ಬುಧವಾರ, ಜೂನ್ 16, 2021
23 °C
ರಸ್ತೆಯಲ್ಲಿ ಸಹಕಾರ ತತ್ವದಿಂದ ಜೀವನ ಭದ್ರ

ರಾತ್ರಿ ಓವರ್‌ಟೇಕ್‌–ನಿಯಮ ಎಂಬುದೇ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಸ್ತೆಯಲ್ಲಿ ‘ನಾನೇ ಮೊದಲು’ ಎಂಬ ಮನೋಭಾವದ ಬದಲಿಗೆ ‘ನೀವು ಮೊದಲು’ ಎಂಬ ಮನೋ­ಭಾವ ಬೆಳೆಸಿಕೊಂಡಾಗ ಅಪಘಾತಗಳ ಪ್ರಮಾಣ ಕಡಿಮೆಯಾಗುತ್ತದೆ. ರಾತ್ರಿ ಹೊತ್ತಲ್ಲಂತೂ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಅತ್ಯಂತ ಜಾಗರೂಕತೆಯಿಂದ ಸವಾರಿ ನಡೆಸಬೇಕು, ಅಪಘಾತ ಸಂಭವಿಸಿದರೆ ತ್ವರಿತವಾಗಿ ವೈದ್ಯಕೀಯ ಉಪಚಾರ ಸಿಗದೆ ಬದುಕಿ ಉಳಿಯುವವರೂ ಸಾವನ್ನಪ್ಪ­ಬೇಕಾಗುತ್ತದೆ...ಇಂತಹ ಮಹತ್ವದ ಮಾಹಿತಿಯನ್ನು ನೀಡಿದವರು ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯ ಸಹಾಯಕ ಆರ್‌ಟಿಒ ಜಿ.ಎಸ್‌.ಹೆಗಡೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಮ್ಮಿಕೊಂಡಿರುವ ಕಾನೂನು ನೆರವು ಅಭಿಯಾನದ ಅಂಗವಾಗಿ ಮೋಟಾರು ವಾಹನ ಕಾಯ್ದೆ ಮತ್ತು ಇತರ ಮೋಟಾರು ವಾಹನ ನಿಯಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ರಾತ್ರಿ ವಾಹನವನ್ನು ಹಿಂದಿಕ್ಕಿ ಮುಂದೆ ಹೋಗುವ ಸಂದರ್ಭ ವಾಹನಗಳು ಎಂತಹ ನಿಯಮ ಪಾಲಿಸಬೇಕು ಎಂಬುದಕ್ಕೆ ದೇಶದಲ್ಲಿ ಇದುವರೆಗೂ ಯಾವುದೇ ನಿಯಮ ರೂಪುಗೊಂಡಿಲ್ಲ. ಇಂತಹ ಲೋಪಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಮರಗಳು ಬಿದ್ದು ವಾಹನ, ಜೀವಕ್ಕೆ ಹಾನಿಯಾಗುವುದನ್ನು ತಪ್ಪಿಸಲು, ನಗರ ಪ್ರದೇಶಗಳಲ್ಲಿ ಬೀಳುವ ಸ್ಥಿತಿಯಲ್ಲಿರುವ ಮರಗಳು, ಕೊಂಬೆಗಳನ್ನು ಕಡಿಯಲು ಇಲಾಖೆ­ಗಳು ಸಹಕರಿಸಬೇಕು. ಈಗ ಇರುವ ನಿಯಮಗಳನ್ನು ಸಮರ್ಪಕ­ವಾಗಿ ಅನುಸರಿಸಿದರೆ ಗಣನೀಯ ಪ್ರಮಾಣದಲ್ಲಿ ಅಪಘಾತ­ಗಳನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದರು.ರಾತ್ರಿ ಹೆಡ್‌ಲೈಟ್‌ ಡಿಮ್‌–ಡಿಪ್‌ ಮಾಡುವಲ್ಲಿ ಸಹ ಯಾವುದೇ ನಿಯಮ ಇಲ್ಲ, ಮತ್ತೊಂದು ವಾಹನದ ಹಿತದೃಷ್ಟಿಯಿಂದ ನಾವೇ ರೂಢಿಸಿಕೊಳ್ಳಬೇಕಾದ ನಿಯಮ ಇದು. ಪ್ರತಿಯೊಂದು ವಿಚಾರದಲ್ಲೂ ಪೊಲೀಸರು ನಿಗಾ ಇಟ್ಟುಕೊಳ್ಳುವುದು ಅಸಾಧ್ಯ. ಹೀಗಾಗಿ ಚಾಲನೆ ಮಾಡುವಾಗ ಸಹಕಾರ ತತ್ವ ಬಹಳ ಮುಖ್ಯ ಎಂದು ತಿಳಿಸಿದರು.ಚಾಲಕರಿಗೆ ಮಹತ್ವದ ಟಿಪ್ಸ್‌

ಪರವಾನಗಿ ಇಲ್ಲದವರಿಗೆ ವಾಹನ ಕೊಡಬೇಡಿ, ಚಾಲನಾ ಪರವಾನಗಿಯ ಮೂಲ ಪ್ರತಿಯನ್ನು ಸದಾ ನಿಮ್ಮ ಜತೆಗೇ ಇಟ್ಟುಕೊಳ್ಳಿ, ವಾಹನದ ದಾಖಲೆಗಳ ಜೆರಾಕ್ಸ್‌ ಇದ್ದರೆ ಸಾಕು, ಮೂಲಪ್ರತಿ ವಾಹನದಲ್ಲಿ ಇಟ್ಟುಕೊಂಡರೆ ವಾಹನ ಕಳವಾದರೆ ಕಳ್ಳರಿಗೆ ಮೂಲಪ್ರತಿ ಸಿಕ್ಕಿ ತೊಂದರೆ ಉಂಟಾಗಬಹುದು. ವಾಹನದಲ್ಲಿ ಚಾಲಕರ ಹೊರತು ಇತರ ಯಾರೂ ಸಿಗ್ನಲ್‌ ಕೊಡಲು ಹೋಗಲೇಬಾರದು.ಇಂಡಿಕೇಟರ್‌ ಜತೆಗೆ ಕೈಯಲ್ಲಿ ಸಿಗ್ನಲ್‌ ಕೊಟ್ಟರೆ ಉತ್ತಮ. ರಾತ್ರಿ ದ್ವಿಚಕ್ರ ವಾಹನ ಸವಾರರು ಗರಿಷ್ಠ 30ರಿಂದ 40 ಕಿ.ಮೀ. ವೇಗದಲ್ಲಿ ಹೋದರೆ ಮಾತ್ರ ವಾಹನದ ಮೇಲೆ ನಿಯಂತ್ರಣ ಹೊಂದಿರಲು ಸಾಧ್ಯ. ರಾತ್ರಿ ಕಪ್ಪು ಬಟ್ಟೆ ಧರಿಸಿ ವಾಹನ ಸವಾರಿ ಬೇಡ. ಫಸ್ಟ್‌ ಪರ್ಸನ್‌ ವಿಮೆಯನ್ನೇ ಮಾಡಿಸಿಬಿಡಿ. ವಿಮೆ ಅವಧಿ ಮೀರದಂತೆ ನೋಡಿಕೊಳ್ಳಿ. ಆರೋಗ್ಯವಾಗಿ ಇದ್ದರೆ 100 ವರ್ಷ ಮೀರಿದವರೂ ಚಾಲನಾ ಪರವಾನಗಿ ನವೀಕರಿಸಬಹುದು. ಟೆಂಪೊ, ಲಾರಿಗಳಲ್ಲಿ ಜನರನ್ನು ಸಾಗಿಸಲೇಬಾರದು. ಬಸ್‌ಗಳಲ್ಲಿ ಟಯರ್‌ ಅನ್ನು ಒಳಗೆ ಇಟ್ಟುಕೊಳ್ಳಬಾರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.