ಗುರುವಾರ , ಫೆಬ್ರವರಿ 25, 2021
20 °C

ರಾಜ್ ಹೆಸರೇ ಇವರ ಬದುಕು

ರಮೇಶ ಕೆ. Updated:

ಅಕ್ಷರ ಗಾತ್ರ : | |

ರಾಜ್ ಹೆಸರೇ ಇವರ ಬದುಕು

ಉದ್ಯೋಗವಿಲ್ಲದೆ ಹಳ್ಳಿಯಲ್ಲಿ ಅಲೆದಾಡುತ್ತಿದ್ದ ಆನಂದ್ ಕೆಲಸಕ್ಕಾಗಿ ಬೆಂಗಳೂರಿಗೆ ಬಂದರು. ಎರಡು ಮೂರು ವರ್ಷ ಸಣ್ಣಪುಟ್ಟ ಕೆಲಸ ನಿರ್ವಹಿಸಿದರು. ಆದರೆ ಆನಂದ್‌ಗೆ ಆ ವೃತ್ತಿಯಲ್ಲಿ ತೃಪ್ತಿ ಸಿಗಲಿಲ್ಲ. ಕೊನೆಗೆ ಕಂಪ್ಯೂಟರ್ ಕಲಿತು ರೇಡಿಯಂ ಕಟಿಂಗ್ ವಿನ್ಯಾಸ ಮಾಡುವ ಕಲೆ ಕರಗತಮಾಡಿಕೊಂಡು, ವಾಹನಗಳಿಗೆ ನಂಬರ್ ಹಾಕುವ ಸ್ವಂತ ಮಳಿಗೆಯನ್ನು ಆರಂಭಿಸಿದರು. ಆ ಮಳಿಗೆ ಹೆಚ್ಚು ಜನಪ್ರಿಯವಾದದ್ದು ಅದರ ಹೆಸರಿನಿಂದ. ಈಗ ಅದೇ ಹೆಸರಿನಲ್ಲಿ ಎರಡು ಆರ್ಟ್ಸ್ ಮಳಿಗೆಗಳನ್ನು ಆರಂಭಿಸಿದ್ದಾರೆ. ಆನಂದ್ ಯಶಸ್ಸಿಗೆ ಕಾರಣವಾದ ಆ ಹೆಸರು ವರನಟ ಡಾ.ರಾಜ್‌ಕುಮಾರ್.

ಆನಂದ್ ಅಂಗಡಿಗೆ ಇಟ್ಟ ಹೆಸರು `ವರನಟ ಆರ್ಟ್ಸ್~. ಆ ಹೆಸರೇ ಇಂದು ಆನಂದ್‌ಗೆ ವರದಾನವಾಗಿದೆ. ತುಮಕೂರು ಜಿಲ್ಲೆ ರೈತರಪಾಳ್ಯ ಗ್ರಾಮದಿಂದ ಮಹಾನಗರಿಗೆ ಉದ್ಯೋಗ ಹರಸಿ ಬಂದ ಆನಂದ್ ಐದು ವರ್ಷಗಳ ಹಿಂದೆ ಕಂಠೀರವ ಸ್ಟುಡಿಯೋ ಬಳಿ ಅಂಗಡಿ ಆರಂಭಿಸಿದರು. ವರನಟನ ಹೆಸರಿನ ಅಂಗಡಿಗೆ ಅವರ ಅಭಿಮಾನಿಗಳಲ್ಲದೆ ಬೇರೆ ಬೇರೆ ಪ್ರದೇಶಗಳಿಂದ ಬರುವ ಪ್ರವಾಸಿಗರು ಕೂಡ ಭೇಟಿ ನೀಡಿ ತಮಗಿಷ್ಟದ ಗಾಜನೂರು ಗಂಡಿನ ಚಿತ್ರಗಳನ್ನು ತಮ್ಮ ವಾಹನಗಳಿಗೆ ಹಾಕಿಸಿಕೊಳ್ಳುತ್ತಾರೆ. ಸಮಾಧಿ ಬಳಿ ಇಟ್ಟಿರುವ ನಗುಮುಖದ ಚಿತ್ರವನ್ನೇ ಹೆಚ್ಚಾಗಿ ಕೇಳುತ್ತಾರೆ ಎನ್ನುತ್ತಾರೆ ಆನಂದ್.

“ನಮ್ಮ ಕುಟುಂಬದ ಸದಸ್ಯರೆಲ್ಲರೂ ರಾಜಣ್ಣನ ಅಭಿಮಾನಿಗಳು ಹಾಗೂ ಅವರ ಪುಣ್ಯಭೂಮಿಯ ಸಮೀಪದಲ್ಲಿ ಅಂಗಡಿ ಆರಂಭಿಸಿದ್ದರಿಂದ ಅವರ ಹೆಸರನ್ನು ಇಟ್ಟೆ. ನಿತ್ಯ ಸಾವಿರದಿಂದ ಎರಡು ಸಾವಿರ ರೂಪಾಯಿ ವ್ಯಾಪಾರವಾಗುತ್ತದೆ. `ರಾಜಣ್ಣ ಮತ್ತೆ ಹುಟ್ಟಿ ಬಾ~, `ನಟ ಸಾರ್ವಭೌಮ~ `ಕನ್ನಡದ ಕಂದ~ ಹೀಗೆ ಅನೇಕ ವಾಕ್ಯಗಳನ್ನು ವಾಹನಗಳಿಗೆ ಹಾಕಿಸಿಕೊಳ್ಳುತ್ತಾರೆ” ಎಂದು ಅಭಿಮಾನದಿಂದ ಅವರು ಹೇಳುತ್ತಾರೆ.

ರಾಜ್‌ಕುಮಾರ್ ಅಗಲಿ ಆರು ವರ್ಷ ಕಳೆದಿದೆ. ಆದರೆ ಅವರ ಹೆಸರಿನ್ನೂ ಅಜರಾಮರ. ರಾಜ್‌ಕುಮಾರ್ ಹೆಸರಿನಲ್ಲಿ ಸಾವಿರಾರು ಸಂಘಗಳು ಹುಟ್ಟಿಕೊಂಡಿವೆ, ಅನೇಕರು ಮಕ್ಕಳಿಗೆ ಅವರ ಹೆಸರನ್ನೇ ನಾಮಕರಣ ಮಾಡಿದ್ದಾರೆ ಹಾಗೂ ತಮ್ಮ ಬದುಕಿನ ಬಂಡಿಯನ್ನು ಸಾಗಿಸಲು ಇಟ್ಟುಕೊಂಡ ಅಂಗಡಿ ಮುಂಗಟ್ಟುಗಳಿಗೂ ಅವರದ್ದೇ ಹೆಸರು.

2006, ಏಪ್ರಿಲ್ 12ರಂದು ರಾಜ್‌ಕುಮಾರ್ ನಿಧನರಾದರು. ಕಂಠೀರವ ಸ್ಟುಡಿಯೋದಲ್ಲಿ ಅವರ ಮೃತದೇಹದ ಸಂಸ್ಕಾರ ಮಾಡಲಾಯಿತು. ಅಂದಿನಿಂದ ಇಂದಿನವರೆಗೆ ಈ ಸ್ಥಳ ಪ್ರವಾಸಿ ತಾಣವಾಗಿಬಿಟ್ಟಿದೆ. ತಮ್ಮ ನೆಚ್ಚಿನ ನಟನ ಪುಣ್ಯಭೂಮಿ ದರ್ಶನಕ್ಕಾಗಿ ನಿತ್ಯ ನೂರಾರು ಮಂದಿ ವೀಕ್ಷಣೆಗೆ ಬರುತ್ತಾರೆ. ಇದರಿಂದ ಅನೇಕ ಮಂದಿಯ ಬದುಕಿನ ಬಂಡಿಯೂ ಸಾಗುತ್ತಿದೆ. ರಾಜ್‌ಕುಮಾರ್ ಮೃತಪಟ್ಟ ಸಂದರ್ಭದಲ್ಲಂತೂ ಅಲ್ಲಿ ತಲೆಎತ್ತಿದ ಸಣ್ಣಪುಟ್ಟ ಸಂಚಾರಿ ಅಂಗಡಿಗಳು, ತಳ್ಳುಗಾಡಿಗಳ ವ್ಯಾಪಾರಿಗಳೆಲ್ಲಾ ಅಣ್ಣಾವ್ರ ಹೆಸರನ್ನೇ ಅವುಗಳಿಗಿಟ್ಟು ಒಂದಿಷ್ಟು ಹಣ ಮಾಡಿದ್ದರು.`ಕಳೆದ ಏಳು ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿದ್ದೇನೆ. ಅಣ್ಣಾವ್ರ ನಿಧನಕ್ಕೂ ಮುಂಚೆ ಇಲ್ಲಿ ಅಷ್ಟಾಗಿ ವ್ಯಾಪಾರ ಆಗುತ್ತಿರಲಿಲ್ಲ. ಅವರು ತೀರಿಹೋದ ನಂತರ ಇಲ್ಲಿಗೆ ಅಭಿಮಾನಿಗಳು ಹೆಚ್ಚಾಗಿ ಬರಲು ಆರಂಭಿಸಿದರು. ಹೂವಿನ ವ್ಯಾಪಾರವೂ ಹೆಚ್ಚಾಗಿದೆ. ಆದರೆ, ನನ್ನಿಷ್ಟದ ನಟನನ್ನು ಕಳೆದುಕೊಂಡ ದುಃಖ ಮಾತ್ರ ಈಗಲೂ ಉಳಿದಿದೆ~ ಎಂದು ಹೇಳುತ್ತಾರೆ ವ್ಯಾಪಾರಿ ಮೀನಾಕ್ಷಿ.

ರಾಜ್‌ಕುಮಾರ್ ಪುಣ್ಯಭೂಮಿಯನ್ನು ಕರ್ನಾಟಕ ಸರ್ಕಾರ ರಾಜ್‌ಕುಮಾರ್ ಸ್ಮಾರಕ ಮಾಡಲು ಮುಂದಾಯಿತು. ಈಗ ಸಮಾಧಿಯ ಸುತ್ತ ಹಸಿರಿನ ಉದ್ಯಾನ ಎಲೆಎತ್ತಿದೆ. ಹಾಗಾಗಿ ಪ್ರತಿವರ್ಷ ರಾಜ್‌ಕುಮಾರ್ ಹುಟ್ಟುಹಬ್ಬ ಹಾಗೂ ಪುಣ್ಯತಿಥಿಯಂದು ರಸ್ತೆ ಬದಿ ವ್ಯಾಪಾರಿಗಳು ಬಂದು ಒಂದಿಷ್ಟು ಸಂಪಾದನೆ ಮಾಡಿಕೊಂಡು ನೆಮ್ಮದಿಯ ನಿಟ್ಟುಸಿರಿಡುತ್ತಾರೆ.

ರಾಜ್ ಚಿತ್ರಗಳಿರುವ ಟೀಶರ್ಟ್‌ಗಳು, ಸ್ಮರಣಿಕೆಗಳನ್ನು ಮಾರುವವರು ಆ ದಿನ ವ್ಯಾಪಾರ ಮಾಡಿಕೊಂಡು ಒಂದಿಷ್ಟು ಹಣ ಸಂಪಾದಿಸುತ್ತಾರೆ. ಕನ್ನಡ ರಾಜ್ಯೋತ್ಸವದ ದಿನ ಅಣ್ಣನ ಸಮಾಧಿ ಬಳಿ ಚಿತ್ರ ತೆಗೆಸಿಕೊಳ್ಳುವವರಿಗಾಗಿಯೇ ಫೋಟೊಗ್ರಾಫರ್‌ಗಳು ಕಾಯುತ್ತಾರೆ. ಕನ್ನಡ ಬಾವುಟ ಮಾರುವ ಚಿಣ್ಣರೂ ಇಲ್ಲಿ ಕಡಿಮೆಯೇನಿಲ್ಲ. ಇವರೆಲ್ಲರ ಪಾಲಿಗೆ ರಾಜ್‌ಕುಮಾರ್ ಬರೀ ಹೆಸರಲ್ಲ; ಬದುಕು.

ಏಪ್ರಿಲ್ 24ರಂದು ರಾಜ್‌ಕುಮಾರ್ ಜನ್ಮದಿನ. ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಅದ್ದೂರಿಯಾಗಿ ಅವರ ಜನ್ಮದಿನಾಚರಣೆ ಆಚರಿಸಲು ಮುಂದಾಗಿದೆ. ಅಂದು ಅನೇಕ ಜನರ ಪಾಲಿಗೆ ತುತ್ತಿನ ಚೀಲ ತುಂಬಿಸಿಕೊಳ್ಳುವ ದಿನವೂ ಆಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.