ರಾಣಾಪೂರ ತಾಂಡಾ: ಪುಣ್ಯಕೋಟಿ ಮಾತೃ ವಾತ್ಸಲ್ಯ!

7

ರಾಣಾಪೂರ ತಾಂಡಾ: ಪುಣ್ಯಕೋಟಿ ಮಾತೃ ವಾತ್ಸಲ್ಯ!

Published:
Updated:

ಚಿಂಚೋಳಿ: ಹಸು ಅಥವಾ ಆಕಳು ಎಂಬ ಹೆಸರಿನಿಂದ ಕರೆಯುವ ಸಾಕು ಪ್ರಾಣಿ ಪುಣ್ಯಕೋಟಿ ಕೃಷಿಕರ ಕುಟುಂಬದ ಒಡನಾಡಿ. ತನ್ನನ್ನು ಸಾಕಿ ಸಲುಹಿದ ಯಜಮಾನನಿಗೆ ಹಾಲು ಕೊಡಬೇಕು. ಹೆತ್ತ ಕಂದ(ಕರು)ನಿಗೆ ಹಾಲುಣಿಸಬೇಕು.ಇದು ಸಾಮಾನ್ಯ ಹಸುವಿನ ದಿನಚರಿ. ಆದರೆ ಇಲ್ಲಿನ ಕೃಷಿಕರ ಮನೆಯಲ್ಲಿ ಹಸುವೊಂದರ ಕೆಚ್ಚಲಿಗೆ ಪುಟ್ಟ ಮಕ್ಕಳೇ ಬಾಯಿ ಹಾಕಿ ಹಾಲು ಕುಡಿಯುತ್ತಾರೆ. ಮೇಕೆ ಮರಿಗಳು ಯಾರ ಹಂಗಿಲ್ಲದೇ ಹಸುವಿನ ಮೊಲೆ ಬಾಯಿಗೆ ಹಾಕಿಕೊಂಡು ಹಸಿವು ನೀಗಿಸಿಕೊಳ್ಳುತ್ತವೆ.ಇದೇನು ಸೋಜಿಗ ಎನಿಸುತ್ತಿದೆ ಅಲ್ಲವೇ,? ಹೌದು ವಿಚಿತ್ರವೆನಿಸಿದರೂ ಸತ್ಯ. ಇಲ್ಲಿವರೆಗೆ ಏಳು ಮಕ್ಕಳು(ಕರು)ಗಳಿಗೆ ಜನ್ಮ ನೀಡಿ ಕೃಷಿಕನ ಮನೆ ತುಂಬಿದ ಪುಣ್ಯಕೋಟಿ ಹಸು ಈಗ ಮೇಕೆ ಮರಿಗಳಿಗೆ ಹಾಗೂ ಮನೆಯ ಮಕ್ಕಳಿಗೆ ಮಹಾತಾಯಿಯಾಗಿ ಕೃಷಿಕನ ಕುಟುಂಬಕ್ಕೆ ಕಾಮಧೇನುವಾಗಿ ಗಮನ ಸೆಳೆಯುತ್ತಿದೆ.ತಾಯಿ ಮೇಕೆ ಏಕಕಾಲಕ್ಕೆ ಮೂರು ಮರಿಗಳಿಗೆ ಜನ್ಮವಿತ್ತಿದೆ. ಅದೇಕೊ ಗೊತ್ತಿಲ್ಲ ತಾಯಿಯ ಮೊಲೆಯಲ್ಲಿ ಹಾಲಿಲ್ಲ. ಆದರೆ ತನ್ನ ತಾಯಿಯ ಮೊಲೆಯಲ್ಲಿ ಹಾಲಿಲ್ಲದಿದ್ದರೇನಂತೆ ಪುಣ್ಯಕೋಟಿ ಇದೇಯಲ್ಲಾ ಎನ್ನುತ್ತಿವೆ ಈ ಮೇಕೆ ಮರಿಗಳು.! ಹೀಗಾಗಿ ಇವುಗಳಿಗೆ ತನ್ನ ತಾಯಿಗಿಂತಲೂ ಪುಣ್ಯಕೋಟಿ ಬರುವಿಕೆಯ ದಾರಿಯನ್ನೇ ಕಾಯುತ್ತಿರುತ್ತವೆ.ತಾನು ಜನ್ಮ ನೀಡಿದ ಕರು ತನ್ನ ಸುತ್ತಮುತ್ತ ತಿರುಗುತ್ತಿದ್ದರೂ ಮತ್ತು ತನ್ನ ಕಣ್ಣೆದುರು ಇದ್ದರೂ ಸಹ ಈ ಹಸು ಇತರ ಪ್ರಾಣಿಗಳಿಗೆ ಹಾಲುಣಿಸಿ ಧನ್ಯತಾ ಭಾವಕ್ಕೆ ಒಳಗಾಗುತ್ತಿದೆ.ಹೊಲಕ್ಕೆ ಮೇಯಲು ಹೋದ ಹಸು ಮನೆಗೆ ಹಿಂದಿರುಗುತ್ತಿದ್ದಂತೆ ತನ್ನ ಕರು ಹಾಗೂ ಮೇಕೆ ಮರಿಗಳು ಕೇಕೆ ಹಾಕುತ್ತವೆ. ತನ್ನ ಕರುವಿನೊಂದಿಗೆ ಮೇಕೆಗಳಿಗೆ ಹಾಲುಣಿಸುವ ಇದು ಒಂದು ಸಾಧು ಪ್ರಾಣಿ.ಹಸುವಿನ `ಸಾಧು~ತನ ತಾಂಡಾದ ಜನರಿಗೆ ಅಚ್ಚುಮೆಚ್ಚು, ಕುಟುಂಬದ ಅಕ್ಕರೆಯ ಒಡನಾಡಿಯಾಗಿ ತನ್ನ ಒಡೆಯನಿಗೆ ಹಯನು ನೀಡಿ ಎಲ್ಲರನ್ನು ತೃಪ್ತಿಪಡಿಸುತ್ತಿದೆ.ಮನೆಯ ಮಕ್ಕಳು, ಮೇಕೆ ಮರಿಗಳು ಹಾಗೂ ತನ್ನ ಕರು ಹಸುವಿನ ಕೆಚ್ಚಲಿಗೆ ಬಾಯೊಡ್ಡಿ ಹಾಲು ಕುಡಿಯುವುದನ್ನು ನೋಡಬೇಕಾದರೆ ನೀವೊಮ್ಮೆ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ರಾಣಾಪುರ ತಾಂಡಾದ ವಸಂತ ದೇವಜಿ ರಾಠೋಡ್ ಅವರ ಮನೆಗೆ ಬನ್ನಿ.ಸಂಜೆ 5ಗಂಟೆ ಅಥವಾ 5-30ರ ವೇಳೆಗೆ ಅವರ ಮನೆಯ ಅಂಗದಲ್ಲಿ ನೀವು ನಿಂತರೆ ಸಾಕು, ಪುಣ್ಯಕೋಟಿಯನ್ನು ಗಮನಿಸುವ ಮೇಕೆ ಮರಿಗಳು, ಒಂದೇ ಸಮನೇ ಕೂಗುತ್ತ ಪುಟ್ಟ ಬಾಲಾ ಅಲ್ಲಾಡಿಸುತ್ತ ಬಂದು ಆಕಳ ಕೆಚ್ಚಲಿಗೆ ಬಾಯಿ ಹಾಕುತ್ತವೆ.ಸೌಂದರ್ಯ ಹಾಳಾಗುವುದೆಂದು ವಿದ್ಯಾವಂತ ನಾರಿಯರು ಹೆತ್ತ ಕಂದಮ್ಮಗಳನ್ನೇ ಹಾಲುಣಿಸದಿರುವಾಗ ಈ ಮೂಕಜೀವಿ ಪುಣ್ಯಕೋಟಿ ಮನೆ ಮಂದಿ ಹಾಗೂ ತನ್ನ ಕರು ಮತ್ತು ಮೇಕೆ ಮರಿಗಳಿಗೆ ಹಾಲುಣಿಸಿ ಮಾದರಿಯಾಗಿದೆ ಎನ್ನುತ್ತಾರೆ, ಪ್ರಾದೇಶಿಕ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಸಂಜೀವ ಚವ್ಹಾಣ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry