ರಾಜ್ ಬದುಕು ಅನಾವರಣ

7

ರಾಜ್ ಬದುಕು ಅನಾವರಣ

Published:
Updated:
ರಾಜ್ ಬದುಕು ಅನಾವರಣ

ಕನ್ನಡ ಚಿತ್ರರಂಗದ ಮೇರುನಟ, ಅಭಿಮಾನಿಗಳ ದೇವರು ಡಾ.ರಾಜ್‌ಕುಮಾರ್ ಅವರ ಸ್ಮರಣೆ ನಗರದ ಹಲವೆಡೆ ವಿಶಿಷ್ಟ ರೀತಿಯಲ್ಲಿಯೇ ನಡೆಯುತ್ತಿದೆ.ಇದಕ್ಕೆ ಕಲಶವಿಟ್ಟಂತೆ ಖ್ಯಾತ ಛಾಯಾಗ್ರಾಹಕ, ಡಾ.ರಾಜ್‌ರ ಆತ್ಮೀಯ ಗೆಳೆಯರೂ ಆಗಿದ್ದ ಭವಾನಿ ಎನ್.ಲಕ್ಷ್ಮಿನಾರಾಯಣ ಅವರು ತೆಗೆದಿರುವ 110 ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಶುಕ್ರವಾರ ಆರಂಭವಾಗಿದೆ.ನಾವು ಕಾಣದ ರಾಜ್‌ಕುಮಾರ್ ಅವರ ಹಲವಾರು ಭಾವಭಂಗಿಗಳು, ಕ್ಯಾಮೆರಾದಾಚೆಯ ವರನಟನ ಬದುಕು ಕ್ಯಾಮೆರಾ ಕಣ್ಣಲ್ಲಿ ಸಮರ್ಥವಾಗಿ ಒಡಮೂಡಿದೆ. ಬೆರಳೆಣಿಕೆಯಲ್ಲಿ ಎಣಿಸಬಹುದಾದ ಕೆಲವೇ ಚಿತ್ರಗಳು ವರ್ಣದಲ್ಲಿದೆ. ಉಳಿದವು ಕಪ್ಪು-ಬಿಳುಪು ಚಿತ್ರಗಳೇ.ಮೇಕಪ್ ಮಾಡಿಸಿಕೊಳ್ಳುವಾಗ, ಶೂಟಿಂಗ್ ಮಧ್ಯೆ ಬಯಲಲ್ಲಿ ಕುಳಿತೇ ಊಟ ಮಾಡುವಾಗ, ಸಹ ಕಲಾವಿದರೊಂದಿಗೆ ಹರಟುತ್ತಿರುವಾಗ ಹೀಗೆ ಹಲವು ಚಿತ್ರಗಳನ್ನು ಪ್ರದರ್ಶಿಸಲಾಗಿದೆ.ಉದಯಕುಮಾರ್, ಆರತಿ, ಭಾರತಿ ವಿಷ್ಣುವರ್ಧನ್, ಟಿ.ಎನ್.ಬಾಲಕೃಷ್ಣ, ನರಸಿಂಹರಾಜು ಸೇರಿದಂತೆ ಹಲವಾರು ಕಲಾವಿದರೊಂದಿಗೆ ತೆಗೆಸಿಕೊಂಡ ಚಿತ್ರಗಳಲ್ಲದೇ ಪತ್ನಿ ಪಾರ್ವತಮ್ಮ  ಹಾಗೂ  ತಾಯಿಯೊಂದಿಗೆ ನಿಂತಿರುವ ಅಪರೂಪದ ಎರಡು ಚಿತ್ರಗಳಿವೆ. ರಾಜ್ ಅವರ ಸಾಮಾಜಿಕ ಕಾಳಜಿಯನ್ನು ಬಿಂಬಿಸಿದ ಸಂದರ್ಭಗಳಾದ ಖ್ಯಾತ ಗೋಕಾಕ್ ಚಳವಳಿ, ಪೊಲೀಸ್ ಕಲ್ಯಾಣ ನಿಧಿಗೆ ಹಣ ಸಂಗ್ರಹಣೆ ಕಾರ್ಯಕ್ರಮ ಸೇರಿದಂತೆ ಅಂದಿನ ಸರ್ಕಾರದ ಸಚಿವರೊಂದಿಗೆ ಇರುವಾಗ ಸೆರೆಹಿಡಿಯಲಾದ ಅವಿಸ್ಮರಣೀಯ ಚಿತ್ರಗಳೂ ಇದೆ.ಲಕ್ಷ್ಮಿನಾರಾಯಣ್ ಅವರ ಕ್ಯಾಮೆರಾದೊಳಗೆ ಬಂದಿಯಾಗಿದ್ದಷ್ಟೇ ಅಲ್ಲದೇ, ರಾಜ್ ತಾವೂ ವೃತ್ತಿಪರ ಕ್ಯಾಮೆರಾಮನ್‌ಗೆ ಕಡಿಮೆ ಇಲ್ಲ ಎಂದು ತೋರಿಸಲೋ ಎಂಬಂತೆ ಸಹ ಕಲಾವಿದರ ಚಿತ್ರಗಳನ್ನೂ ಸೆರೆಹಿಡಿದಿದ್ದನ್ನೂ ಇಲ್ಲಿ ಕಾಣಬಹುದು.ಸ್ಥಳ: ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಬೆಳಿಗ್ಗೆ 10ರಿಂದ ಸಂಜೆ 7. ಪ್ರದರ್ಶನ ಭಾನುವಾರ ಮುಕ್ತಾಯ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry