ಮಂಗಳವಾರ, ನವೆಂಬರ್ 12, 2019
19 °C
ಸಿನಿಮಾ, ವೈಯಕ್ತಿಕ ಜೀವನದ 200 ಚಿತ್ರಗಳ ಪ್ರದರ್ಶನ

ರಾಜ್ ಬದುಕು ಅನಾವರಣ...

Published:
Updated:

ಬೆಂಗಳೂರು: ಡಾ.ರಾಜ್‌ಕುಮಾರ್ ಅಭಿಮಾನಿಗಳಿಗೆ ಅವರ ವೈಯಕ್ತಿಕ ಬದುಕಿನ ಅರಿವು ಮತ್ತು ಅವರ ಸಿನಿಮಾ ಬದುಕಿನ ಹಿಂದಿರುವ ವೈಯಕ್ತಿಕ ಬದುಕನ್ನು ಸಾರುವಂತಹ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಬೆಂಗಳೂರಿನಲ್ಲಿ ನಡೆದಿದೆ. ಬಿಗ್ ಎಫ್‌ಎಂ 92.7 ಮತ್ತು ಲಯನ್ಸ್ ಕ್ಲಬ್ ಈ ಅಪರೂಪದ ಪ್ರದರ್ಶನ `ರಾಜ್ ಉತ್ಸವ' ದ ಬಸ್ ಯಾತ್ರೆಯನ್ನು ಆಯೋಜಿಸಿವೆ.ಅಪರೂಪದ ಚಿತ್ರಗಳಲ್ಲಿ ರಾಜ್‌ರ ತಂದೆ-ತಾಯಿ ಚಿತ್ರ, ಯೋಗಾಸನದ ಚಿತ್ರ, ಶಿವಲಿಂಗವನ್ನು ಅಪ್ಪಿ ಹಿಡಿದ ಚಿತ್ರ, ಪಾರ್ವತಮ್ಮ ಅವರ ಜೊತೆಗಿನ ಮದುವೆಯ ಚಿತ್ರ, ಪಾರ್ವತಮ್ಮ ಅವರ ಜತೆಗಿನ ಚಿತ್ರ, ಪುನೀತ್ ಅವರನ್ನು ಕೂಸು ಮೂಟೆ ಮಾಡಿ ಹೊತ್ತಿರುವ ಚಿತ್ರ, ರಾಜ್‌ಕುಮಾರ್ ಅವರ ಸ್ನಿಗ್ಧ ನಗುವಿನ ಚಿತ್ರ, ನಟನೆ ಮಾಡಿದ ಸನಾದಿ ಅಪ್ಪಣ್ಣ ಅನೇಕ ಚಲನಚಿತ್ರಗಳ ಚಿತ್ರಗಳು ಹೀಗೆ ಡಾ.ರಾಜ್ ಅವರ ವ್ಯಕ್ತಿತ್ವವನ್ನು ಸಾರುತ್ತಿರುವ 200 ಚಿತ್ರಗಳು ಪ್ರದರ್ಶನಕ್ಕಿವೆ.ಈ ಕುರಿತು ಮಾತನಾಡಿದ ಲೇಖಕ ಪ್ರಕೃತಿ ಬನವಾಸಿ ಅವರು, `ಪುನೀತ್ ಮತ್ತು ನಾನು ರಚನೆ ಮಾಡಿರುವ `ವ್ಯಕ್ತಿತ್ವದ ಹಿಂದಿನ ವ್ಯಕ್ತಿ' ಪುಸ್ತಕಕ್ಕೆ ಡಾ.ರಾಜ್ ಅವರ ಅನೇಕ ಚಿತ್ರಗಳನ್ನು ಸಂಗ್ರಹ ಮಾಡಿದ್ದೆವು. ಅವುಗಳಲ್ಲಿ ಅತಿ ಅಪರೂಪವೆನಿಸಿದ ಚಿತ್ರಗಳನ್ನು ಇಲ್ಲಿ ಪ್ರದರ್ಶನ ಮಾಡಲಾಗಿದೆ' ಎಂದರು.`ಡಾ.ರಾಜ್ ಅವರ ಸಿನಿಮಾ ಬದುಕಿಗಿಂತ ಅವರ ವೈಯಕ್ತಿಕ ಬದುಕಿನ ಬಗ್ಗೆ ಜನರಿಗೆ ಹೆಚ್ಚಿಗೆ ತಿಳಿದಿಲ್ಲ. ಅವರ ಅಭಿಮಾನಿಗಳಿಗೆ ಡಾ. ರಾಜ್ ಅವರ ಬಗ್ಗೆ ತಿಳಿಸಲು ಈ ಚಿತ್ರ ಪ್ರದರ್ಶನ ಸಹಕಾರಿಯಾಗಲಿದೆ' ಎಂದರು.ಡಾ.ರಾಜ್ ಅವರ ಚಿತ್ರ ಪ್ರದರ್ಶನದ ಜತೆಗೆ ನೇತ್ರದಾನದ ಬಗೆಗೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನೇತ್ರದಾನದ ಜಾಗೃತಿ ಕುರಿತು ಮಾತನಾಡಿದ ಲಯನ್ಸ್ ಕ್ಲಬ್ ಬೆಂಗಳೂರು ಸೋಮೇಶ್ವರಪುರ ಅಧ್ಯಕ್ಷ ಮಹೇಶ್, `ಇದುವರೆಗೂ ಈ ಪ್ರದರ್ಶನ ಆರಂಭವಾಗಿ ಎರಡು ದಿನಗಳಾಗಿವೆ. ಈ ಎರಡು ದಿನಗಳಲ್ಲಿ ಸುಮಾರು 50 ಜನರು ತಮ್ಮ ಹೆಸರನ್ನು ನೇತ್ರದಾನಕ್ಕೆ ನೋಂದಣಿ ಮಾಡಿದ್ದಾರೆ. ಜನರಲ್ಲಿ ನೇತ್ರದಾನದ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ' ಎಂದರು.`ಕೆಲವು ಕಡೆಗಳಲ್ಲಿ ನೇತ್ರದಾನದ ಬಗ್ಗೆ ಮಾತನಾಡಲು ಶುರು ಮಾಡಿದರೆ ಜನರು ಹೊರಟು ಹೋಗುತ್ತಾರೆ. ಅಲ್ಲದೇ, ಇಲ್ಲಿ ನೋಂದಣಿ ಮಾಡಿಸುವವರು ತಮ್ಮ ಮನೆಯಲ್ಲಿ ಹೇಳಬೇಕು. ಆಗ ಸಮಸ್ಯೆಯಾಗುವುದಿಲ್ಲ. ಕೊನೆಗೆ ಅಲ್ಲಿ ಹೋದಾಗ ಮನೆಯವರು ಒಪ್ಪುವುದಿಲ್ಲ. ಇಂತಹ ಅನೇಕ ಸಮಸ್ಯೆಗಳು ಅನೇಕ ಬಾರಿ ಆಗಿವೆ. ಆದ್ದರಿಂದ ಈ ಕುರಿತು ಜನರಲ್ಲಿ ಅಗತ್ಯವಾದ ಅರಿವು ಮೂಡಿಸಬೇಕು' ಎಂದು ಹೇಳಿದರು. ಡಾ.ರಾಜ್ ಉತ್ಸವದ ಬಸ್ ಚಿತ್ರ ಪ್ರದರ್ಶನವು ಏ.24 ರವರೆಗೆ ಬೆಂಗಳೂರಿನ ಅನೇಕ ಕಡೆ ಸಂಚರಿಸಲಿದೆ.

ಪ್ರತಿಕ್ರಿಯಿಸಿ (+)