ರಾಜ್ಯ ಹೆದ್ದಾರಿ ತಡೆ: ಪೊಲೀಸರಿಂದ ಲಘು ಲಾಠಿ ಪ್ರಹಾರ

7

ರಾಜ್ಯ ಹೆದ್ದಾರಿ ತಡೆ: ಪೊಲೀಸರಿಂದ ಲಘು ಲಾಠಿ ಪ್ರಹಾರ

Published:
Updated:
ರಾಜ್ಯ ಹೆದ್ದಾರಿ ತಡೆ: ಪೊಲೀಸರಿಂದ ಲಘು ಲಾಠಿ ಪ್ರಹಾರ

ಕೆಂಭಾವಿ: ಸರ್ಕಾರಿ ಪ್ರೌಢಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವುದನ್ನು ವಿರೋಧಿಸಿ ಸಮೀಪದ ಮಲ್ಲಾ ಬಿ. ಗ್ರಾಮದಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.ಮಲ್ಲಾ ಬಿ. ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಅದೇ ಗ್ರಾಮದ ಹೊವಲಯದ ಕೆಂಭಾವಿ ಕ್ರಾಸ್ ಬಳಿ ನಿರ್ಮಿಸಿದ ನೂತನ ಕಟ್ಟಡಕ್ಕೆ ಮುಖ್ಯಾಧ್ಯಾಪಕರು ಶುಕ್ರವಾರ ಬೆಳಿಗ್ಗೆ ಸ್ಥಳಾಂತರ ಮಾಡಿದರು. ಇದರಿಂದ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು, ನೂತನ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ರಾಜ್ಯ ಹೆದ್ದಾರಿ  ಬಂದ್ ಮಾಡಲು ನಿರ್ಧರಿಸಿದರು. ರಸ್ತೆಗೆ ಕಲ್ಲು-ಮುಳ್ಳುಗಳನ್ನು ಹಾಕಿ ಟಾಯರ್‌ಗಳಿಗೆ ಬೆಂಕಿ ಹಚ್ಚಿ ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತೆರಳಿದಾಗ ಕಲ್ಲು ತೂರಾಟ ಪ್ರಾರಂಭವಾದಾಗ, ಪ್ರೊಬೇಶನರಿ ಸಬ್ ಇನ್ಸ್‌ಪೆಕ್ಟರ್ ಬಸವರಾಜ ಬೀಸನಕೊಪ್ಪ ಅವರಿಗೆ ಕಲ್ಲೇಟು ಬಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಪೊಲೀಸರು ಜನರನ್ನು ನಿಯಂತ್ರಿಸಲು ಪೊಲೀಸರು ಲಾಟಿ ಪ್ರಹಾರ ಮಾಡಬೇಕಾಯಿತು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ ತಿಳಿಸಿದರು.ಲಾಠಿ ಪ್ರಹಾರ ನಡೆದರೂ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದರು. ಶಾಲೆಯನ್ನು ಸ್ಥಳಾಂತರಿಸಲು ಬಿಡುವುದಿಲ್ಲ. ಕಳೆದ 30 ವರ್ಷದಿಂದ ಇಲ್ಲಿಯೇ ಶಾಲೆ ನಡೆಯುತ್ತಿದೆ.

 

ಇತ್ತೀಚೆಗೆ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಶಾಲೆಯ ಸಮಸ್ಯೆ ಬಗ್ಗೆ ತಿಳಿಸಲಾಗಿತ್ತು. ಶಾಲೆಯನ್ನು ಈ ಶೈಕ್ಷಣಿಕ ವರ್ಷ ಮುಗಿಯುವವರೆಗೂ ಇಲ್ಲಿಯೇ ಮುಂದುವರಿಸುವುದಾಗಿ ಭರವಸೆಯನ್ನೂ ನೀಡಿದ್ದರು. ಆದರೂ ಶಾಲೆಯನ್ನು ಸ್ಥಳಾಂತರಿಸುತ್ತಿರುವುದು ಸರಿಯಲ್ಲ. ಹದನೂರು ಗ್ರಾಮಸ್ಥರಿಗೆ ಬೇಕಾದರೆ ಮತ್ತೊಂದು ಶಾಲೆ ಕೊಡಿ ಎಂದು ಪಟ್ಟು ಹಿಡಿದರು.ಪೊಲೀಸರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಮನಬಂದಂತೆ ವಿದ್ಯಾರ್ಥಿಗಳು ಮತ್ತು ಮಹಿಳೆಯರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಮುಂದುವರಿಸಿದರು. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು.ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಎಸ್.ಡಿ. ಗಣಾಚಾರಿ, ಡಿಡಿಪಿಐ ಅವರು ಈ ಹಿಂದೆ ನೀಡಿದ್ದ ಎಲ್ಲ ಆದೇಶಗಳನ್ನು ಹಿಂದಕ್ಕೆ ಪಡೆದಿದ್ದಾರೆ. ಈ ಬಗ್ಗೆ ಆದೇಶ ಪತ್ರ ನೀಡಿದ್ದು, ಯಥಾಸ್ಥಿತಿ ಕಾಯುವಂತೆ ಆದೇಶಿಸಿದ್ದಾರೆ ಎಂದು ತಿಳಿಸಿ, ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ಸಂಚಾರ ಆರಂಭಿಸಿದರು.ಮರೆಪ್ಪ ಗೌಂಡಿ, ನಿಲಕಂಟರಾಯಗೌಡ, ಪರಶುರಾಮಧೊರಿ, ಶರಣಪ್ಪ ಬಿರಾದಾರ, ಮಲ್ಲನಗೌಡ ತಾಳೆವಾಡಿ, ಕಾಶಿಬಾಯಿ ಸಿದ್ದಮ್ಮ, ಶಾಂತಮ್ಮ ಇದ್ದರು. ಸಿಪಿಐ ಸತ್ಯನಾರಾಯಣ ನೇತತ್ವದಲ್ಲಿ ಮೂಜನ ಸಿಪಿಐ, ಮೂವರು ಪಿಎಸ್‌ಐ, ಎರಡು ಕೆಎಸ್‌ಆಪಿ ತುಕಡಿ, ತಾಲ್ಲೂಕಿನ ಪೋಲಿಸರು ಪೊಲಿಸ ಬಂದೋಬಸ್ತ ಮಾಡಲಾಗಿದ್ದು, ಗ್ರಾಮದಲ್ಲಿ ಹೆಚ್ಚವರಿ ಪೋಲಿಸಿ ಸಿಬ್ಬಂದಿ ಸ್ಥಳದಲ್ಲಿ ಮುಕ್ಕಾಮ್ ಹುಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry