ಭಾನುವಾರ, ಏಪ್ರಿಲ್ 11, 2021
22 °C

ರಾಣಿ ಮಹಾರಾಣಿ!

ಪೂರ್ವಿ Updated:

ಅಕ್ಷರ ಗಾತ್ರ : | |

ಅಂಗೈಯಗಲದ ಪೆಂಡೆಂಟ್. ಅದರ ಮೇಲೆ ಗಣೇಶ. ಅದು ನೇತುಹಾಕಿಕೊಂಡಿರುವ ಸರ ಏನಿಲ್ಲವೆಂದರೂ ಒಂದೂವರೆ ಇಂಚು ಅಗಲ. ಸರದ ಹೊಳಪು ಹೆಚ್ಚಿಸಿದ್ದು ಅದರ ಮೇಲೆ ಬಿದ್ದ ಕ್ಯಾಮೆರಾ ಫ್ಲಾಷ್ ಬೆಳಕು. ಅಲ್ಲಿಂದ ಚಿಮ್ಮಿದ್ದೆ ಬೆಳಕು ಹರಿದದ್ದು ಮೊದಲೇ ಬೆಳದಿಂಗಳಂತಿರುವ ಮುಖದತ್ತ. ಹೂವಿನ ಚಿತ್ತಾರವಿರುವ ಉದ್ದನ್ನೆ ಬಿಳಿ ಲಂಗ. ಕಪ್ಪುಬಣ್ಣದ ಕುಪ್ಪಸ. ನಡುವೆ ಮಟ್ಟಸವಾದ ಹೊಟ್ಟೆ. ಪಾದಗಳ ಗೆಜ್ಜೆಗಳೂ ದಪ್ಪಗೆ. ಫೋಟೋ ಸೆಷನ್‌ನಲ್ಲಿ ಹೀಗೆ ಕಂಡ ನಟಿಯ ವಯಸ್ಸೀಗ ಮೂವತ್ತೆರಡು. ಹೆಸರು- ರಾಣಿ ಮುಖರ್ಜಿ.‘ಬ್ಲಾಕ್’ ಸಿನಿಮಾ ಬಂದಮೇಲೆ ರಾಣಿಯ ಸದ್ದು ಕಡಿಮೆಯಾಯಿತು. ಅವರಿಗೂ ನಿರ್ದೇಶಕ ಆದಿತ್ಯ ಚೋಪ್ರಾಗೂ ಸಂಬಂಧವಿದೆ ಎಂಬ ಸುದ್ದಿ ಹೊಗೆಯಾಡತೊಡಗಿದ್ದು ಆಗಲೇ. ರಾಣಿ ಇನ್ನುಮುಂದೆ ಯಶ್ ಚೋಪ್ರಾ ಬ್ಯಾನರ್‌ನ ಚಿತ್ರಗಳಲ್ಲಿ ಮಾತ್ರ ನಟಿಸಲಿದ್ದಾರೆಂಬ ಸುದ್ದಿಯೂ ಹಬ್ಬಿತು. ಎಲ್ಲವನ್ನೂ ಕೇಳಿಸಿಕೊಂಡು ಸುಮ್ಮನಿದ್ದ ರಾಣಿ ಈಗ ತುಟಿ ಬಿಚ್ಚಿದ್ದಾರೆ. ಆದಿತ್ಯ ಚೋಪ್ರಾಗೂ ತಮಗೂ ಬೆಸೆಯಲಾಗಿರುವ ಸಂಬಂಧದ ಅರ್ಥವೇ ಬೇರೆ ಎಂದು ನಗುವ ಅವರು, ಆ ಸಂಬಂಧದ ಸ್ವರೂಪವೇನು ಎಂಬುದನ್ನು ಮಾತ್ರ ಖಾತರಿಪಡಿಸುವುದಿಲ್ಲ.ಆದಿತ್ಯ ರೊಮ್ಯಾಂಟಿಕ್ ಚಿತ್ರಗಳ ಸರದಾರ. ಈಗಲೂ ಅವರು ಒಂದು ಆಫರ್ ಎದುರಲ್ಲಿ ಇಟ್ಟರೆ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುತ್ತೇನೆ. ಅವರು, ಯಶ್ ಚೋಪ್ರಾ ಅಂಕಲ್, ಆಂಟಿ ಎಲ್ಲರನ್ನೂ ನಾನು ಗೌರವಿಸುತ್ತೇನೆ. ನಾನು ಚಿತ್ರರಂಗಕ್ಕೆ ಬಂದದ್ದು ಹದಿನೇಳನೇ ವಯಸ್ಸಿನಲ್ಲಿ. ಇನ್ನೂ ಇಪ್ಪತ್ತೂ ತುಂಬಿರಲಿಲ್ಲ; ಆಗಲೇ ನನ್ನ ಪ್ರೇಮಕಥೆಗಳ ವದಂತಿ ಗಾಳಿಗೆ ಸೇರಿತು. ಈಗ ನಾನು ಮೂವತ್ತು ದಾಟಿದ್ದೇನೆ. ನನಗಿಂತ ಹಿರಿಯರ ಸಿನಿಮಾ ಬದುಕನ್ನು ನೋಡಿದ್ದೇನೆ. ಬರುವ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳವುದು ಈಗಂತೂ ನನ್ನಿಂದ ಸಾಧ್ಯವೇ ಇಲ್ಲ. ನಾನೀಗ ಕೆರಿಯರ್‌ಮುಖಿ. ಅದಕ್ಕೇ ನಿರಾಕರಿಸುವ ಚಿತ್ರಗಳ ಸಂಖ್ಯೆ ಹೆಚ್ಚಿದೆ. ಅದನ್ನು ನಮ್ಮ ಉದ್ಯಮದವರು ಬೇರೆ ಬಣ್ಣ ಕೊಟ್ಟು ಹೇಳುತ್ತಿದ್ದಾರೆ.ಯಶ್ ಚೋಪ್ರಾ ಬ್ಯಾನರ್‌ನಲ್ಲಿ ಮಾತ್ರ ಸಿನಿಮಾ ಮಾಡುತ್ತೇನೆಂದು ನಾನೇನೂ ಒಪ್ಪಂದ ಮಾಡಿಕೊಂಡಿಲ್ಲ. ನಾನೀಗ ಒಬ್ಬ ವ್ಯಕ್ತಿಯ ಜೊತೆ ಉತ್ತಮ ಸಂಬಂಧ ಇಟ್ಟಕೊಂಡಿದ್ದೇನೆ ಎಂಬುದಂತೂ ಸತ್ಯ. ಹಾಗಂತ ಅದು ಲಿವ್-ಇನ್ ಸಂಬಂಧ ಅಲ್ಲ. ನಾನು ಮದುವೆಯ ಬಂಧವನ್ನೇ ನಂಬುವವಳು. ಕಾಲ ಕೂಡಿ ಬಂದಾಗ ಮದುವೆ ಆಗುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಐದು ವರ್ಷವಂತೂ ಮಕ್ಕಳನ್ನು ಹೆರಲಾರೆ. ಈಗಿನ ಕಾಲದಲ್ಲಿ ಅಮ್ಮನಾಗಲು ನಲವತ್ತೇ ಸರಿಯಾದ ಕಾಲವಲ್ಲವೇ? ಸಂಸಾರ, ಸಿನಿಮಾ ಎರಡರ ಮೇಲೂ ಒಂದೊಂದು ಕಾಲಿಡುವುದು ನಟಿಯರಿಗಂತೂ ತುಂಬಾ ಕಷ್ಟ. ಅದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ನಡುವೆಯೇ ಇವೆ.

 

ಅದಕ್ಕೇ ನಾನು ಈಗಲೂ ಅವಿವಾಹಿತೆ. ‘ಲಾಗಾ ಚುನರೀ ಮೇ ದಾಗ್’, ‘ಥೋಡಾ ಪ್ಯಾರ್ ಥೋಡಾ ಮ್ಯಾಜಿಕ್’, ‘ನೋ ಒನ್ ಕಿಲ್ಡ್ ಜೆಸ್ಸಿಕಾ’ ತರಹದ ಚಿತ್ರಗಳು ಚೆನ್ನಾಗಿ ಓಡಿದ್ದರೆ ಟೀಕೆ ಮಾಡುವವರ ಬಾಯಿ ಮುಚ್ಚಿರುತ್ತಿತ್ತು. ಈಗ ಮೀರಾ ಗೈಟಿ ಎಂಬ ಪತ್ರಕರ್ತೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ನಮ್ಮಲ್ಲಿ ನಟನೊಬ್ಬ ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೆ ಅದನ್ನು ಶ್ರದ್ಧೆ ಎನ್ನುತ್ತಾರೆ.ಅದನ್ನೇ ನಟಿ ಮಾಡಿದರೆ ಅವಕಾಶಗಳಿಲ್ಲ ಎಂದುಬಿಡುತ್ತಾರೆ. ಇದು ಲಿಂಗ ತಾರತಮ್ಯದ ಎಫೆಕ್ಟ್. ಈಗ ನನಗೆ ಪ್ರೇಮಾಂಕುರವಾಗಿದೆ. ಇಪ್ಪತ್ತರ ವಯಸ್ಸಿನಲ್ಲಿ ಪ್ರೇಮ ಆಗುವುದು ನಿಜವಾದ ಪ್ರೀತಿ ಅಲ್ಲ; ಅದು ಮೂರ್ಖತನ. ಮೂವತ್ತು ಪ್ರೀತಿಸಲು ಯೋಗ್ಯ ವಯಸ್ಸು. ಬದುಕಿನ ಸಾಕಷ್ಟು ಸತ್ಯಗಳ ಅರಿವು ಈ ಹಂತದಲ್ಲಿ ನಮಗೆ ಆಗಿರುತ್ತದೆ... ಹೀಗೆ ತತ್ತ್ವ, ಅನುಭವ, ಬೇಸರ, ಸಿಟ್ಟು, ಬಯಕೆ ಎಲ್ಲವನ್ನೂ ಚೆಲ್ಲುವ ರಾಣಿ ಮುಖದ ಮೇಲೆ ಮಾತ್ರ ಅದೇ ಸುಂದರ ನಗು. ಕಣ್ಣಲ್ಲಿ ಬಯಕೆಯ ತೋಟ. ಅದಕ್ಕೆ ಅವರೇ ಹಾಕಿದ ಬೇಲಿ!

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.