ರಾಜ್ಯ ಹೆದ್ದಾರಿ: ಪ್ರಯಾಣಿಕರಿಗೆ ಹೆಮ್ಮಾರಿ

7

ರಾಜ್ಯ ಹೆದ್ದಾರಿ: ಪ್ರಯಾಣಿಕರಿಗೆ ಹೆಮ್ಮಾರಿ

Published:
Updated:

 ಯಳಂದೂರು: ರಸ್ತೆ ತುಂಬ ದೊಡ್ಡ ದೊಡ್ಡ ಹಳ್ಳಗಳು, ಮಳೆಗಾಲದಲ್ಲಿ ಚಕ್ರಗಳು ಹಳ್ಳಕ್ಕೆ ಇಳಿದರೆ ಕೆಸರಿನ ಸ್ನಾನ, ವರ್ಷಗಳಿಂದಲೂ ಡಾಂಬರ್ ಕಾಣದೆ  ನಿಂತಿರುವ ರಸ್ತೆ, ಮೇಲೆದ್ದ ಕಲ್ಲುಗಳು, ಅಕ್ಕಪಕ್ಕ ಬೆಳೆದಿರುವ ಮುಳ್ಳಿನ ಪೊದೆಗಳು- ಇವು ಯಳಂದೂರಿನಿಂದ ಹೊಂಗನೂರು ಮಾರ್ಗವಾಗಿ ಬಂಡೀಪುರಕ್ಕೆ ಸಂಪರ್ಕ  ಕಲ್ಪಿಸುವ ರಾಜ್ಯ ಹೆದ್ದಾರಿಯ ದುಃಸ್ಥಿತಿ.ಇಲ್ಲಿ ವಾಹನದಲ್ಲಿ ಪ್ರಯಾಣಿಸುವವರು ಜೀವವನ್ನು ಕೈಯಲ್ಲಿ ಹಿಡಿದುಕೊಳ್ಳಬೇಕು. ರಾತ್ರಿ ವೇಳೆ ವಾಹನ ಚಲಿಸುವುದು ಇಲ್ಲಿನ ಸವಾರರಿಗೆ ಸವಾಲೇ ಸರಿ. 2005 ರಲ್ಲಿ ಈ ಹೆದ್ದಾರಿಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು.ಅದರಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ 2005 ರಲ್ಲೇ ರಸ್ತೆ ಗುಂಡಿ ಮುಚ್ಚಲು, ಅಂಚು ದುರಸ್ತಿ, ತೋಡು ನೀರು ಕೊಳವೆಗೆ ಸೇತುವೆಗಳ ದುರಸ್ತಿಗೆ ಟೆಂಡರ್ ಕೊಡ ಕರೆಯಲಾಗಿದೆ. ಆದರೆ ಇಲ್ಲಿ ಯಾವ ಕಾಮಗಾರಿಗಳೂ ನಡೆದಿಲ್ಲ ಎಂಬುದು ಈ ಭಾಗದ ಸಾರ್ವಜನಿಕರ ದೂರು.  ಈ ಪ್ರಕ್ರಿಯೆ ನಡೆದ ಮೇಲೆ ಹಲವು ಶಾಸಕರು, ಸಂಸದರೂ ಆಗಿ ಹೋಗಿದ್ದರೂ ಇದರ ಅಭಿವೃದ್ಧಿಯತ್ತ ಯಾರೂ ಗಮನಹರಿಸಿಲ್ಲ. ವೈ.ಕೆ.ಮೋಳೆ, ಇರಸವಾಡಿ, ಚಾಮರಾಜನಗರ ತಾಲ್ಲೂಕಿನ ಮಸಣಾಪುರ, ಹೊಂಗನೂರು ಹಾಗೂ ಕಾಗಲವಾಡಿ ಮಾರ್ಗದವರೆಗೂ ಮಧ್ಯ ಮಧ್ಯ ಮಾತ್ರ ರಸ್ತೆಗೆ ಟಾರಿನ ತೇಪೆಯನ್ನು ಹಾಕಲಾಗಿದೆ.ಆದರೆ ಸಂಪೂರ್ಣ ರಸ್ತೆ ದುರಸ್ತಿ ನಡೆದಿಲ್ಲ. ಕೆಲವು ಕಡೆ ಮಣ್ಣನ್ನು ಸುರಿಯಲಾಗಿದೆ. ಸುರಿದಿರುವ ಮಣ್ಣು ದೊಡ್ಡ ದೊಡ್ಡ ಹಳ್ಳಗಳಾಗಿ ಮಾರ್ಪಟ್ಟಿವೆ. ಮಳೆಗಾಲ ಬಂತೆಂದರೆ ಇದರೊಳಗೆ ನೀರು ತುಂಬಿಕೊಳ್ಳುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಸಾಗುವುದೇ ತ್ರಾಸದಾಯಕವಾಗಿದೆ ಎಂದು ಇರಸವಾಡಿ ಗ್ರಾಮದ ಮಹೇಶ್, ವೆಂಕಟೇಶ್ ಪ್ರಜಾವಾಣಿ~ಗೆ ತಿಳಿಸಿದರು. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಮಳೆ ಸುರಿಯುತ್ತಿದೆ. ರಸ್ತೆ ತುಂಬ ಹಳ್ಳಕೊಳ್ಳಗಳು ಬಿದ್ದಿರುವುದರಿಂದ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿದೆ. ದ್ವಿಚಕ್ರ ವಾಹನ ಸವಾರರಿಗಂತೂ ಇಲ್ಲಿ ಸಾಗುವುದೇ ಸವಾಲು.

  ಈ ವ್ಯಾಪ್ತಿಯ ಬಹುತೇಕ ಗ್ರಾಮಗಳ ಜನರು ನಿತ್ಯ ವಹಿವಾಟಿಗೆ ಯಳಂದೂರು ಹಾಗೂ ಚಾಮರಾಜನಗರವನ್ನೇ ಅವಲಂಬಿಸಿದ್ದಾರೆ. ರಾತ್ರಿ ಈ ಭಾಗದಲ್ಲಿ ಬಸ್ಸುಗಳ ಸಂಚಾರ ಕಡಿಮೆ ಇದೆ.ಹಾಗಾಗಿ ದ್ವಿಚಕ್ರ ವಾಹನಗಳ ಸಂಚಾರ ಅಧಿಕವಾಗಿರುತ್ತದೆ. ಆದರೆ ರಸ್ತೆಯಲ್ಲಿ ದೊಡ್ಡ ದೊಡ್ಡ ಹಳ್ಳಗಳು ಇರುವುದರಿಂದ ರಾತ್ರಿ ವೇಳೆ ಅಪಘಾತಗಳೂ ಹೆಚ್ಚಾಗಿ ನಡೆಯುತ್ತದೆ. ರಸ್ತೆಗೆ ಮಣ್ಣು ಸುರಿದಿರುವುದರಿಂದ ಮಳೆಗಾಲದಲ್ಲಿ ವಾಹನಗಳ ಚಾಲನೆ ತುಂಬಾ ಅಪಾಯಕಾರಿ ಎಂಬುದಾಗಿ ದಾಸನಹುಂಡಿಯ ದಿವಾಕರ್ ದೂರುತ್ತಾರೆ.  ರಾಜ್ಯ ಹೆದ್ದಾರಿ ಘೋಷಣೆಯಾಗಿ 6 ವರ್ಷ ಕಳೆದರೂ ಇನ್ನೂ ಕೂಡ ಪ್ರಾಥಮಿಕ ಹಂತದ ಕಾಮಗಾರಿಗಳೂ ನಡೆದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry