ನ್ಯಾಯಯುತವಾದ ಬೆಂಬಲ ಬೆಲೆ ಘೋಷಿಸಬೇಕು. ಜ್ಯೋತಿ ಬತ್ತ ಖರೀದಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರಚಾರಕ್ಕಾಗಿ ಕೃಷಿ ಬಜೆಟ್ ಮಂಡಿಸುವುದು ಬೇಡ. ರೈತರಿಗೆ ಉಪಯುಕ್ತವಾಗುವ ಬಜೆಟ್ ಮಂಡಿಸಿ ಎಂದು ಆಗ್ರಹಿಸಿದರು.ಬರಗಾಲ, ಅತಿವೃಷ್ಟಿ, ಬೆಂಕಿ ಆಕಸ್ಮಿಕ, ಕಾಡು ಪ್ರಾಣಿಗಳ ದಾಳಿಯಿಂದ ಪದೇ ಪದೇ ರೈತರ ಬೆಳೆಗಳು ನಾಶವಾಗುತ್ತಿವೆ. ಅಂಥ ಸಂದರ್ಭದಲ್ಲಿ ರೈತರಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರ ಸಾಲವನ್ನು ಮನ್ನಾ ಮಾಡಬೇಕು. ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ `ರೈತರ ಸಂಕಷ್ಟ ನಿಧಿ~ ಸ್ಥಾಪಿಸಿ ದೇಶದ ಆಹಾರ ಭದ್ರತೆಗೆ ದಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.ಜಿಲ್ಲಾ ಘಟಕದ ಅಧ್ಯಕ್ಷ ಕೊಡನಹಳ್ಳಿ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಸೋಮಶೇಖರ್, ಚಿಕ್ಕಲಿಂಗಯ್ಯ, ಸಿ.ಎಂ.ನಾಗರಾಜು, ಬಸವರಾಜು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.