ಬುಧವಾರ, ನವೆಂಬರ್ 13, 2019
23 °C

ರಾಜ್ ಮಾದರಿ!

Published:
Updated:

ಮದುವೆ ಮನೆಯ ಸಡಗರದಲ್ಲಿ ಕನ್ನಡ ಬಾರದ ಹುಡುಗಿಯ ಪರಿಚಯವಾಗುತ್ತದೆ. ಅವಳ ಮೌನ ಭಾಷೆಗೆ ಮನಸೋತು ನಾಯಕ ಪ್ರೇಮಿಸುತ್ತಾನೆ.ಅವಳಿಗೆ ಕನ್ನಡವನ್ನೂ ಕಲಿಸುತ್ತಾನೆ. ಅವಳು ಕನ್ನಡದಲ್ಲಿ ಪ್ರೇಮಪತ್ರ ಬರೆಯುವಷ್ಟು ಪರಿಣತೆಯಾಗುತ್ತಾಳೆ. ಆಗೊಂದು ದಿನ ನಾಯಕನಿಗೆ `ನೀನೂ ನನ್ನ ಗೆಳೆಯರಲ್ಲಿ ಒಬ್ಬ ಅಷ್ಟೇ' ಎಂದು ಹೇಳಿ ಹೊರಟೇ ಹೋಗುತ್ತಾಳೆ. ನಾಯಕನ ಕಣ್ಣು ಹನಿಗೂಡುತ್ತದೆ.ಕೋಪ ಬಂದರೂ ಏನೂ ಮಾಡದ ಅಸಹಾಯಕತೆ ಅವನದಾಗಿರುತ್ತದೆ. ಅನಾರೋಗ್ಯ ಪೀಡಿತ ತಾಯಿ, ವಯಸ್ಸಾದ ತಂದೆಯಲ್ಲಿ ತನ್ನ ನೋವನ್ನು ಹೇಳಿಕೊಳ್ಳಲೂ ಆಗದೇ, ನುಂಗಲೂ ಆಗದೇ ಒದ್ದಾಡುತ್ತಾನೆ.ನೋವಾದಾಗ ಅವಳನ್ನು ಮೆಚ್ಚಿಸಲು ಕಲಿತ ಮೃದಂಗವನ್ನು ಮನಬಂದಂತೆ ನುಡಿಸಿ ಸೊರಗುತ್ತಿರುತ್ತಾನೆ. ಅವನೆಂದೂ ದುಶ್ಚಟಗಳತ್ತ ಮುಖ ಮಾಡುವುದೇ ಇಲ್ಲ. ಸಿಗರೇಟು ಹೊಗೆಯನ್ನು ಕ್ಯಾಮೆರಾ ಮುಖಕ್ಕೆ ಉಗುಳುವುದಿಲ್ಲ, ಕುಡಿದು ತೂರಾಡಿ ಹಾಡು ಹೇಳುವುದಿಲ್ಲ. ಅವನು ಮತ್ಯಾರೂ ಅಲ್ಲ, `ಚಲಿಸುವ ಮೋಡಗಳು' ಚಿತ್ರದ ನಾಯಕ ಮೋಹನ್. ಆ ಪಾತ್ರ ನಿರ್ವಹಿಸಿದ್ದು ಮೇರು ನಟ ಡಾ.ರಾಜ್‌ಕುಮಾರ್.ಹುಡುಗಿ ಕೈಕೊಟ್ಟ ತಕ್ಷಣ ಅಮಲಿನ ಬಾಟಲಿಗೆ ಕೈ ತಾಕಿಸುವ ನಾಯಕರಿಂದ ತುಂಬಿ ತುಳುಕುವ ಕನ್ನಡ ಚಿತ್ರರಂಗದಲ್ಲಿ ಇಂಥ ಭಿನ್ನತೆಯಿಂದಲೇ ರಾಜ್ ನೆನಪಾಗುತ್ತಾರೆ. ಸಿನಿಮಾಗಳಲ್ಲಿ ಕೆಟ್ಟ ಚಟಗಳಿಗೆ ದಾಸರಾಗುವ ನಾಯಕರನ್ನು ಆರಾಧಿಸುವ ಅಭಿಮಾನಿಗಳ ದೊಡ್ಡ ವರ್ಗ ಇದೆ. ಅವರು ನಾಯಕರ ತೆರೆಯ ಮೇಲಿನ/ ತೆರೆಯ ಹಿಂದಿನ ನಡವಳಿಕೆ ಗಮನಿಸಿ ತಮ್ಮ ಚಟಗಳಿಗೆ ಸಮರ್ಥನೆ ಕಂಡುಕೊಳ್ಳುತ್ತಿರುತ್ತಾರೆ. ಅದರಂತೆ ಸಿನಿಮಾದಲ್ಲಿ ಕುಡಿಯುವ, ಸಿಗರೇಟು ಸೇದುವ, ಗುಟ್ಕಾ ಜಗಿಯುವ ನಾಯಕರು ಅಂಥ `ಮ್ಯಾನರಿಸಂ' ಪಾತ್ರಕ್ಕೆ ಅಗತ್ಯ ಎಂದು ಹೇಳುತ್ತಲೇ ಸಾಮಾಜಿಕ ಜವಾಬ್ದಾರಿ ಮರೆಯುತ್ತಿರುತ್ತಾರೆ. ಅದರಿಂದ ಕೆಟ್ಟ ಹವ್ಯಾಸಗಳು ಪ್ರಚಾರ ಪಡೆಯುತ್ತವೆ. ಅಂಥ ಜನಪ್ರಿಯ ನಟರು ರಾಜ್ ಅವರ `ಚಟ'ರಹಿತ ಪಾತ್ರಗಳನ್ನು ಗಮನಿಸಬೇಕು.ಕೆಟ್ಟ ಚಟ ಪ್ರದರ್ಶಿಸದ ಪಾತ್ರಗಳನ್ನೇ ಒಪ್ಪುತ್ತಿದ್ದ ರಾಜ್ ಅವರ ಬದ್ಧತೆ ಒಂದು ಚಿತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. `ಸಾಕ್ಷಾತ್ಕಾರ' ಚಿತ್ರದಲ್ಲಿ ಆಸೆ ಈಡೇರದೇ ಹೋದರೂ, `ಕಸ್ತೂರಿ ನಿವಾಸ'ದಲ್ಲಿ ತನ್ನ ಸಕಲವನ್ನು ಕಳೆದುಕೊಂಡರೂ, `ನಂದಾದೀಪ'ದಲ್ಲಿ ನಾಯಕಿ ಬೇರೆ ಮದುವೆಯಾದರೂ, `ನಾಂದಿ'ಯಲ್ಲಿ ಹೆಂಡತಿಯನ್ನು ಕಳೆದುಕೊಂಡರೂ, `ಎರಡು ಕನಸು' ಚಿತ್ರದಲ್ಲಿ ಕನಸು ನುಚ್ಚುನೂರಾದರೂ, `ಅನುರಾಗ ಅರಳಿತು' ಚಿತ್ರದಲ್ಲಿ ಸೇಡು ಸಾಧಿಸುವ ಹೆಂಡತಿ ಸಿಕ್ಕರೂ, `ನಾ ನಿನ್ನ ಮರೆಯಲಾರೆ' ಚಿತ್ರದಲ್ಲಿ ಪ್ರಿಯತಮೆ ದೂರವಾದರೂ ನಾಯಕ ಎಲ್ಲಿಯೂ ಹಾದಿ ತಪ್ಪುವುದಿಲ್ಲ. ತನ್ನ ನೋವುಗಳನ್ನು ನುಂಗುತ್ತಾ, ಕಣ್ಣೀರು ಹರಿಸುತ್ತಾ, ಪರರಿಗೆ ಒಳಿತು ಮಾಡುತ್ತಾ, ಹಾಡುಗಳಲ್ಲಿ ನೋವು ಮರೆಯುತ್ತಾ ಅತಿರೇಕದ ಹಾದಿ ತುಳಿಯದಂಥ ಪಾತ್ರಗಳೇ ಅವರವು.ಅಂಥ ಸಂದರ್ಭದ ಅತೀವ ದುಃಖ ತುಂಬಿದ ಅವರ ಚಿತ್ರದ ಹಾಡುಗಳು ಹೈಲೈಟ್. `ಆಡಿಸಿದಾತ ಬೇಸರ ಮೂಡಿ..', `ಸೋಲೇ ಗೆಲುವೆಂದು..',  `ನಗಲಾರದೇ.. ಅಳಲಾರದೇ..', `ಅನುರಾಗ ಏನಾಯ್ತು?', `ಕಲ್ಲಿನ ವೀಣೆಯ ಮೀಟಿದರೇನು..' ಹಾಡುಗಳು ಇಂದಿಗೂ ದುಃಖತಪ್ತ ಮನಸ್ಸುಗಳಿಗೆ ಗುನುಗಲು ಸಿಗುತ್ತವೆ.ಆರಂಭದ ದಿನಗಳಿಂದ ಕೊನೆಯ ದಿನಗಳವರೆಗೂ ಜನರನ್ನು ಹಾದಿ ತಪ್ಪಿಸದಂಥ ಬದ್ಧತೆಗೆ ಒಗ್ಗಿಹೋಗಿದ್ದವರು ರಾಜ್. ಅದಕ್ಕೆ ತಕ್ಕಂತೆ ತಮ್ಮ ಬದ್ಧತೆಯೇ ಕತೆಯಾಗಿ ಬಂದ `ಜೀವನಚೈತ್ರ' ಚಿತ್ರಕ್ಕೆ ಜೀವ ತುಂಬಿದರು.ಹಂಸಲೇಖ ಅವರ ಲೇಖನಿಯಿಂದ ಮೂಡಿಬಂದ ಸಾಹಿತ್ಯಕ್ಕೆ ರಾಜ್ ದನಿ ಜೀವ ತುಂಬಿದ ಅಪರೂಪದ ಒಂದು ಹಾಡಿದೆ. ದುಶ್ಚಟಕ್ಕೆ ತುತ್ತಾದ ನಾಯಕಿಯನ್ನು ಸರಿದಾರಿಗೆ ತರಲು ನಾಯಕ ಹೇಳುವ ಆ ಹಾಡು ಸಾಯಲು ಹೊರಟವರಿಗೆ, ಬದುಕಿನಲ್ಲಿ ಭರವಸೆ ಕಳೆದುಕೊಂಡವರಿಗೆ ಸ್ಫೂರ್ತಿ ತುಂಬುವಂತಿದೆ. ಅದೇ `ಆಕಸ್ಮಿಕ' ಚಿತ್ರದ `ಬಾಳುವಂಥ ಹೂವೇ ಬಾಡುವಾಸೆ ಏಕೆ..?'.ಜನರಿಗೆ ಸೆಲೆಬ್ರಿಟಿಗಳ ವೈಯಕ್ತಿಕ ಬದುಕಿನ ಬಗ್ಗೆ ಕುತೂಹಲ ಜಾಸ್ತಿ. ಅವರು ಅದನ್ನು ಗಮನಿಸುತ್ತಾ, ಸಿನಿಮಾದ ಪಾತ್ರದೊಂದಿಗೆ ಅದನ್ನು ಹೋಲಿಸುತ್ತಾ ಇರುತ್ತಾರೆ. ಕೆಲವರಂತೂ ತಮ್ಮ ನೆಚ್ಚಿನ ನಟ ಅಂಥ ಕೆಲಸ ಮಾಡಿದ ಮೇಲೆ ತಮ್ಮದೇನು ಮಹಾ! ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ. ಅಂಥ ಪರಿಣಾಮಗಳನ್ನು ಅರಿತಂತೆ ಬದುಕಿದ ರಾಜ್ ತಮ್ಮ ವೈಯಕ್ತಿಕ ಬದುಕಿನಲ್ಲಿಯೂ ಬಹಿರಂಗವಾಗಿ ದುಶ್ಚಟಗಳನ್ನು ಪ್ರದರ್ಶಿಸಲಿಲ್ಲ. ತಮ್ಮ ಚಿತ್ರಗಳಲ್ಲಿಯೂ ಅಂಥ ದೃಶ್ಯಗಳಿಗೆ ಮಹತ್ವ ನೀಡಲಿಲ್ಲ.ಕುಡಿದು ತೂರಾಡುವ ಹಾಡು ಮತ್ತು ಸಿನಿಮಾಗಳಿಂದಲೇ ಯಶಸ್ವಿಯಾದ ನಾಯಕರು ರಾಜ್ ಅವರ ಸಾಮಾಜಿಕ ಬದ್ಧತೆಯನ್ನು ಗಮನಿಸಬೇಕು. ಕುಡುಕ ಪಾತ್ರಗಳಿಂದ ಉಡಾಫೆಯ ಡೈಲಾಗ್‌ಗಳನ್ನು ಹೇಳಿಸಿ ಪ್ರೇಕ್ಷಕರನ್ನು ರಂಜಿಸುವ ಕಾಲ ಇದು. ಕುಡಿದು ಪಾತ್ರ ನಿರ್ವಹಿಸುವುದರಿಂದಲೇ ಮಾರುಕಟ್ಟೆ ಸೃಷ್ಟಿಸಿಕೊಂಡ ಪೋಷಕ ನಟರಿದ್ದಾರೆ. ಇಂಥ ಕಾಲದಲ್ಲಿ ರಾಜ್ ಚಿತ್ರಗಳು, ಪಾತ್ರಗಳು ಸಹೃದಯರಿಗೆ ಹತ್ತಿರವಾಗುತ್ತವೆ.

 

ಪ್ರತಿಕ್ರಿಯಿಸಿ (+)